
ಹುಬ್ಬಳ್ಳಿ: ಒಂದು ಸಾವಿರ ಚಾಲಕ ಸಿಬ್ಬಂದಿಯನ್ನು ಡಿಸೆಂಬರ್ 8ರ ಒಳಗೆ ಹಾಗೂ 814 ಸಿಬ್ಬಂದಿಯನ್ನು ಹಣಕಾಸು ಇಲಾಖೆ ಅನುಮೋದನೆ ನೀಡಿದ ನಂತರ ನೇಮಕ ಮಾಡಿಕೊಳ್ಳುವ ಭರವಸೆಯನ್ನು ಸಚಿವ ರಾಮಲಿಂಗಾ ರೆಡ್ಡಿ ನೀಡಿದ ಹಿನ್ನೆಲೆಯಲ್ಲಿ, ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಇಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
2019ರ ಅಧಿಸೂಚನೆ ಪ್ರಕಾರವೇ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಚಾಲಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಗೋಕುಲ ರಸ್ತೆಯ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಎದುರು ಎರಡು ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದರು. ಸಚಿವರು ದೂರವಾಣಿ ಮೂಲಕ ನೀಡಿದ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿದ್ದರು. ಶುಕ್ರವಾರ ಮತ್ತೆ ಪ್ರತಿಭಟನೆ ನಡೆಸಿ, ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸಚಿವ ಸಂತೋಷ ಲಾಡ್, ಶಾಸಕ ಮಹೇಶ ಟೆಂಗಿನಕಾಯಿ, ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ, ಹೋರಾಟಗಾರ ಸುಭಾಸಸಿಂಗ್ ಜಮಾದಾರ ಹಾಗೂ ಅಭ್ಯರ್ಥಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರು ಎರಡು ತಿಂಗಳಲ್ಲಿ ಒಂದು ಸಾವಿರ ಚಾಲಕ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.
‘2019ರ ಅಧಿಸೂಚನೆ ಪ್ರಕಾರ ನಡೆಯಬೇಕಿದ್ದ ಚಾಲಕ ನೇಮಕಾತಿ, ಆರು ವರ್ಷವಾದರೂ ನಡೆದಿರಲಿಲ್ಲ. ಹೊಸದಾಗಿ ಕರೆದ ಅಧಿಸೂಚನೆಯಲ್ಲಿ ಚಾಲಕ/ನಿರ್ವಾಹಕ ನೇಮಕಾತಿಯಿದೆ. ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದ್ದು, ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಹಳೇ ಅಧಿಸೂಚನೆ ಪ್ರಕಾರವೇ ಹೊಸದಾಗಿ 1,700 ಚಾಲಕ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸ್ತಾವ ಸಂಸ್ಥೆಯಿಂದ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಣಕಾಸು ಸಚಿವರೂ ಆಗಿರುವುದರಿಂದ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.