ADVERTISEMENT

‘ಹಿರಿಯರ’ ಸಹಾಯವಾಣಿ | 1.36 ಲಕ್ಷ ಕರೆ: ನೆರವಿಗಾಗಿ ಹಾತೊರೆದ ಹಿರಿಯ ಜೀವಗಳು

ಗೋವರ್ಧನ ಎಸ್‌.ಎನ್‌.
Published 29 ಅಕ್ಟೋಬರ್ 2025, 5:08 IST
Last Updated 29 ಅಕ್ಟೋಬರ್ 2025, 5:08 IST
   

ಹುಬ್ಬಳ್ಳಿ: ಸರ್ಕಾರಿ ಯೋಜನೆಗಳನ್ನು ಪಡೆಯುವಲ್ಲಿ ಗೊಂದಲ, ಕೌಟುಂಬಿಕ ದೌರ್ಜನ್ಯ, ಪಿಂಚಣಿ ಸಮಸ್ಯೆ, ಹಣಕಾಸು ತೊಂದರೆ... ಹೀಗೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕೋರಿ ಧಾರವಾಡ ಜಿಲ್ಲೆಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಬಂದ ಕರೆಗಳ ಸಂಖ್ಯೆ 1,36,696 (ಅಕ್ಟೋಬರ್‌ 10ರವರೆಗೆ).

ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ 2007ರಲ್ಲಿ ಹಿರಿಯ ನಾಗರಿಕರ ಹಿತರಕ್ಷಣಾ ಕಾಯ್ದೆ ಜಾರಿಯಾದರೂ ಒಂದಿಲ್ಲೊಂದು ಸಮಸ್ಯೆ ಅವರನ್ನು ಬಾಧಿಸುತ್ತಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಸಹಾಯವಾಣಿ ಕೇಂದ್ರ, ಸಂಘಟನೆ, ಪೊಲೀಸ್‌ ಠಾಣೆ, ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳಿಗಿಂತ, ನೆರವಿಗಾಗಿ ಕೈಚಾಚದೆ ಉಳಿದ ಪ್ರಕರಣಗಳೇ ಅಧಿಕ ಎಂಬ ಮಾತು ಹಿರಿಯರದ್ದು.

‘ಧಾರವಾಡ ಜಿಲ್ಲೆಯಲ್ಲಿ 2007ರಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭವಾಯಿತು. ಇಲ್ಲಿಗೆ ಸಲ್ಲಿಕೆಯಾದ ದೂರುಗಳನ್ನು ವಿಲೇವಾರಿ ಮಾಡುವುದರೊಂದಿಗೆ ಅಸಹಾಯಕ ಪರಿಸ್ಥಿತಿಯಲ್ಲಿರುವ ಹಿರಿಯ ನಾಗರಿಕರಿಗೆ ಕೇಂದ್ರದಿಂದ ನೆರವು ನೀಡಲಾಗಿದೆ. ನಿರಾಶ್ರಿತರಿಗೆ ಇತರೆ ಸಂಸ್ಥೆಗಳ ಮೂಲಕ ಆಶ್ರಯ ಒದಗಿಸಲಾಗಿದೆ. ಮೃತಪಟ್ಟವರ ಅಂತ್ಯಸಂಸ್ಕಾರವನ್ನೂ ನೆರವೇರಿಸಲಾಗಿದೆ’ ಎನ್ನುತ್ತಾರೆ ಕೇಂದ್ರದ ಉಸ್ತುವಾರಿ ಐ.ಕೆ. ಲಕ್ಕಂಡಿ.

ADVERTISEMENT

‘ಹಿರಿಯ ನಾಗರಿಕರ ಸಮಸ್ಯೆ ನಿವಾರಣೆಗೆ ಸರ್ಕಾರವೇ ನಿರ್ಲಕ್ಷ್ಯ ವಹಿಸುತ್ತಿದೆ. ಕಾನೂನಿನಲ್ಲಿರುವ ಅಂಶಗಳನ್ನು ಸಮಪರ್ಕವಾಗಿ ಜಾರಿ ಮಾಡಲಾಗಿಲ್ಲ. ಇದಕ್ಕಾಗಿ ಹೋರಾಟ ಮಾಡಿದರೂ ಪ್ರಯೋಜನ ಇಲ್ಲದಂತಾಗಿದೆ. ವೃದ್ಧಾಪ್ಯ ವೇತನ ಪಡೆಯುವವರ ಆದಾಯ ಮಿತಿ ಕಡಿಮೆ ಮಾಡಿ, ಹಲವರನ್ನು ಯೋಜನೆಯಿಂದ ಹೊರಗಿಡಲಾಗದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳೂ ಹೆಚ್ಚಿವೆ’ ಎಂದು ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದರು.

‘ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ಕಾನೂನು ಸೇವಾ ಪ್ರಾಧಿಕಾರಗಳಿಂದ ನೆರವು ಸಿಗುತ್ತಿದೆ. ಮಕ್ಕಳು ಬಲವಂತವಾಗಿ ಆಸ್ತಿ ಬರೆಸಿಕೊಂಡಿದ್ದರೂ, ಅದನ್ನು ವಾಪಸ್‌ ಪಡೆಯುವ ಅವಕಾಶವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಅನುದಾನ ಇಲ್ಲ. ಅವರಿಗೆ ಅಗತ್ಯ ವಸ್ತು, ಸೇವೆ ಪೂರೈಸಲು ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ, ಕಾನೂನು ಇಲಾಖೆ ಸಮನ್ವಯದೊಂದಿಗೆ ಶ್ರಮಿಸುತ್ತಿವೆ’ ಎಂದು ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾಹಿತಿ ನೀಡಿದರು. 

ನಮ್ಮ ಸಂಘದಲ್ಲಿ ಈವರೆಗೆ ಅಂದಾಜು 100 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಕೇರಳ ಮಾದರಿಯಲ್ಲಿ ಹಿರಿಯ ನಾಗರಿಕರಿಗಾಗಿ ಸರ್ಕಾರವು ಪ್ರತ್ಯೇಕ ಆಯೋಗ ರಚಿಸಬೇಕು
ಬಿ.ಎ. ಪಾಟೀಲ ಅಧ್ಯಕ್ಷ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ
‘ಸಂಧಾನದಿಂದ ಇತ್ಯರ್ಥಕ್ಕೆ ಯತ್ನ’
‘ಹುಬ್ಬಳ್ಳಿಯ ಉಪನಗರ ಪೊಲೀಸ್‌ ಠಾಣೆಯಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಸಮಿತಿಯು ಉಸ್ತುವಾರಿ ನೋಡಿಕೊಳ್ಳುತ್ತಿದೆ. ಕೇಂದ್ರಕ್ಕೆ ಭೇಟಿ ನೀಡಿ ಸಲ್ಲಿಸುವ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ. ಸಹಾಯವಾಣಿಗೆ ಕರೆ ಮಾಡಿದರೆ ಅವರ ಮನೆಗೆ ಹೋಗಿ ದೂರು ಪಡೆಯಲಾಗುತ್ತದೆ’ ಎಂದು ಕೇಂದ್ರದ ಸಿಬ್ಬಂದಿ ಪ್ರಕಾಶ ತಿಳಿಸಿದರು. ‘ಪ್ರತಿವಾದಿಗೆ ನೋಟಿಸ್‌ ನೀಡಿ ಅವರ ಹೇಳಿಕೆ ಸಂಗ್ರಹಿಸಲಾಗುತ್ತದೆ. ಸಮಾಲೋಚಕರ ಮಧ್ಯಸ್ಥಿಕೆಯಲ್ಲಿ ದೂರದಾರರು ಹಾಗೂ ಪ್ರತಿವಾದಿಗಳ ಸಮಾಲೋಚನೆ ನಡೆಸಲಾಗುತ್ತದೆ. ಬಹುತೇಕ ಪ್ರಕರಣಗಳನ್ನು ಸಂಧಾನ ಮೂಲಕ ಪರಿಹರಿಸಲಾಗುತ್ತದೆ. ಇಲ್ಲಿ ಇತ್ಯರ್ಥವಾಗದ ಪ್ರಕರಣಗಳನ್ನು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅಲ್ಲಿ ಪರಿಹಾರ ಕಾಣದ ಪ್ರಕರಣಗಳನ್ನು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ರವಾನೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳು ನ್ಯಾಯಾಲಯಕ್ಕೂ ಹೋಗುತ್ತವೆ’ ಎಂದರು. 
ಸಹಾಯವಾಣಿ ಸಂಖ್ಯೆ: 0836 2250730

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.