
ಧಾರವಾಡದ ಜುಬಿಲಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಕ್ಸಾ ಅಧ್ಯಕ್ಷ ಕಾಂತಕುಮಾರ್ ಮಾತನಾಡಿದರು
–ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ಚಿತ್ರಗಳನ್ನು ದಹಿಸಿದರು. ಬಿಜೆಪಿ ಸಂಸದರು, ಶಾಸಕರ ಚಿತ್ರಗಳಿದ್ದ ಬ್ಯಾನರ್ ಗಳನ್ನು ಹರಿದು ಹಾಕಿದರು.
‘ಭ್ರಷ್ಟಾಚಾರ ಮುಕ್ತವಾಗಿ ನೇಮಕಾತಿ ನಡೆಸಿ’, ‘ಯುವಜನರಿಗೆ ಕೆಲಸ ಕೊಡಿ’ ಪ್ರತಿಭಟನೆಗೆ ದನಿಗೂಡಿಸಿ ಸೇರಿದ್ದ ವಿದ್ಯಾರ್ಥಿಗಳು, ಯುವಜನರು ಘೋಷಣೆಗಳನ್ನು ಕೂಗಿದರು.
ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿಭಟನೆ ನಡೆಯಿತು. ಬಹುತೇಕ ಕಡೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಹಿಂಪಡೆಯಲ್ಲ ಎಂದು ಘೋಷಿಸಿದರು. ಕೆಲ ಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣ ವಾಯಿತು. ಜುಬಿಲಿ ವೃತ್ತದಲ್ಲಿ ಪೊಲೀಸರು ಗುಂಪು ಚದುರಿಸಲು ಲಾಠಿ ಬೀಸಿದರು.
ಜುಬಿಲಿ ವೃತ್ತದ ಕಡೆಗೆ ನುಗ್ಗಲು ಮುಂದಾದ ಪ್ರತಿಭಟನಾಕಾರರತ್ತ ಪೊಲೀಸರು ಲಾಠಿ ಬೀಸಿದರು
ಶ್ರೀನಗರ ವೃತ್ತದಿಂದ ಬೆಳಿಗ್ಗೆ 10.15ಕ್ಕೆ ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ ನೇತೃತ್ವದಲ್ಲಿ ಆರಂಭಗೊಂಡ ಮೆರವಣಿಗೆ ಜಯನಗರ ವೃತ್ತಕ್ಕೆ ತಲುಪಿದಾಗ, ಹೋರಾಟದ ಗೀತೆಗಳನ್ನು ಹಾಡಲಾಯಿತು. ಅಲ್ಲಲ್ಲಿ ಕೆಲವರು ನೀರಿನ ಬಾಟೆಲ್, ಚಪ್ಪಲಿ, ಭಿತ್ತಿಪತ್ರಗಳನ್ನು ತೂರಿದರು. ತಳ್ಳಾಟ–ನೂಕಾಟ ಆಯಿತು.
ಜಯನಗರ ವೃತ್ತದಿಂದ ಪ್ರತಿಭಟನಾಕಾರರ ಒಂದು ಗುಂಪು ಜುಬಿಲಿ ವೃತ್ತದತ್ತ ಸಾಗಿದರೆ, ಮತ್ತೊಂದು ಗುಂಪು ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿದ್ದ ಮಿಚಿಗನ್ ಕಾಂಪೌಂಡ್ ಉದ್ಯಾನಕ್ಕೆ ಸಾಗಿತು.
ಆರ್.ಅಶೋಕ, ಛಲವಾದಿ ನಾರಾಯಣ ಸ್ವಾಮಿ ಅವರು ಪುನಃ ಜುಬಿಲಿ ವೃತ್ತಕ್ಕೆ ಬಂದು, ಭಾಷಣಕ್ಕೆ ಮುಂದಾದರು. ಪ್ರತಿಭಟನಕಾರರು ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಅವರಿಬ್ಬರೂ ಅಲ್ಲಿಂದ ಹೊರಟರು. ನಂತರ ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಬಿಜೆಪಿ ನಾಯಕ ಭರತ್ ಬೊಮ್ಮಾಯಿ ಕೆಲ ನಿಮಿಷಗಳಷ್ಟೇ ಮಾತನಾಡಿದರು. ಅವರಿಗೂ ತೀವ್ರ ವಿರೋಧ ವ್ಯಕ್ತವಾಯಿತು.
ಜುಬಿಲಿ ವೃತ್ತಕ್ಕೆ ಬಂದ ಜಿಲ್ಲಾಧಿಕಾರಿ ಸ್ನೇಹಲ್ ಆರ್., ‘ನೀವು ಪ್ರತಿಭಟನೆ ನಡೆಸಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಲಾಗುವುದು’ ಎಂದರು. ಆದರೂ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು, ‘ಮನೆಯಲ್ಲಿ ಮಗುವನ್ನು ಬಿಟ್ಟು ಪ್ರತಿಭಟನೆಗೆ ಬಂದಿದ್ದೇನೆ. ಸರ್ಕಾರ ನೇಮಕಾತಿ ಆರಂಭಿಸಬೇಕು. ನಮ್ಮ ಸಂಕಷ್ಟಗಳನ್ನು ಪರಿಹರಿಸಬೇಕು’ ಎಂದು ಕಣ್ಣೀರಿಟ್ಟರು.
ಜಿಲ್ಲಾಧಿಕಾರಿಯವರು ಮನವಿಪತ್ರ ಸ್ವೀಕರಿಸಿ ನಿರ್ಗಮಿಸಿದ ಬಳಿಕ, ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು. ಅಕ್ಸಾ ಅಧ್ಯಕ್ಷ ಕಾಂತಕುಮಾರ ಅವರನ್ನು ವಶಕ್ಕೆ ಪಡೆದರು. ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಇತರ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಿದರು.
ಒಳ ಮೀಸಲಾತಿ ಕಾರಣದಿಂದ ನೇಮಕಾತಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ನಡೆಯುತ್ತಿದೆ. ಎರಡೂವರೆ ವರ್ಷದಲ್ಲಿ40 ಸಾವಿರಕ್ಕೂ ಹೆಚ್ಚು ನೇಮಕಾತಿ ಮಾಡಲಾಗಿದೆ. ಉಳಿದ ಹುದ್ದೆಗಳನ್ನು ಪಾರದರ್ಶಕವಾಗಿ ಕಾಲಮಿತಿ ಒಳಗೆ ಭರ್ತಿ ಮಾಡಲಾಗುವುದುಸಿದ್ದರಾಮಯ್ಯ, ಮುಖ್ಯಮಂತ್ರಿ
ಬಿಜೆಪಿಯವರು ತಮ್ಮ ಅವಧಿಯಲ್ಲಿ ಹುದ್ದೆಗಳನ್ನು ಯಾಕೆ ಭರ್ತಿ ಮಾಡಲಿಲ್ಲ? ನಿರುದ್ಯೋಗಿ ಯುವಕರಿಗೆ ತೊಂದರೆ ಆಗಬಾರದೆಂದು ಯುವನಿಧಿ ಯೋಜನೆ ನೀಡಿದ್ದೇವೆಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಉದ್ಯೋಗಾಕಾಂಕ್ಷಿಗಳು ಕೋಚಿಂಗ್ ಪಡೆದು ನೇಮಕಾತಿ ಅಧಿಸೂಚನೆ ನಿರೀಕ್ಷೆಯಲ್ಲಿ ಇದ್ದಾರೆ. ನೇಮಕಾತಿ ಆಗ್ರಹದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಿದೆ. ನ್ಯಾಯ ಸಿಗುವವರೆಗೂ ಹೋರಾಡಬೇಕುಆರ್.ಅಶೋಕ ವಿರೋಧ ಪಕ್ಷದ ನಾಯಕ ವಿಧಾನಸಭೆ
ಅಧಿಕಾರಕ್ಕೆ ಬಂದರೆ ಮೊದಲವರ್ಷ ಒಂದು ಲಕ್ಷ ಹಾಗೂ ಎರಡು ವರ್ಷದಲ್ಲಿ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ಆದರೆ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಿಲ್ಲಛಲವಾದಿ ನಾರಾಯಣಸ್ವಾಮಿ ವಿರೋಧ ಪಕ್ಷದ ನಾಯಕ ವಿಧಾನ ಪರಿಷತ್ತು
ಯುವಜನರ ಈ ಹೋರಾಟಕ್ಕೆ ಸಹಮತ ಇದೆ. ಪ್ರಧಾನಿ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದರು. ಕೇಂದ್ರ ಸರ್ಕಾರದ ವಿರುದ್ಧವೂ ಹೋರಾಟ ಮಾಡಬೇಕು. ಎಲ್ಲ ಸರ್ಕಾರಗಳನ್ನೂ ಪ್ರಶ್ನಿಸಬೇಕು.ಸಂತೋಷ್ ಎಸ್.ಲಾಡ್ ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರದಲ್ಲಿ ಖಾಲಿ ಇರುವ 2.94 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದಿದ್ದರೂ ಸಂಪುಟ ದರ್ಜೆಯ ಹುದ್ದೆಗಳು ಮಾತ್ರ ವೇಗವಾಗಿ ಭರ್ತಿಯಾಗುತ್ತಿವೆ. ಇದು ಕಾಂಗ್ರೆಸ್ ಆಡಳಿತದ ವೈಖರಿಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಯುವ ಜನರು ಎರಡೂವರೆ ವರ್ಷಗಳಿಂದ ಕಣ್ಣೀರು ಹಾಕುತ್ತಿದ್ದಾರೆ. ಉದ್ಯೋಗ ಕೇಳಿದವರ ಮೇಲೆ ಕಳೆದ ಬಾರಿ ಲಾಠಿ ರುಚಿ ತೋರಿಸಿದಿರಿ. ಯುವ ಜನರ ಜೀವನದ ಜತೆ ಚೆಲ್ಲಾಟ ನಿಲ್ಲಿಸಿಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. 50 ಸಾವಿರ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದಿಸಿದೆ. ಅಧಿಸೂಚನೆ ಹೊರಡಿಸದಿದ್ದರೆ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆಕಾಂತಕುಮಾರ್, ಅಧ್ಯಕ್ಷ, ಅಕ್ಸಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.