ADVERTISEMENT

ಡಿ.ಕೆ.ಶಿವಕುಮಾರ್‌ಗೆ ನೈತಿಕತೆ ಇಲ್ಲ: ಜಗದೀಶ್ ಶೆಟ್ಟರ್ ಟೀಕೆ

ಫೋನ್ ಕದ್ದಾಲಿಕೆ ಆರೋಪಕ್ಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 11:36 IST
Last Updated 23 ಆಗಸ್ಟ್ 2020, 11:36 IST
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್   

ಹುಬ್ಬಳ್ಳಿ: ‘ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು, ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ವಿರುದ್ಧ ಇರುವ ಭ್ರಷ್ಟಾಚಾರ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಜೈಲಿನಲ್ಲಿದ್ದು ಬಂದವರಿಗೆ ನೈತಿಕತೆಯ ಬಗ್ಗೆ ಮಾತನಾಡುವ ಅಧಿಕಾರವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಫೋನ್ ಕದ್ದಾಲಿಕೆ ಕುರಿತು ಶಿವಕುಮಾರ್ ಮಾಡಿರುವ ಆರೋಪ ಕುರಿತು ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಮನೆಯ ಮೇಲೆಯೇ ದಾಳಿ ನಡೆದಿದೆ. ಈ ಘಟನೆಯನ್ನು ಖಂಡಿಸದ ಕಾಂಗ್ರೆಸ್ ನಾಯಕರು, ಗೂಂಡಾಗಳ ಬೆನ್ನಿಗೆ ನಿಂತು ಪೋಲಿಸ್ ಕಮಿಷನರ್‌ಗೆ ಧಮ್ಕಿ ಹಾಕಿದ್ದಾರೆ’ ಎಂದರು.

‘ಕಾಂಗ್ರೆಸ್‌ ತುಷ್ಟೀಕರಣ ರಾಜಕೀಯದಿಂದ ದೇಶವನ್ನು ಹಾಳು ಮಾಡುತ್ತಿದೆ. ಗಲಭೆಕೋರರಿಗೆ ಶಾಸಕ ಜಮೀರ್ ಅಹ್ಮದ್ ಪರಿಹಾರ ಧನ ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಿಲುವೇನು?’ ಎಂದು ಪ್ರಶ್ನಿಸಿದ ಅವರು, ‘ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವ ಸರ್ಕಾರ ಸುಭದ್ರವಾಗಿದೆ. ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರ ಯಶಸ್ಸು ಸಹಿಸದ ವಿರೋಧಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.

ADVERTISEMENT

ನಿಮ್ಮ ಆಟ ನಡೆಯೋಲ್ಲ:ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಡಿ.ಕೆ. ಶಿವಕುಮಾರ್ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ.ಒಬ್ಬ ದಕ್ಷ ಪೋಲಿಸ್ ಕಮಿಷನರ್‌ಗೆ ಧಮ್ಕಿ ಹಾಕುವುದು ಎಷ್ಟರಮಟ್ಟಿಗೆ ಸರಿ. ಏನು ಮಾಡಲು ಹೊರಟಿದ್ದೀರಿ ನೀವು? ಇದೆಲ್ಲ ನಡೆಯೋದಿಲ್ಲ. ನೀವು ಜಾಮೀನು ಪಡೆದು ಹೊರಗಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.