ADVERTISEMENT

ಧಾರವಾಡ: ನದಾಫ/ಪಿಂಜಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 12:38 IST
Last Updated 20 ಫೆಬ್ರುವರಿ 2026, 12:38 IST
   

ಧಾರವಾಡ: ‘ನದಾಫ/ಪಿಂಜಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸಿದ್ಧಪಡಿಸಿ ಕುಲಪತಿಯವರಿಗೆ ನೀಡಲಾಗಿದೆ. ಕುಲಪತಿಯವರು ಸರ್ಕಾರಕ್ಕೆ ಸಲ್ಲಿಸುವರು’ ಎಂದು ಅಧ್ಯಯನ ಯೋಜನೆ ನಿರ್ದೇಶಕ ಕರ್ನಾಟಕ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಪ್ರೊ.ಟಿ.ಟಿ.ಬಸವನಗೌಡ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನದಾಫ/ಪಿಂಜಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಮಾಡಲು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯು (ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ) ವಿಶ್ವವಿದ್ಯಾಲಯಕ್ಕೆ ತಿಳಿಸಿತ್ತು. ₹ 45 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. 23 ಮಂದಿ ತಂಡವು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ.ಸಮುದಾಯದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಾನಮಾನ ಹಾಗೂ ಹುಟ್ಟು ಮತ್ತು ಸಾವಿನ ನಡುವಿನ ಆಚರಣೆಗಳ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದ 25 ಜಿಲ್ಲೆಗಳಲ್ಲಿಅಧ್ಯಯನ ನಡೆಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ 250 ಕುಟುಂಬ ಸಮೀಕ್ಷೆ ಮಾಡಿದ್ದೇವೆ. ಉತ್ತರ, ಮಧ್ಯ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಈ ಸಮುದಾಯದವರು ಹೆಚ್ಚು ಇದ್ದಾರೆ. ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮುದಾಯದವರು ಹೇರಳವಾಗಿ ಇಲ್ಲ. ಹೀಗಾಗಿ, ಈ ಐದು ಜಿಲ್ಲೆಗಳಲ್ಲಿ ಅಧ್ಯಯನ ಮಾಡಿಲ್ಲ’ ಎಂದು ಮಾಹಿತಿ ನೀಡಿದರು.

ADVERTISEMENT

‘ನದಾಫ/ಪಿಂಜಾರ ಸಮುದಾಯದ ಮೂಲ ಕುಲಕಸುಬು ಹಾಸಿಗೆ (ಗಾದಿ) ತಯಾರಿಸುವುದು. ಹಾಸಿಗೆ ಕಂಪನಿಗಳು ಹೆಚ್ಚಾಗಿ ಕಸುಬು ಸಂಕಷ್ಟದಲ್ಲಿದೆ. ಸಮುದಾಯದ ಬಹುತೇಕರಿಗೆ ಸ್ವಂತ ಸೂರು ಇಲ್ಲ. ಬಹುತೇಕರು ಕೊಳೆಗೇರಿಗಳಲ್ಲಿ ವಾಸ ಇದ್ಧಾರೆ. ನಿ‌ಕೃಷ್ಟ ಸ್ಥಿತಿಯಲ್ಲಿ ಇದ್ಧಾರೆ. ಕೆಲವರು ಜೀವನೋಪಾಯಕ್ಕೆ ಗಾರೆ ಕೆಲಸ, ಬೀಡಿ ಕಟ್ಟುವುದು ಮೊದಲಾದವನ್ನು ಅವಲಂಬಿಸಿದ್ಧಾರೆ’ ಎಂದು ತಿಳಿಸಿದರು.

‘ಈ ಸಮುದಾಯವನ್ನು ಪ್ರವರ್ಗ1 ಕ್ಕೆ ಸೇರಿಸಲಾಗಿದೆ. ಈ ಸಮುದಾಯದವರು ಮುಸ್ಲಿಮರು (ಅಲ್ಪಸಂಖ್ಯಾತ) ಪ್ರವರ್ಗ1‌ರಲ್ಲಿ ಕೆಲವೆಡೆ ಪರಿಗಣಿಸದ ಸಮಸ್ಯೆ ಇದೆ. ಸಮುದಾಯದಲ್ಲಿ ರಾಜಕೀಯು ಪ್ರಾತಿನಿಧ್ಯ ಇಲ್ಲ. ಶಿಕ್ಷಣ ಪಡೆದವರು ಬಹುಳ ಕಡಿಮೆ ಇದ್ಧಾರೆ’ ಎಂದು ತಿಳಿಸಿದರು.

ಸರ್ಕಾರವು ನೇಕಾರ, ದುರುಗಮುರುಗ, ದರವೇಶ ಮತ್ತು ಬೈರಾಗಿ ಸಮುದಾಯಗಳ ಅಧ್ಯಯನ ಮಾಡುವಂತೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ತಿಳಿಸಿದೆ. ಈ ಅಧ್ಯಯನ ಯೋಜನೆಗಳಿಗೆ ₹ 1 ಕೋಟಿ ಮಂಜೂರಾಗಿದೆ.
–ಪ್ರೊ.ಎ.ಎಂ.ಖಾನ್‌, ಕುಲಪತಿ, ಕರ್ನಾಟಕ ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.