ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಕುಡಿಯುವ ನೀರಿನ ಕೆರೆ ಮಲೀನವಾಗಿದೆ
ಕುಂದಗೋಳ: ಗ್ರಾಮದ ಜಲ ಮೂಲಗಳಾದ ಇಲ್ಲಿನ ಕೆರೆಗಳು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳ ಸ್ಥಿತಿ ದುಸ್ತರಗೊಳ್ಳುತ್ತಿವೆ.
ಹೌದು ತಾಲ್ಲೂಕಿನ ಪಶುಪತಿಹಾಳ ಗ್ರಾಮದಲ್ಲಿರುವ ಕುಡಿಯುವ ನೀರಿನ ಕೆರೆ ಮಲೀನಗೊಂಡ ಪರಿಣಾಮ ಜನರು ಆತಂಕಗೊಂಡಿದ್ದು, ಯಾರಾದರೂ ಈ ನೀರು ಸೇವಿಸಿದರೆ ಗತಿಯೇನು ಎಂಬಂತಾಗಿದೆ. ಗ್ರಾಮದ ಕೆರೆ ನೀರು ಹಸಿರಾಗಿದ್ದು ಇದಕ್ಕೆ ಕಾರಣ ಹಾಗೂ ಇದರಿಂದ ಉಂಟಾಗುವ ಪರಿಣಾಮ ಏನೂ ಎಂಬ ಆತಂಕದಲ್ಲಿ ಜನತೆ ಇದ್ದಾರೆ.
ಸರಿಯಾಗಿ ಬಾರದ ಜಲಜೀವನ ನಳದ ನೀರು, ಇನ್ನೂ ಇರುವ ಎರಡು ಬೊರವೆಲ್‌ಗಳು ಆಗಾಗ ಕೆಟ್ಟು ನಿಲ್ಲುತ್ತವೆ. ಕುಡಿಯಲು ಬಳಸುತ್ತಿದ್ದ ಕೆರೆಯ ನೀರು ಈಗ ಸಂಪೂರ್ಣ ಮಲೀನವಾಗಿದೆ. ಈ ಕುರಿತು ತಾಲ್ಲೂಕು ನೀರು ಸರಬರಾಜು ಹಾಗು ನೈರ್ಮಲ್ಯ ಅಧಿಕಾರಿ ಎ.ಎನ್.ನಾಯ್ಕರ ಅವರನ್ನು ಪ್ರಶ್ನಿಸಿದಾಗ ಇದಕ್ಕೆ ಸುತ್ತಲಿನ ಗಿಡಗಂಟೆಗಳ ಕಾರಣವಾಗಿರಬಹುದು. ಈ ನೀರನ್ನು ಪರೀಕ್ಷೆಗೆ ಕಳುಹಿಸಿದ್ದು ವರದಿ ಬಂದ ಮೇಲೆ ತಿಳಿಯುವುದು, ಗ್ರಾಮ ಪಂಚಾಯಿತಿಯವರಿಗೆ ಜನರು ನೀರು ಬಳಸದಂತೆ ಡಂಗೂರ ಸಾರಲು ತಿಳಿಸಲಾಗಿದೆ ಎಂದು ಹೇಳಿದರು.
ಕೆರೆ ನೀರು ಮಲೀನಗೊಂಡಿರುವ ಕಾರಣಗಳನ್ನು ಪತ್ತೆ ಹಚ್ಚಿ ಸ್ವಚ್ಛಗೊಳಿಸಲಾಗುವುದು. ಕುಡಿಯಲು ಯೋಗ್ಯವಾಗಿದೆಯೇ ಎಂದು ಪ್ರಯೋಗಾಲಯಕ್ಕೆ ನೀರಿನ ಮಾದರಿ ಕಳುಹಿಸಿ ಜನರ ಉಪಯೋಗಕ್ಕೆ ನೀಡಲಾಗುವುದು.ಎ.ಎನ್.ನಾಯ್ಕರ, ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ
ಇನ್ನೂ ಗ್ರಾಮಸ್ಥ ವೀರಯ್ಯಸ್ವಾಮೀ ಹಿರೇಮಠ ಅವರು ಮಾತನಾಡಿ, ‘ನಮ್ಮ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಹಾಗು ತಾಲ್ಲೂಕ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ ಹಾಳಾಗುತ್ತಿದೆ. ನಾವು ಎಲ್ಲರಿಗೂ ತಿಳಿಸಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಈಗ ಎರಡು ದಿನಗಳಿಂದ ಬೋರವೆಲ್ ಗಳು ಪ್ರಾರಂಭವಾಗಿವೆ. ಆದರೆ ಹಳ್ಳಿಗಳಲ್ಲಿ ಕೆರೆಗಳೇ ಜನರಿಗೆ ಅವಶ್ಯಕ ಜೀವ ಜಲದ ಮೂಲವಾಗಿವೆ ಎನ್ನುವದುದನ್ನ ಅಧಿಕಾರಿಗಳು ಮರೆತಿದ್ದಾರೆ’ ಎಂದು ಅಳಲು ತೊಡಿಕೊಂಡರು.
ಗ್ರಾಮದಲ್ಲಿ ಸಿಹಿ ನೀರಿನ ಮೂಲವೇ ಕೆರೆಗಳಾಗಿವೆ. ಕೊಳವೆಬಾವಿಗಳ ನೀರನ್ನು ಜನರು ಬಳಸಲು ಹಿಂದೇಟು ಹಾಕುತ್ತಾರೆ. ಕುಡಿಯುವ ನೀರಿನ ನೈಸರ್ಗಿಕ ಸಂಗ್ರಹಗಾರಗಳಾದ ಕೆರೆಗಳನ್ನು ಸ್ವಚ್ಛ, ಸುಂದರಗೊಳಿಸಿ, ನೀರು ಬಳಕೆಗೆ ಯೋಗ್ಯವಾಗುವಂತೆ ಮಾಡುವ ಜವಾಬ್ದಾರಿ ಸ್ಥಳೀಯ ಆಡಳಿತದ್ದಾಗಿದೆ.
ಒಟ್ಟಾರೆ ಗ್ರಾಮಗಳ ಜೀವ ಜಲ ಮೂಲಗಳಾದ ಕೆರೆಗಳ ರಕ್ಷಣೆಯ ಇಚ್ಚಾಸಕ್ತಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲ ಎಂಬ ಭಾವನೆ ಗ್ರಾಮಸ್ಥರಲ್ಲಿ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.