ADVERTISEMENT

ಯೋಗ ಶಿಕ್ಷಕಿ ಡಾ. ಗೀತಾ ಅಯ್ಯಂಗಾರ್ ನಿಧನ

ಬಿಕೆಎಸ್‌ ಅಯ್ಯಂಗಾರ್‌ ಪುತ್ರಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 15:37 IST
Last Updated 16 ಡಿಸೆಂಬರ್ 2018, 15:37 IST
ಡಾ.ಗೀತಾ ಅಯ್ಯಂಗಾರ್‌
ಡಾ.ಗೀತಾ ಅಯ್ಯಂಗಾರ್‌   

ಹುಬ್ಬಳ್ಳಿ: ವಿಶ್ವಪ್ರಸಿದ್ಧ ಯೋಗಗುರು ಕೋಲಾರದ ಬಿ.ಕೆ.ಎಸ್‌. ಅಯ್ಯಂಗಾರ್‌ ಅವರ ಹಿರಿಯ ಪುತ್ರಿ, ಯೋಗ ಶಿಕ್ಷಕಿ ಡಾ.ಗೀತಾ ಅಯ್ಯಂಗಾರ್‌ (74) ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.

ಆಯುರ್ವೇದ ವೈದ್ಯರೂ ಆಗಿದ್ದ ಅವರು ಬರೆದ ‘ಸಮಗ್ರ ಯೋಗ ಚಿಕಿತ್ಸೆ’ ಪುಸ್ತಕದ ಕನ್ನಡ ಹಾಗೂ ಇಂಗ್ಲಿಷ್‌ ಆವೃತ್ತಿ ಪ್ರಸಿದ್ಧಿ ಪಡೆದಿದೆ. ಔಷಧ ರಹಿತ ಚಿಕಿತ್ಸೆಯಲ್ಲಿ ಸಂಶೋಧನೆ ನಡೆಸಿದ್ದ ಅವರು 40 ದೇಶಗಳಲ್ಲಿ ಯೋಗ ಪ್ರಚಾರ ಮಾಡಿದ್ದರು. ಮಹಿಳೆಯರ ಆರೋಗ್ಯ ಸಂಬಂಧಿ ಯೋಗ ತರಬೇತಿ ಅವರ ವೈಶಿಷ್ಟ್ಯವಾಗಿತ್ತು. ನಿರ್ದಿಷ್ಟ ಆಸನ ಹಾಗೂ ಪ್ರಾಣಾಯಾಮದ ಮೂಲಕ ಮಹಿಳೆಯರಿಗೆ ಋತುಚಕ್ರ, ಗರ್ಭಧಾರಣೆ, ಗರ್ಭಧಾರಣೆ ನಂತರದ ಸಮಯದಲ್ಲಿ ಉಪಯುಕ್ತವಾಗುವಂಥ ಯೋಗ ತರಬೇತಿಯನ್ನು ನೀಡುತ್ತಿದ್ದರು.

ಬಿ.ಕೆ.ಎಸ್ ಅಯ್ಯಂಗಾರ್ ಅವರು ಗೀತಾ ಅವರನ್ನು 'ಜಗತ್ತಿನ ಪ್ರಮುಖ ಮಹಿಳಾ ಯೋಗ ಶಿಕ್ಷಕಿ' ಎಂದು ಬಣ್ಣಿಸಿದ್ದರು. ಅವಿವಾಹಿತರಾಗಿದ್ದ ಅವರು ಸಹೋದರ ಪ್ರಶಾಂತ ಅಯ್ಯಂಗಾರ್‌ ಜೊತೆಗೂಡಿ ಸ್ಥಾಪಿಸಿದ ‘ರಮಾಮಣಿ ಅಯ್ಯಂಗಾರ್‌ ಸ್ಮಾರಕ ಯೋಗ ಸಂಸ್ಥೆ‘ಯ ಸಹ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ತಮ್ಮ ತಂದೆಯ ಜನ್ಮಶತಮಾನೋತ್ಸವ ಸ್ಮರಣಾರ್ಥ ಪುಣೆಯಲ್ಲಿ ಅವರು ಆಯೋಜಿಸಿದ್ದ, ‘ಅಂತರರಾಷ್ಟ್ರೀಯ ಯೋಗ ಪ್ರದರ್ಶನ ಮತ್ತು ಕಾರ್ಯಾಗಾರ’ ಎರಡು ದಿನಗಳ ಹಿಂದಷ್ಟೇ ಮುಕ್ತಾಯವಾಗಿತ್ತು.

ಬಿಕೆಎಸ್‌ ಅಯ್ಯಂಗಾರ್‌ ಅವರ ಶಿಷ್ಯ, ಹುಬ್ಬಳ್ಳಿಯಲ್ಲಿ ಯೋಗ ತರಗತಿ ನಡೆಸುತ್ತಿರುವ ವಿನಾಯಕ ತಲಗೇರಿ, ಗೀತಾ ಅವರಿಂದಲೂ ತರಬೇತಿ ಪಡೆದಿದ್ದು, ಮಹಿಳೆಯರ ಆರೋಗ್ಯದ ಬಗೆಗಿನ ಅವರಿಗಿದ್ದ ಕಾಳಜಿಯನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.