
ಆತ್ಮಹತ್ಯೆ ಮಾಡಿಕೊಂಡ ಯುವತಿ
ಧಾರವಾಡ: ಸ್ಪರ್ಧಾ ಪರೀಕ್ಷೆ ತಯಾರಿಗೆ ಬಂದಿದ್ದ ಯುವತಿ ಪಲ್ಲವಿ ಕಗ್ಗಲ್ (24) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅವಘಡ ಶಿವಗಿರಿ ಬಳಿ ನಸುಕಿನಲ್ಲಿ ನಡೆದಿದೆ.
ಪಲ್ಲವಿ ಅವರು ಬಳ್ಳಾರಿ ಜಿಲ್ಲೆಯ ಡಿ.ಕಗ್ಗಲ್ ಗ್ರಾಮದವರು. ನೇಮಕಾತಿ ಪರೀಕ್ಷೆಗೆ ತಯಾರಿ ನಿಟ್ಟಿನಲ್ಲಿ ಧಾರವಾಡ ಶಿವಗಿರಿಯಲ್ಲಿ ಇದ್ದರು.
‘ಎರಡು ಡೆತ್ ನೋಟ್ ಸಿಕ್ಕಿವೆ. ಆರೋಗ್ಯ ಸಮಸ್ಯೆ ಮತ್ತು ವೈಯುಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅದರಲ್ಲಿ ಬರೆದಿದ್ದಾರೆ. ಮನೆಯೊಂದರಲ್ಲಿ ವಾಸ ಇದ್ದ ಪಲ್ಲವಿ ಅವರು ನಳಂದ ಗ್ರಂಥಾಲಯದಲ್ಲಿ ನಿತ್ಯ ಅಧ್ಯಯನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಆರೋಗ್ಯ ಸಮಸ್ಯೆ ಇತ್ತು: ಕುಟುಂಬಸ್ಥರ ಸ್ಪಷ್ಟನೆ
‘ಪಲ್ಲವಿಗೆ ಆರೋಗ್ಯದ ಸಮಸ್ಯೆ ಇತ್ತು. ಈ ವಿಷಯವನ್ನು ಆಕೆ ತೀರ ಗಂಭೀರವಾಗಿ ತೆಗೆದುಕೊಂಡಿದ್ದಳು. ಈ ಕಾರಣಕ್ಕೇ ಹೀಗೆ ಮಾಡಿಕೊಂಡಿದ್ದಾಳೆ’ ಎಂದು ಪಲ್ಲವಿ ಅವರ ತಂದೆ ಡಿ. ಕಗ್ಗಲ್‌ನ ಹುಲ್ತೆಪ್ಪ ಪ್ರಜಾವಾಣಿಗೆ ತಿಳಿಸಿದ್ದಾರೆ.
‘ಯಾವುದಾದರೂ ಒಂದು ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಕಾರಣಕ್ಕೆ ಧಾರವಾಡದಲ್ಲಿ ಓದಲು ಹೋಗಿದ್ದಂತೂ ಸತ್ಯ. ಆಕೆ ಈ ಹಿಂದೆ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ ಪಾಸು ಮಾಡಿದ್ದಳು. ಆದರೆ, ಅಂತಿಮ ಹಂತದಲ್ಲಿ ಆಯ್ಕೆಯಾಗಿರಲಿಲ್ಲ. ಈ ಬಗ್ಗೆ ಆಕೆ ತಲೆ ಕೆಡಿಸಿಕೊಂಡಿರಲಿಲ್ಲ’ ಎಂದು ಅವರು ತಿಳಿಸಿದರು.
ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದ ಪಲ್ಲವಿಯು ಹುಲ್ತೆಪ್ಪ ಮತ್ತು ಪದ್ಮಾ ದಂಪತಿಯ ಹಿರಿಯ ಪುತ್ರಿ. ಆಕೆಗೆ ಇಬ್ಬರು ತಮ್ಮಂದಿರಿದ್ದಾರೆ. ಹುಟ್ಟೂರಿನಲ್ಲೇ ಅಂತ್ಯಸಂಸ್ಕಾರ ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.