ADVERTISEMENT

ಅನರ್ಹ ಶಾಸಕರ ಹೊಣೆ ನಮ್ಮದಲ್ಲ: ಸಚಿವ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 7:48 IST
Last Updated 3 ನವೆಂಬರ್ 2019, 7:48 IST
   

ಹುಬ್ಬಳ್ಳಿ(ಶಿರಗುಪ್ಪಿ): 'ಕೆಲವು ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂಬುದು ಸತ್ಯ. ಆದರೆ, ಅವರ ರಕ್ಷಣೆಯ ಹೊಣೆ ನಮ್ಮದಲ್ಲ' ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ವೈಯಕ್ತಿಕ ಕಾರಣಗಳಿಂದಾಗಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಅನರ್ಹರಾಗಿದ್ದಾರೆ. ಅದರಿಂದ ಬಿಜೆಪಿಗೆ ಸರ್ಕಾರ ನಡೆಸಲು ಅನುಕೂಲವಾಯಿತು. ಹಾಗಂತ ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮದಲ್ಲ. ನಮ್ಮ ಮತ್ತು ಅವರ ನಡುವೆ ಸಾಕಷ್ಟು ರಾಜಕೀಯ ಅಂತರವಿದೆ' ಎಂದರು.

'ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನರ್ಹ ಶಾಸಕರಿಗೆ ಉಪ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅನರ್ಹರು ತಮ್ಮನ್ನು ತಾವು ಕಾಪಾಡಿಕೊಳ್ಳುವಷ್ಟು ಶಕ್ತರಿದ್ದಾರೆ' ಎಂದು ಅಭಿಪ್ರಾಯಪಟ್ಟರು.

ADVERTISEMENT

'ಅನರ್ಹ ಶಾಸಕರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ನ. 4 ಅಥವಾ 5ರಂದು ತೀರ್ಪು ಬರುವ ಸಾಧ್ಯತೆಯಿದೆ. ಮುಂದೆ ಅವರು ಬಿಜೆಪಿ ಸೇರಿದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ನೀಡಬೇಕೇ ಬೇಡವೇ ಎಂದು ಹೈಕಮಾಂಡ್ ನಿರ್ಧರಿಸಲಿದೆ' ಎಂದರು.

ಕಾಂಗ್ರೆಸ್'ನಿಂದ ಕುತಂತ್ರ ರಾಜಕಾರಣ: ಸಚಿವ ಶೆಟ್ಟರ್

ಹುಬ್ಬಳ್ಳಿ: 'ಬಿಜೆಪಿ ಸರ್ಕಾರವನ್ನು ವಿರೋಧಿಸಲು ಯಾವುದೇ ವಿಷಯವಿಲ್ಲದ ಕಾರಣ ಕಾಂಗ್ರೆಸ್ ಸುಳ್ಳು ಆಡಿಯೋ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ' ಎಂದು ಸಚಿವ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ಯಪಡಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದವರು ಯಾರು? ಅದನ್ನು ಸೃಷ್ಟಿಸಿದ ಬ್ರಹ್ಮ ಯಾರು? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು' ಎಂದು ಒತ್ತಾಯಿಸಿದರು.

'ಯಡಿಯೂರಪ್ಪ ಅವರ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅಪ ಪ್ರಚಾರ ಮಾಡಲು ಸಿದ್ದರಾಮಯ್ಯ ಕುತಂತ್ರ ನಡೆಸಿದ್ದಾರೆ. ಸುಳ್ಳು ಆಡಿಯೋ ಸೃಷ್ಟಿಸಿ ನಾಡಿನ ಜನತೆಯ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಕಾಂಗ್ರೆಸ್ ಅಧೋಗತಿಗೆ ತಲುಪಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.