ADVERTISEMENT

ಕಮಲಾಪುರ: ದ್ವಿಪಥ– ಎಲ್‌ಇಡಿ ಬಲ್ಬ್‌ ಅಳವಡಿಕೆ

ನಾಲ್ಕನೇ ವಾರ್ಡ್‌: ವಾರಕೊಮ್ಮೆ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 4:50 IST
Last Updated 1 ಆಗಸ್ಟ್ 2025, 4:50 IST
ಧಾರವಾಡದ ಕಮಲಾಪುರದ ದ್ವಿಪಥದ ವಿಭಜಕದ ವಿದ್ಯುತ್‌ ಕಂಬಗಳಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಸಲಾಗಿದೆ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಕಮಲಾಪುರದ ದ್ವಿಪಥದ ವಿಭಜಕದ ವಿದ್ಯುತ್‌ ಕಂಬಗಳಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಸಲಾಗಿದೆ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ   

ಧಾರವಾಡ: ನಗರದ ನಾಲ್ಕನೇ ವಾರ್ಡ್‌ನಲ್ಲಿ ಯಾದವಾಡ ಮುಖ್ಯರಸ್ತೆಯ (ಕಮಲಾಪುರ ಬಡಾವಣೆ) ದ್ವಿಪಥದ ವಿಭಜಕದಲ್ಲಿ ಬೀದಿದೀಪಗಳನ್ನು (ಎಲ್‌ಇಡಿ ಬಲ್ಬ್‌) ಅಳವಡಿಸಿದ್ದು, ಉದ್ಘಾಟನೆಗೆ ಸಿದ್ಧತೆ ನಡೆದಿದೆ.

ಮೂರು ಮತ್ತು ನಾಲ್ಕನೇ ವಾರ್ಡ್‌ ಭಾಗದಲ್ಲಿ ಹಾದು ಹೋಗಿರುವ ದ್ವಿಪಥದ ಪ್ರವೇಶ ಭಾಗದಲ್ಲಿ ಪತ್ರೇಶ್ವರ ಮಹಾದ್ವಾರ ನಿರ್ಮಿಸಲಾಗಿದೆ. ನಾಲ್ಕನೇ ವಾರ್ಡ್‌ನ ಕಮಲಾಪುರದ ಸರ್ಕಾರಿ ಪ್ರೌಢಶಾಲೆ ಪಕ್ಕ, ಕಾಯಕ ನಗರದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.

ನಾಲ್ಕನೇ ವಾರ್ಡ್‌ ಕೆಲವೆಡೆ ಹಳ್ಳಿಯ ಚಹರೆ ಇದೆ. ಹುಲ್ಲಿನ ಬಣವೆಗಳು, ಕೊಟ್ಟಿಗೆ, ತೋಟ ಇವೆ. ಕೆಲ ಮನೆಗಳಲ್ಲಿ ಜಾನುವಾರುಗಳು (ಹಸು, ಎಮ್ಮೆ, ಎತ್ತು) ಇವೆ.

ADVERTISEMENT

ಈ ವಾರ್ಡ್‌ನಲ್ಲಿ ಗಟಾರ ನಿರ್ವಹಣೆ ಸಮಸ್ಯೆ ಇದೆ. ಬಹಳಷ್ಟು ಕಡೆ ಗಟಾರಗಳಲ್ಲಿ ಕಸ, ಕಡ್ಡಿ, ಹೂಳು ಇದೆ. ರಭಸವಾಗಿ ಮಳೆ ಸುರಿದಾಗ ಕೆಲವೆಡೆ ಚರಂಡಿ ನೀರು ರಸ್ತೆಗೆ ಹೊರಳುವ ಸಮಸ್ಯೆ ಇದೆ.  ಈ ವಾರ್ಡ್‌ನಲ್ಲಿ ವಾರಕೊಮ್ಮೆ ನೀರು ಪೂರೈಕೆ, ಗಟಾರ ಅವ್ಯವಸ್ಥೆ ಮೊದಲಾದ ಸಮಸ್ಯೆಗಳು ಇವೆ.

ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇದೆ. ಈ ವಾರ್ಡ್‌ನಲ್ಲಿ 24X7 ನೀರು‌ ಪೂರೈಕೆ ಯೋಜನೆ ಕಾರ್ಯಗತವಾಗಿಲ್ಲ. ನೀರು ಬಂದಾಗ ಐದಾರು ದಿನಗಳಿಗಾಗುವಷ್ಟು ನೀರನ್ನು ಡ್ರಮ್ಮುಗಳಲ್ಲಿ, ತೊಟ್ಟಿಗಳಲ್ಲಿ ತಂಬಿಡಬೇಕಾದ ಸ್ಥಿತಿ ಇದೆ.

‘ವಾರ್ಡ್‌ನಲ್ಲಿ ಕಸ ಸಂಗ್ರಹಕ್ಕೆ ವಾಹನಗಳು ಬರುತ್ತವೆ. ಹಲವೆಡೆ ಸಿಮೆಂಟ್‌ ರಸ್ತೆ ನಿರ್ಮಿಸಲಾಗಿದೆ’ ಎಂದು ಕಮಲಾಪುರದ ನಿವಾಸಿ ಶಕುಂತಲಾ ಹಿಪ್ಪರಗಿ ತಿಳಿಸಿದರು.

ಕಮಲಾಪುರದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ಇದೆ. ಈ ಶಾಲೆಗೆ ಮೈದಾನ ಕಲ್ಪಿಸಬೇಕು ಎಂಬುದು ನಿವಾಸಿಗಳ ಮೊರೆ.

‘ದ್ವಿಪಥದ (ಡಬಲ್‌ ರೋಡ್‌) ವಿಭಜಕದ ಕಂಬಗಳಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಕಾಮಗಾರಿ ಬಹುತೇಕ ಮುಗಿದಿದೆ. ಶೀಘ್ರದಲ್ಲಿ ಉದ್ಘಾಟನೆ ನೆರವೇರಿಸಲಾಗುವುದು. ವಾರ್ಡ್‌ನ ಎಲ್ಲ ಬೀದಿದೀಪಗಳಿಗೂ ಎಲ್‌ಇಡಿ ಬಲ್ಬ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಮೂರು ಕಡೆ ಗಟಾರ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಕಮಲಾಪುರದಲ್ಲಿ ರೈತ ಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಂಥಾಲಯಕ್ಕೆ ಹೊಸ ಕಟ್ಟಡ ನಿರ್ಮಿಸಲು ಅನುದಾನ ಮಂಜೂರಾಗಿದೆ’ ಎಂದು ಪಾಲಿಕೆ ಸದಸ್ಯ ರಾಜಶೇಖರ ಕಮತಿ ತಿಳಿಸಿದರು.

ರಾಜಶೇಖರ ಕಮತಿ
ಮಹದೇವ ಬಾಬರ್‌
ಗಟಾರದ ಹೂಳು ತೆಗೆಸಲು ಕ್ರಮವಹಿಸಬೇಕು. ಕೆಲವೆಡೆ ಬೀದಿದೀಪ ಬಲ್ಬ್‌ಗಳು ಹಾಳಾಗಿವೆ ಹೊಸ ಬಲ್ಬ್‌ಗಳನ್ನು ಅಳವಡಿಸಬೇಕು.
ಮಹದೇವ ಬಾಬರ್‌ ಆಟೋ ರಿಕ್ಷಾ ಚಾಲಕ ಕಮಲಾಪುರ
ವಿವಿಧ ಯೋಜನೆಗಳಡಿ ಅನುದಾನ ಮಂಜೂರು ಮಾಡಿಸಿ ವಾರ್ಡ್‌ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ವಾರ್ಡ್‌ನಲ್ಲಿ 24X7 ನೀರು ಪೂರೈಕೆ ನಿಟ್ಟಿನಲ್ಲಿ ಪೈಪ್‌ ಅಳವಡಿಸಲಾಗಿದೆ ಆರು ತಿಂಗಳಲ್ಲಿ ಕಾರ್ಯಗತಗೊಳಿಸಲಾಗುವುದು.
ರಾಜಶೇಖರ ಕಮತಿ ಸದಸ್ಯ 4ನೇ ವಾರ್ಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.