ADVERTISEMENT

ಧಾರವಾಡ | ದೂಳು ನಿಯಂತ್ರಣ; ದಿನಕ್ಕೆ 80 ಸಾವಿರ ಲೀ. ನೀರು!

ರಸ್ತೆಗೆ ನೀರು ಸಿಂಪಡಿಸಲು ಪ್ರತಿ ತಿಂಗಳು ಅಂದಾಜು ₹3 ಲಕ್ಷ ವೆಚ್ಚ; ಸಾರ್ವಜನಿಕರ ಆಕ್ರೋಶ

ನಾಗರಾಜ್ ಬಿ.ಎನ್‌.
Published 17 ಡಿಸೆಂಬರ್ 2025, 7:55 IST
Last Updated 17 ಡಿಸೆಂಬರ್ 2025, 7:55 IST
ಹುಬ್ಬಳ್ಳಿಯ ಹಳೇ ಕೋರ್ಟ್‌ ಬಳಿ ನೀರು ಸಿಂಪಡಣೆ ವಾಹನದ ಮೂಲಕ ದೂಳು ನಿಯಂತ್ರಿಸಲಾಯಿತು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಹಳೇ ಕೋರ್ಟ್‌ ಬಳಿ ನೀರು ಸಿಂಪಡಣೆ ವಾಹನದ ಮೂಲಕ ದೂಳು ನಿಯಂತ್ರಿಸಲಾಯಿತು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಚನ್ನಮ್ಮ ವೃತ್ತ ಕೇಂದ್ರವಾಗಿ ಇಟ್ಟುಕೊಂಡು ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಯಿಂದ ಹದಗೆಟ್ಟ ರಸ್ತೆಯಿಂದ ಎಲ್ಲೆಡೆ ದೂಳು ವ್ಯಾಪಿಸಿದೆ. ಅದರ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ನೀರು ಸಿಂಪಡಣೆಗೆಂದು ಪ್ರತಿ ತಿಂಗಳು ಅಂದಾಜು ₹3 ಲಕ್ಷ ಖರ್ಚು ಮಾಡುತ್ತಿದೆ. ಆದರೂ ದೂಳು ಹೆಚ್ಚಾಗುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ.

ಮೂರು ವಾಟರ್‌ ಸ್ಪ್ರಿಂಕ್ಲರ್‌ ವಾಹನ, ಒಂದು ಮಿಸ್ಟಿಂಗ್‌ ಮಷಿನ್‌ ಮೂಲಕ ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 12 ಬಾರಿ ರಸ್ತೆಗೆ ನೀರು ಸಿಂಪಡಿಸಲಾಗುತ್ತಿದೆ. 3 ಸಾವಿರ ಲೀಟರ್‌ ಸಾಮರ್ಥ್ಯದ ಮೂರು ಸ್ಪ್ರಿಂಕ್ಲರ್‌ ವಾಹನಗಳು ಮೂರು ಬಾರಿಯಂತೆ ಒಂಬತ್ತು ಬಾರಿ ಹಾಗೂ 8 ಸಾವಿರ ಲೀಟರ್‌ ಸಾಮರ್ಥ್ಯದ ಮಿಸ್ಟಿಂಗ್‌ ಮಷಿನ್‌ ಮೂರು ಬಾರಿ ಸಂಚರಿಸಿ ರಸ್ತೆಯಲ್ಲಿ ದೂಳು ಏಳದಂತೆ ನೀರು ಸಿಂಪಡಿಸುತ್ತಿದೆ.

ಪಾಲಿಕೆ ಜೊತೆಗೆ ಮೇಲ್ಸೇತುವೆ ಗುತ್ತಿಗೆ ಪಡೆದ ಜಂಡು ಕಂಪನಿಯು ಸಹ ಎರಡು ನೀರಿನ ಟ್ರ್ಯಾಕ್ಟರ್‌ ಹಾಗೂ ಒಂದು ದೊಡ್ಡ ನೀರಿನ ಟ್ಯಾಂಕರ್‌ ಮೂಲಕ ನೀರು ಸಿಂಪಡಿಸುತ್ತಿದೆ. ಪಾಲಿಕೆ ಹಾಗೂ ಗುತ್ತಿಗೆ ಪಡೆದ ಕಂಪನಿ ಪ್ರತಿದಿನ 80 ಸಾವಿರ ಲೀಟರ್‌ನಷ್ಟು ನೀರನ್ನು ದೂಳು ತೆಗೆಯಲೆಂದೇ ಬಳಸಿಕೊಳ್ಳುತ್ತಿದೆ.

ADVERTISEMENT

‘ಮಹಾನಗರ ಪಾಲಿಕೆ ಆಗಸ್ಟ್‌ ಅಂತ್ಯದಿಂದ ಈವರೆಗೆ 1,200ಕ್ಕೂ ಹೆಚ್ಚು ಬಾರಿ ಟ್ಯಾಂಕರ್‌ನಿಂದ ರಸ್ತೆಗೆ ನೀರು ಸಿಂಪಡಿಸಿದೆ.  ನಾಲ್ವರು ಸಿಬ್ಬಂದಿ, ಡೀಸೆಲ್‌ ಮತ್ತು ನೀರಿನ ಶುಲ್ಕವೆಂದು ದಿನ ₹10 ಸಾವಿರಕ್ಕೂ ವೆಚ್ಚ ಮಾಡಲಾಗುತ್ತಿದೆ. ನೀರು ಸಿಂಪಡಣೆ ಪರಿಹಾರವಲ್ಲ. ಆದರೂ ತಾತ್ಕಾಲಿಕವಾಗಿ ದೂಳು ನಿಯಂತ್ರಿಸಲು ಮುಂದಾಗಿದ್ದೇವೆ’ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

‘ಸುಡು ಬಿಸಿಲಿಗೆ ಸಿಂಪಡಿಸಿದ ನೀರೆಲ್ಲ ನಿಮಿಷ ಮಾತ್ರದಲ್ಲಿ ಒಣಗುತ್ತದೆ. ನೀರು ಸಿಂಪಡಣೆ ಎನ್ನುವುದು ಜನತೆಯನ್ನು ಯಾಮಾರಿಸುವ ಕೆಲಸವಾಗಿದೆ. ವಿಪರೀತ ದೂಳಿನಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಬಹುದು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಹಳೇ ಕೋರ್ಟ್‌, ಚನ್ನಮ್ಮ ವೃತ್ತ, ಹಳೇ ಬಸ್‌ ನಿಲ್ದಾಣ, ಬಸವವನ, ಐಟಿ ಪಾರ್ಕ್‌ ಬಳಿ ಓಡಾಡಲಾಗದಷ್ಟು ದೂಳು ದಿನಪೂರ್ತಿ ಇರುತ್ತದೆ. ಮುಂದಿನ ಎರಡು ತಿಂಗಳು ಹೀಗೆ ಕಳೆದರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ’ ಎಂದು ಬೈಕ್‌ ಸವಾರ ಮಂಜುನಾಥ ಕದಂ ಆತಂಕ ವ್ಯಕ್ತಪಡಿಸಿದರು.

‘ಎಸಿ ಕಾರುಗಳಲ್ಲಿ ಓಡಾಡುವ ಜನಪ್ರತಿನಿಧಿಗಳು, ಅಧಿಕಾರಿಗಳು ಒಂದು ಬಾರಿ ಬಿಸಿಲಿನ ವೇಳೆ ಹಳೇಕೋರ್ಟ್‌ ವೃತ್ತದಿಂದ ಬಸವವನ ಬಳಿ ನಡೆದುಕೊಂಡು ಬಂದರೆ ಸಾಕು, ದೂಳಿನ ಸಮಸ್ಯೆ ಎಷ್ಟಿದೆ ಎನ್ನುವುದು ಅರವಿಗೆ ಬರುತ್ತದೆ. ಕಚೇರಿಯಲ್ಲಿ ಕೂತು, ದೂಳು ನಿಯಂತ್ರಿಸಿ ಎಂದರೆ, ಕೆಳ ಹಂತದ ಅಧಿಕಾರಿಗಳು ಏನು ಮಾಡಬೇಕು? 2026ರ ಮಾರ್ಚ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳುತ್ತಾರೆ. ಆದರೆ, ಇನ್ನೂ ಶೇ 30ರಷ್ಟು ಕಾಮಗಾರಿ ಬಾಕಿಯಿದೆ. ಮುಕ್ತಾಯವಾಗಲು ಇನ್ನೂ ಒಂದೂವರೆ ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೂ ಜನರು ದೂಳಿನಲ್ಲಿಯೇ ದಿನದೂಡಬೇಕೆ’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ ಕಂದಗಲ್‌ ಪ್ರಶ್ನಿಸಿದರು.

ದೂಳು ನಿಯಂತ್ರಣಕ್ಕೆ ಗುತ್ತಿಗೆ ಪಡೆದ ಕಂಪನಿ ಟ್ಯಾಂಕರ್‌ ಮೂಲಕ ನೀರು ಸಿಂಪಡಣೆ ಮಾಡುತ್ತಿದೆ. ಶೀಘ್ರದಲ್ಲಿಯೇ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಲಾಗುವುದು
–ಸತೀಶ ನಾಗನೂರು ಸಹಾಯಕ ಎಂಜಿನಿಯರ್‌ ಪಿಡಬ್ಲ್ಯೂಡಿ ಎನ್‌ಎಚ್‌
ಮಹಾನಗರ ಪಾಲಿಕೆಯಿಂದ ದಿನಕ್ಕೆ 10ಕ್ಕೂ ಹೆಚ್ಚು ಬಾರಿ ರಸ್ತೆಗಳಿಗೆ ನೀರು ಸಿಂಪಡಣೆ ಮಾಡಿ ದೂಳು ನಿಯಂತ್ರಿಸಲಾಗುತ್ತಿದೆ. ಅಗತ್ಯವಿದ್ದರೆ ಟ್ರಿಪ್‌ ಹೆಚ್ಚಳ ಮಾಡಲಾಗುವುದು
–ವಿಜಯಕುಮಾರ ಅಪರ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಉದ್ಯಾನವೂ ದೂಳುಮಯ...

ರಸ್ತೆಯಲ್ಲಿ ಸಂಚರಿಸುವ ಹಾಗೂ ಓಡಾಡುವ ಸವಾರರಿಗೆ ಸಾರ್ವಜನಿಕರಿಗಷ್ಟೇ ದೂಳಿನ ಸಮಸ್ಯೆ ಆಗುತ್ತಿಲ್ಲ. ಬೆಳಿಗ್ಗೆ–ಸಂಜೆ ವಾಯುವಿಹಾರಕ್ಕೆ ತೆರಳುವ ವಿಹಾರಿಗಳು ಸಹ ದೂಳಿನಿಂದ ಬೇಸತ್ತಿದ್ದಾರೆ. ಮೇಲ್ಸೇತುವೆ ಕಾಮಗಾರಿ ನಡೆಯುವ ರಸ್ತೆ ಅಕ್ಕಪಕ್ಕದಲ್ಲಿನ ಮರ–ಗಿಡಗಳ ಮೇಲೆಲ್ಲ ದೂಳು ಆವರಿಸಿದೆ. ‘ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಅಲಂಕಾರಿಕ ಗಿಡಗಳು ವೈವಿಧ್ಯಮಯ ಹೂ–ಗಿಡಗಳು ಆಳೆತ್ತರದ ಗಿಡ–ಮರಗಳ ಎಲೆಗಳ ಮೇಲೆಲ್ಲ ದೂಳು ತುಂಬಿದೆ. ನಳನಳಿಸುವ ಹೂವುಗಳ ಪಕಳೆ ಮೇಲೂ ದೂಳು ಕೂತು ಅಂದಗೆಡಿಸಿವೆ. ಉದ್ಯಾನದಲ್ಲಿ ಅಳವಡಿಸಿರುವ ಆಸನಗಳು ಹಾಗೂ ಪಾದಚಾರಿ ಮಾರ್ಗದ ಕಲ್ಲಿನ ಮೇಲೂ ದೂಳು ಇದೆ. ಸ್ವಚ್ಛಂದವಾಗಿ ವಿಹರಿಸಿ ಶುದ್ಧ ಗಾಳಿ ಸೇವಿಸಬೇಕೆಂದು ಬರುವ ವಿಹಾರಿಗಳು ದೂಳಿನ ಮಜ್ಜನ ಮಾಡುತ್ತ ದೂಳನ್ನೇ ಸೇವನೆ ಮಾಡುವಂತಾಗಿದೆ. ಆಳುವ ವರ್ಗ ಅಭಿವೃದ್ಧಿಯ ಹೆಸರಲ್ಲಿ ನೆಮ್ಮದಿಯಿಂದ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ’ ಎಂದು ವಾಯುವಿಹಾರಿ ಧನಂಜಯ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.

ಆಹಾರದ ತಟ್ಟೆ ಮೇಲೂ ದೂಳು!

ಚನ್ನಮ್ಮ ವೃತ್ತದ ಸುತ್ತಮುತ್ತ ಇರುವ ಔಷಧಿ ಅಂಗಡಿ ಬೇಕರಿ ಅಂಗಡಿ ಹೋಟೆಲ್‌ ಸ್ವೀಟ್‌ ಮಾರ್ಟ್‌ ಆಟೊ ಮೊಬೈಲ್‌ ಅಂಗಡಿಗಳು ಸಹ ದೂಳಿನ ಸಮಸ್ಯೆಯಿಂದ ಹೊರತಾಗಿಲ್ಲ. ಬೇಕರಿ ಹಾಗೂ ಸಿಹಿ–ತಿನಿಸುಗಳ ಮೇಲೂ ಹಾಗೂ ಹೋಟೆಲ್‌ನಲ್ಲಿ ಆಹಾರ ವಿತರಿಸುವ ಪ್ಲೇಟ್‌ಗಳ ಮೇಲೂ ದೂಳು ಆವರಿಸುತ್ತಿದೆ. ಆಗಾಗ ಸಿಬ್ಬಂದಿ ಬಟ್ಟೆಯಿಂದ ದೂಳು ತೆಗೆಯುತ್ತ ಪ್ಲೇಟ್‌ಗಳನ್ನು ಒರೆಸುತ್ತಿರುವುದು ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.