ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ: ‘ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿವೃತ್ತಿ ವೇತನ ಪಾವತಿಗೆ ಹಣಕಾಸಿನ ಕೊರತೆ ಎದುರಾಗಿದೆ. ಆಂತರಿಕ ಸಂಪನ್ಮೂಲ ಹೊಂದಿಸಿ ಈವರೆಗೆ ಪಿಂಚಣಿ ಪಾವತಿಸಲಾಗಿದೆ. ಮುಂದಿನ ತಿಂಗಳು ವೇತನ ನೀಡಲು ಹಣ ಇಲ್ಲ’ ಎಂದು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ. ಕೃಷ್ಣಮೂರ್ತಿ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯದ ಎಲ್ಲ ಆಂತರಿಕ ಸಂಪನ್ಮೂಲವನ್ನು ಪಿಂಚಣಿಗೆ ಬಳಸಲಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದರು.
‘1,800 ನಿವೃತ್ತ ನೌಕರರ ಪಿಂಚಣಿಗೆ ತಿಂಗಳಿಗೆ ₹9 ಕೋಟಿ, ವರ್ಷಕ್ಕೆ ₹126 ಕೋಟಿ ಅನುದಾನ ಬೇಕು. ಸರ್ಕಾರ ಒಮ್ಮೆ ₹ 50 ಕೋಟಿ, ಮತ್ತೊಮ್ಮೆ ₹20 ಕೋಟಿ ನೀಡಿದೆ. ಪಿಂಚಣಿ ಬಾಬ್ತಿಗೆ ಇನ್ನೂ ₹50 ಕೋಟಿ ಅನುದಾನ ಬೇಕಿದೆ’ ಎಂದರು.
‘ವಿಶ್ವವಿದ್ಯಾಲಯದ ನೌಕರರಿಗೆ ಎಚ್ಆರ್‌ಎಂಎಸ್ ಮೂಲಕ ಸರ್ಕಾರ ವೇತನ ಪಾವತಿಸುತ್ತಿದೆ. ಪಿಂಚಣಿ ನೀಡುವ ನಿಟ್ಟಿನಲ್ಲಿ ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಸ್ಪಂದನೆ ಸಿಗುತ್ತಿಲ್ಲ. ಇನ್ನೊಂದು ವಾರದಲ್ಲಿ ಬೆಂಗಳೂರಿಗೆ ನಿಯೋಗದೊಂದಿಗೆ ತೆರಳಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.