ADVERTISEMENT

ಧಾರವಾಡ: ಜಾನುವಾರು ಗಣತಿ ಶೇ80 ರಷ್ಟು ಪೂರ್ಣ

ಕಲಾವತಿ ಬೈಚಬಾಳ
Published 19 ಮಾರ್ಚ್ 2025, 5:13 IST
Last Updated 19 ಮಾರ್ಚ್ 2025, 5:13 IST
ಜಾನುವಾರು ಗಣತಿ
ಜಾನುವಾರು ಗಣತಿ   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ನಡೆದಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯ ಶೇ 80ರಷ್ಟು ಪೂರ್ಣಗೊಂಡಿದ್ದು, ಇದೇ ಮೊದಲ ಬಾರಿಗೆ ಮೊಬೈಲ್‌ ಆ್ಯಪ್‌ ಮೂಲಕ ನಿಖರ ಮಾಹಿತಿ ಕಲೆಹಾಕುವ ಕಾರ್ಯ ಭರದಿಂದ ಸಾಗಿದೆ.

‘ಈ ಮೊದಲಿನ ಗಣತಿಗಳಲ್ಲಿ ಸಂದರ್ಶಕರು ಮನೆಮನೆಗೆ ತೆರಳಿ ರೈತರು ನೀಡಿದ ಮಾಹಿತಿಯನ್ನು ಪುಸ್ತಕದಲ್ಲಿ ನಮೂದಿಸುತ್ತಿದ್ದರು. ಅದನ್ನು ಕ್ರೋಡೀಕರಿಸಿ ಸಮಗ್ರ ವರದಿ ಸಿದ್ಧಪಡಿಸುವಲ್ಲಿ ತಿಂಗಳುಗಳೇ ಹಿಡಿಯುತ್ತಿತ್ತು. ಇದೇ ಮೊದಲ ಬಾರಿಗೆ ಮೊಬೈಲ್‌ ಆ್ಯಪ್‌ ಅನ್ನು ಗಣತಿಗೆ ಬಳಸುತ್ತಿದ್ದು, ಕೇಂದ್ರ ಪಶುಸಂಗೋಪನಾ ಇಲಾಖೆಯು ಈ ಗಣತಿಗೆ ‘21ನೇ ಲೈವ್ ಸ್ಟಾಕ್ ಸೆನ್ಸಸ್’ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿದೆ. ಇದರಿಂದ ಸ್ಥಳದಲ್ಲೇ ಕ್ಷಣ ಮಾತ್ರದಲ್ಲಿ ಎಲ್ಲ ಮಾಹಿತಿಗಳನ್ನು ದಾಖಲಿಸಲಾಗುತ್ತಿದೆ. ಗಣತಿ ಪೂರ್ಣಗೊಂಡ ಮರುದಿನವೇ ಸಮಗ್ರ ಮಾಹಿತಿ ಸಿಗಲಿದೆ’ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘29 ಮೇಲ್ವಿಚಾರಕರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 129 ಜನ ಗಣತಿದಾರರು ಇದ್ದಾರೆ. ಪ್ರತಿ ಮನೆಯ ಸಮೀಪವೇ ಆನ್‌ಲೈನ್‌ನಲ್ಲಿ ಗಣತಿ ಅಂಶಗಳನ್ನು ಸೇರಿಸುವುದರಿಂದ ನಿಖರ ಮಾಹಿತಿ ದೊರೆಯಲಿದೆ’ ಎಂದು ತಿಳಿಸಿದರು.

ADVERTISEMENT

ಐದು ವರ್ಷಗಳ ಬಳಿಕ ಗಣತಿ: ದೇಶದಲ್ಲಿ ಏಕಕಾಲಕ್ಕೆ ಪ್ರತಿ 5 ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆದಿದೆ. ಈವರೆಗೆ 20 ಗಣತಿಗಳು ಪೂರ್ಣಗೊಂಡಿವೆ. 2019ರಲ್ಲಿ ದೇಶದಲ್ಲಿ ಕಡೆಯ ಬಾರಿಗೆ ಜಾನುವಾರು ಗಣತಿ ನಡೆದಿತ್ತು. ಅದಾದ ಐದು ವರ್ಷಗಳ ಬಳಿಕ ಮತ್ತೆ ಗಣತಿ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿನ 4 ಲಕ್ಷ 22 ಸಾವಿರಕ್ಕೂ ಅಧಿಕ ಮನೆಗಳಲ್ಲಿನ ಜಾನುವಾರುಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳು, ಲಸಿಕೆ ಮೊದಲಾದ ಕಾರ್ಯಕ್ರಮಗಳಿಗೆ ಈ ಗಣತಿ ಅನುಕೂಲ ಆಗಲಿದೆ.

ಕಳೆದ ವರ್ಷ ಡಿಸೆಂಬರ್‌ 25ರಿಂದ ಗಣತಿ ಕಾರ್ಯ ಆರಂಭಿಸಲಾಗಿದ್ದು, ಫೆಬ್ರುವರಿ ಅಂತ್ಯಕ್ಕೆ ಮುಗಿಯಬೇಕಿತ್ತು. ಮೊಬೈಲ್‌ ಆ್ಯಪ್‌ ನಿಧಾನವಾಗಿ ಕಾರ್ಯ ನಿರ್ವಹಿಸುತ್ತಿದ್ದರಿಂದ, ಮೊದಲಾದ ಕಾರಣಗಳಿಗೆ ಗಣತಿಯಲ್ಲಿ ವಿಳಂಬವಾಗಿದ್ದು, ಕೇಂದ್ರ ಸರ್ಕಾರ ಅವಧಿಯಲ್ಲಿ ಮಾರ್ಚ್‌ ಅಂತ್ಯದವರೆಗೆ ವಿಸ್ತರಿಸಿದೆ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.