
ಧಾರವಾಡದ ಸಾಹಿತ್ಯ ಭವನ ಕಟ್ಟಡದ ಮಹಡಿಯ ಸೀಲಿಂಗ್ ಹಾಳಾಗಿದೆ
ಧಾರವಾಡ: ಜಿಲ್ಲಾ ಸಾಹಿತ್ಯ ಭವನ ಕಚೇರಿ ನಿರ್ವಹಣೆ, ಸಿಬ್ಬಂದಿ ಸಂಬಳ, ವಿದ್ಯುತ್ ಬಿಲ್ ಮೊದಲಾವುಗಳಿಗೆ ಅನುದಾನ ಕೊರತೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಕಚೇರಿ ನಿರ್ವಹಣೆಗೆ ಅನುದಾನ ಬಿಡುಗಡೆಯಾಗಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಲಿಂಗರಾಜ ಅಂಗಡಿ ಸಹಿತ 15 ಜಿಲ್ಲೆಗಳ ಅಧ್ಯಕ್ಷರು ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಪರಿಷತ್ತಿನ ಆಡಳಿತಾಧಿಕಾರಿ ಕೆ.ಎಂ.ಗಾಯತ್ರಿ ಅವರನ್ನು ಭೇಟಿಯಾಗಿ ಅನುದಾನಕ್ಕಾಗಿ ಈಚೆಗೆ ಮನವಿ ಸಲ್ಲಿಸಿದ್ಧಾರೆ.
‘ಕಚೇರಿ ನಿರ್ವಹಣೆಗೆ ಸರ್ಕಾರವು ವಾರ್ಷಿಕ ₹ 1.28 ಲಕ್ಷ ಅನುದಾನ ನೀಡುತ್ತದೆ. ಕಳೆದ ಏಪ್ರಿಲ್‌ನಿಂದ ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಕೋರಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಮತ್ತು ಪರಿಷತ್ತಿನ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲಾ ಸಾಹಿತ್ಯ ಭವನ ಕಟ್ಟಡ ದುರಸ್ತಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಸಾಹಿತ್ಯ ಭವನದ ಜಾಗದ ‘ಲೀಸ್’ ಅವಧಿ ಮುಗಿದಿದ್ದು, ನವೀಕರಣಕ್ಕಾಗಿ ಮನವಿ ಸಲ್ಲಿಸಲಾಗಿದೆ. ಈವರೆಗೆ ಸಂಬಂಧಪಟ್ಟವರು ಕ್ರಮ ವಹಿಸಿಲ್ಲ’ ಎಂದು ಅವರು ತಿಳಿಸಿದರು.
ಜಿಲ್ಲಾ ಸಾಹಿತ್ಯ ಭವನ ಕಟ್ಟಡದ ಮಹಡಿಯ ಕೆಲವೆಡೆ ಸೀಲಿಂಗ್ ಹಾಳಾಗಿದೆ. ಕಿಟಕಿಗಳು ಗಾಜುಗಳು ಒಡೆದಿವೆ. ಗೋಡೆಗಳ ಬಣ್ಣ ಮಾಸಿದೆ, ದೂಳು ಆವರಿಸಿದೆ. ಮಳೆಯಾದಾಗ ಕೆಲವೆಡೆ ಸೋರುತ್ತದೆ.
‘ಅನುದಾನ ಇಲ್ಲದಿದ್ದರೆ ಜಿಲ್ಲಾ ಸಾಹಿತ್ಯ ಭವನದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಸರ್ಕಾರ ನಿರ್ಲಕ್ಷ್ಯ ವಹಿಸಬಾರದು, ಅನುದಾನ ಬಿಡುಗಡೆ ಮಾಡಬೇಕು. ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು’ ಎಂದು ಸಾಹಿತಿ ಪ್ರೊ.ವೀರಣ್ಣ ರಾಜೂರ ಒತ್ತಾಯಿಸಿದರು.
ಜಿಲ್ಲಾ ಸಾಹಿತ್ಯ ಭವನದ ಜಾಗದ ‘ಲೀಸ್’ ಅವಧಿ ವಿಸ್ತರಣೆ ನಿಟ್ಟಿನಲ್ಲಿ ಪರಿಶೀಲನೆ ಮಾಡಿ ಕ್ರಮವಹಿಸಲಾಗುವುದುಸ್ನೇಹಲ್.ಆರ್ ಜಿಲ್ಲಾಧಿಕಾರಿ
‘ಅನುದಾನಕ್ಕಾಗಿ ಮನವಿ ಸಲ್ಲಿಕೆ’
ಧಾರವಾಡ ತಾಲ್ಲೂಕು ಸಾಹಿತ್ಯ ಸಮ್ಮೇಳನ ಫೆ.26ರಂದು ಹುಬ್ಬಳ್ಳಿ ತಾಲ್ಲೂಕು ಸಮ್ಮೇಳನ ಮಾ.15 ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾರ್ಚ್ 30 ಮತ್ತು 31ರಂದು ನಡೆಸಲು ನಿರ್ಧರಿಸಲಾಗಿದೆ. ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಕಳೆದ ವರ್ಷ ಸ್ಥಳೀಯ ಸಂಸ್ಥೆಗಳಿಂದ ಸಂಪನ್ಮೂಲ ಸಂಗ್ರಹಿಸಿ ತಾಲ್ಲೂಕು ಸಮ್ಮೇಳನಗಳನ್ನು ನಡೆಸಲಾಗಿತ್ತು ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.