
ಹುಬ್ಬಳ್ಳಿ: ‘ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯು ಫೆ.6ರಿಂದ ಮೂರು ದಿನ ಹುಬ್ಬಳ್ಳಿಯಲ್ಲಿ ‘14ನೇ ಒಣಮೆಣಸಿನಕಾಯಿ ಮೇಳ’ ಏರ್ಪಡಿಸಿದೆ’ ಎಂದು ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ ಹೇಳಿದರು.
‘ಕಳೆದ ವರ್ಷದ ಮೇಳದಲ್ಲಿ 203 ಕ್ವಿಂಟಲ್ ಒಣಮೆಣಸಿನಕಾಯಿ ಮಾರಾಟವಾಗಿ, ₹71 ಲಕ್ಷ ವಹಿವಾಟು ನಡೆದಿತ್ತು. ಈ ಬಾರಿ ಬೇಸಾಯ ಪ್ರದೇಶ ತಗ್ಗಿದ್ದು, ಬೆಲೆಏರಿಕೆ ಸಾಧ್ಯತೆ ಇದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ಬಾರಿ 100 ಮಳಿಗೆಗಳಿರಲಿವೆ. ಬಳ್ಳಾರಿ, ಗದಗ, ಧಾರವಾಡ. ಬಾಗಲಕೋಟೆ, ರಾಯಚೂರು, ಹಾವೇರಿ ಸೇರಿ ವಿವಿಧ ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ.’ ಎಂದರು.
‘ರಾಜ್ಯದಲ್ಲಿ ಸದ್ಯ 79 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಕೃಷಿ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 40 ಸಾವಿರ ಹೆಕ್ಟೇರ್ ತಗ್ಗಿದೆ. 1.58 ಲಕ್ಷ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ’ ಎಂದರು.
ಅನುದಾನ ಕೊರತೆ: ‘ಕಳೆದ ವರ್ಷ ಮಂಡಳಿಗೆ ಸರ್ಕಾರ ₹50 ಲಕ್ಷ ಅನುದಾನ ನೀಡಿತ್ತು. ಈ ವರ್ಷ ₹40 ಲಕ್ಷ ಬಂದಿದೆ. ಎಲ್ಲ ಸಾಂಬಾರು ಪದಾರ್ಥಗಳ ಮೇಳ ಆಯೋಜಿಸಲು ಸಾಧ್ಯವಾಗುತ್ತಿಲ್ಲ’ ಎಂದರು.
‘ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೆಟ್ಟದಮನೆಯಲ್ಲಿ ಅಂದಾಜು ₹35 ಕೋಟಿ ವೆಚ್ಚದಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ‘ಸ್ಪೈಸ್ ಪಾರ್ಕ್’ ನಿರ್ಮಿಸಲು 9 ಎಕರೆ ಜಾಗ ಮಂಜೂರಾಗಿದೆ. ಅಲ್ಲಿ, ಸಾಂಬಾರು ಬೆಳೆಗಳ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ ಸ್ಥಾಪಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.