ADVERTISEMENT

ಹುಬ್ಬಳ್ಳಿ| ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯ: ಮೇಯರ್ ಜ್ಯೋತಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:08 IST
Last Updated 7 ಡಿಸೆಂಬರ್ 2025, 6:08 IST
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢಶಾಲೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ಶಿವಾನಂದ ಅವರನ್ನು ಸನ್ಮಾನಿಸಲಾಯಿತು   
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢಶಾಲೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ಶಿವಾನಂದ ಅವರನ್ನು ಸನ್ಮಾನಿಸಲಾಯಿತು      

ಹುಬ್ಬಳ್ಳಿ: ‘ಮಕ್ಕಳಲ್ಲಿ ಸಾಧಿಸುವ ಛಲ ಇರಬೇಕು. ಶಿಕ್ಷಣ ಇದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ’ ಎಂದು ಹು–ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ನಗರದ ಲ್ಯಾಮಿಂಗ್ಟನ್ ಪ್ರೌಢಶಾಲೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ಅವ್ವ ಸೇವಾ ಟ್ರಸ್ಟ್‌ ವತಿಯಿಂದ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾನತಾಡಿದರು.

‘ತಂದೆ, ತಾಯಿಯು ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಕಷ್ಟಪಟ್ಟು ಓದಿಸುತ್ತಾರೆ. ಕೊನೆಗಾಲದಲ್ಲಿ ಅವರನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು. ಅದು ಮಕ್ಕಳ ಕರ್ತವ್ಯ ಮತ್ತು ಜವಾಬ್ದಾರಿ’ ಎಂದರು.

ADVERTISEMENT

ಆಕ್ಸ್‌ಫರ್ಡ್ ಕಾಲೇಜಿನ ಚೇರ್ಮನ್‌ ವಸಂತ ಹೊರಟ್ಟಿ ಮಾತನಾಡಿ, ‘ತಾಯಿ, ಅಜ್ಜಿಯಿಂದ ಸಂಸ್ಕಾರ ಕಲಿತಿದ್ದೇವೆ. ತಾಯಿಯ ಮಾತನ್ನು ಎಂದಿಗೂ ನಿರ್ಲಕ್ಷಿಸಬಾರದು. ಇಡೀ ಜಗತ್ತು ತಾಯಿಯ ಮಡಿಲಲ್ಲಿದೆ’ ಎಂದರು.

‘ಪ್ರತಿ ವರ್ಷ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತಿದ್ದು, ಅವ್ವ ಟ್ರಸ್ಟ್ ಮೂಲಕ ಹಲವರನ್ನು ಗುರುತಿಸಿ, ಸನ್ಮಾನಿಸಲಾಗುತ್ತಿದೆ’ ಎಂದು ಹೇಳಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ಶಿವಾನಂದ ಮಾತನಾಡಿ, ‘ಶಾಲೆ ಕೇವಲ ಸಿಮೆಂಟ್, ಇಟ್ಟಿಗೆಗಳಿಂದ ಕಟ್ಟಿದ ಗೂಡಲ್ಲ. ಅದು ಬದುಕಿನ ಮೌಲ್ಯಗಳನ್ನು ಕಲಿಸುವ ದೇಗುಲ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿದರು. ಎಸ್‌ಜೆಎಂವಿಎಸ್ ಮಹಿಳಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಸುಪ್ರಿಯಾ ಮಲಶೆಟ್ಟಿ ಉಪನ್ಯಾಸ ನೀಡಿದರು.

ಲ್ಯಾಮಿಂಗ್ಟನ್ ಶಾಲಾ ಸುಧಾರಣಾ ಸಮಿತಿಯ ಚೇರ್ಮನ್‌ ಶಶಿ ಸಾಲಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ವಿದ್ಯಾ ವಂಟಮುರಿ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಪ್ರೊ. ಕೆ.ಎಸ್. ಕೌಜಲಗಿ ಇದ್ದರು. 

ಉನ್ನತ ಸಾಧನೆ ಮಾಡಲು ಸಲಹೆ

‘ತಾಯಿ ಕಲಿಸುವ ಮೌಲ್ಯವನ್ನು ಯಾವ ಗ್ರಂಥಗಳು ವಿಶ್ವವಿದ್ಯಾಲಯಗಳು ನೀಡಲು ಸಾಧ್ಯವಿಲ್ಲ. ಶಿಕ್ಷಕರು ಮತ್ತು ಪೋಷಕರು ಮಕ್ಕಳ ಎರಡು ಕಣ್ಣುಗಳಿದ್ದಂತೆ. ಉನ್ನತ ಸಾಧನೆಯ ಮೂಲಕ ಮಕ್ಕಳು ಅವರಿಗೆ ಕೀರ್ತಿ ತರಬೇಕು’ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು. ‘ಮಾತೃಪ್ರಧಾನ ವ್ಯವಸ್ಥೆಯಲ್ಲಿ ಅನ್ಯೋನ್ಯತೆ ಇರುತ್ತದೆ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ಮಾತಿದೆ. ತಾಯಿ ನೀಡುವ ಸಂಸ್ಕಾರ ವಿದ್ಯೆಯ ಬುತ್ತಿಯು ಮಕ್ಕಳಿಗೆ ಜೀವನವಿಡಿ ಉಪಯೋಗಕ್ಕೆ ಬರುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.