ಹುಬ್ಬಳ್ಳಿ: ಚುನಾವಣಾ ಸಮೀಕ್ಷೆಗೆ ಸಂಬಂಧವಿಲ್ಲದ ವ್ಯಕ್ತಿಗಳ ಜೊತೆ ಬ್ಲಾಕ್ ಮಟ್ಟದ ಅಧಿಕಾರಿ (ಬಿಎಲ್‌ಒ) ಚಾಲುಕ್ಯನಗರದಲ್ಲಿ ಸಮೀಕ್ಷೆ ನಡೆಸಿದ್ದು, ಅದನ್ನು ಪ್ರಶ್ನಿಸಿದ ಕುಟುಂಬದ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಶಾಂತ ಬೊಮ್ಮಾಜಿ ಅವರು ದೂರು ನೀಡಿದ್ದಾರೆ. ಇದೇ ಗಲಾಟೆಗೆ ಸಂಬಂಧಿಸಿ ಪಾಲಿಕೆಯ ಸ್ಥಳೀಯ ಸದಸ್ಯೆ ಸುವರ್ಣಾ ಕಲಕುಂಟ್ಲ ಅವರು ಸ್ಥಳಕ್ಕೆ ತೆರಳಿದಾಗ, ಅವರ ಮೇಲೆ ಸುಜಾತಾ ಹಂಡಿ, ಮರಿಯಾದಾಸ ಮತ್ತು ಕಮಲಮ್ಮ ಮತ್ತು ಮೇರಿ ಅವರು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಆರೋಪದ ಕುರಿತು ಮತ್ತೊಂದು ಪ್ರಕರಣ ದಾಖಲಾಗಿದೆ.
‘ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.59ರ 179ರ ಬೂತ್ ಮಟ್ಟದ ಅಧಿಕಾರಿ ನಂದಿನಿ ಕುಲಕರ್ಣಿ ಅವರು ಚಾಲುಕ್ಯನಗರದಲ್ಲಿ ಕಾನೂನು ಬಾಹಿರವಾಗಿ ಇಬ್ಬರು ವ್ಯಕ್ತಿಗಳ ಜೊತೆ ಸಮೀಕ್ಷೆ ನಡೆಸುತ್ತಿದ್ದರು. ಕುಟುಂಬದ ವ್ಯಕ್ತಿಗಳು ಆ ಇಬ್ಬರು ವ್ಯಕ್ತಿಗಳಿಗೆ ‘ನೀವು ಅಧಿಕಾರಿಗಳಲ್ಲ, ಆಧಾರ್ ಕಾರ್ಡ್ ನೀಡುವುದಿಲ್ಲ’ ಎಂದು ಹೇಳಿದ್ದಕ್ಕೆ, ಹಲ್ಲೆ ನಡೆಸಿದ್ದಾರೆ. ಬಿಜೆಪಿಗೆ ಸಹಾಯ ಮಾಡುವ ಉದ್ದೇಶದಿಂದ ಕುಟುಂಬದ ಮಾಹಿತಿಯನ್ನು ಅವರು ಸಂಗ್ರಹಿಸುತ್ತಿದ್ದರು’ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.
ಧಾರವಾಡದ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಂದಿನಿ ಕುಲಕರ್ಣಿ ಅವರು, ಚುನಾವಣೆ ಸಮೀಕ್ಷೆಗೆ ಸಂಬಂಧವಿಲ್ಲದವರನ್ನು ಕರೆದುಕೊಂಡು ಸಮೀಕ್ಷೆ ನಡೆಸುತ್ತಿದ್ದರು. ಈ ಕುರಿತು ಗದ್ದಲವಾದಾಗ ಸ್ಥಳೀಯರು ನನಗೆ ತಿಳಿಸಿದ್ದು, ಸ್ಥಳಕ್ಕೆ ಹೋದಾಗ ನನ್ನ ಮೇಲೂ ಹಲ್ಲೆ ನಡೆಸಿ ನಿಂದಿಸಿದ್ದಾರೆ. ಪ್ರಕರಣ ದಾಖಲಿಸಿದ್ದು, ಪಾಲಿಕೆ ಆಯುಕ್ತರಿಗೂ ದೂರು ನೀಡಿದ್ದೇನೆ’ ಎಂದು ಸುವರ್ಣಾ ಕಲಕುಂಟ್ಲ ಹೇಳಿದರು.
‘ಎರಡು ಪ್ರತ್ಯೇಕ ದೂರುಗಳು ಬಂದಿದ್ದು, ಪರಿಶೀಲಿಸಿ ಪ್ರಕರಣ ದಾಖಲಿಸಕೊಳ್ಳಲಾಗುತ್ತಿದೆ’ ಎಂದು ಇನ್‌ಸ್ಪೆಕ್ಟರ್ ಕೆ.ಎಸ್.ಹಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.