ADVERTISEMENT

ಇ–ವಾಹನಗಳತ್ತ ಹುಬ್ಬಳ್ಳಿಗರ ಚಿತ್ತ: ಏರುತ್ತಿದೆ ಎಲೆಕ್ಟ್ರಿಕ್‌ ವಾಹನಗಳ ನೋಂದಣಿ

ವರ್ಷದಿಂದ ವರ್ಷಕ್ಕೆ ಏರುತ್ತಿದೆ ಎಲೆಕ್ಟ್ರಿಕ್‌ ವಾಹನಗಳ ನೋಂದಣಿ

ನಾಗರಾಜ ಚಿನಗುಂಡಿ
Published 19 ಫೆಬ್ರುವರಿ 2025, 5:06 IST
Last Updated 19 ಫೆಬ್ರುವರಿ 2025, 5:06 IST
ಹುಬ್ಬಳ್ಳಿಯ ರಸ್ತೆಗಳಲ್ಲಿ ಇಂಧನ ಬೈಕ್‌ನೊಂದಿಗೆ ಎಲೆಕ್ಟ್ರಿಕ್‌ ಬೈಕ್‌ಗಳ ಓಡಾಟವು ಸಾಮಾನ್ಯವಾಗಿ ಕಾಣಬಹುದು
ಹುಬ್ಬಳ್ಳಿಯ ರಸ್ತೆಗಳಲ್ಲಿ ಇಂಧನ ಬೈಕ್‌ನೊಂದಿಗೆ ಎಲೆಕ್ಟ್ರಿಕ್‌ ಬೈಕ್‌ಗಳ ಓಡಾಟವು ಸಾಮಾನ್ಯವಾಗಿ ಕಾಣಬಹುದು   

ಹುಬ್ಬಳ್ಳಿ: ಪರಿಸರಸ್ನೇಹಿ ಹಾಗೂ ಇಂಧನ ವೆಚ್ಚವಿಲ್ಲದೆ ಸಂಚರಿಸಲು ಅನುಕೂಲವಾಗುವ ಎಲೆಕ್ಟ್ರಿಕ್‌ ಕಾರು ಹಾಗೂ ಬೈಕ್‌ ಖರೀದಿಗೆ ಹುಬ್ಬಳ್ಳಿಯ ಜನರ ಒಲವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಹುಬ್ಬಳ್ಳಿಯಲ್ಲಿ ವಾಹನಗಳು ಸಂಚರಿಸುವ ಮಾರ್ಗಗಳಲ್ಲಿ ಎಲೆಕ್ಟ್ರಿಕ್‌ ಬೈಕ್‌ ಮತ್ತು ಕಾರುಗಳು ಕಾಣುತ್ತವೆ. ವಿದ್ಯುತ್‌ ಚಾಲಿತ ಹಸಿರು ವರ್ಣದ ಸಂಖ್ಯಾಫಲಕವಿರುವ ವಾಹನಗಳು ಹುಬ್ಬಳ್ಳಿಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿವೆ. ಟಾಟಾ ಮೋಟಾರ್ಸ್‌, ಜಿಎಂ ಮೋಟಾರ್ಸ್‌, ಮಹೀಂದ್ರಾ ಸೇರಿದಂತೆ ಪೆಟ್ರೊಲ್‌, ಡೀಸೆಲ್‌ ಚಾಲಿತ ಕಾರು ತಯಾರಿಸುವ ಬಹುತೇಕ ಕಂಪೆನಿಗಳು ವಿದ್ಯುತ್‌ಚಾಲಿಕ (ಇವಿ) ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಪೆಟ್ರೊಲ್‌ ಚಾಲಿಕ ಬೈಕ್‌ ಮಾರಾಟದ ಜನಪ್ರಿಯ ಕಂಪನಿಗಳಾದ ಹಿರೋ, ಹೊಂಡಾ, ಟಿವಿಎಸ್‌, ಬಜಾಜ್‌ ಸೇರಿದಂತೆ ಬಹಳಷ್ಟು ಕಂಪೆನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್‌ ಬೈಕ್‌ಗಳನ್ನು ಮಾರುಕಟ್ಟೆಗೆ ತಂದಿವೆ. ಓಲಾ, ಏಥರ್‌, ಆ್ಯಂಪರ್‌, ಕೈನೆಟಿಕ್‌ ಗ್ರೀನ್‌, ಇ–ಸ್ಪ್ರಿಂಟೊ, ಒಕಿನಾವಾ, ವಿದಾ, ಲೆಕ್ಟ್ರಿಕ್ಸ್‌, ರಿವೊಲ್ಟ್‌, ನೆಕ್ಸ್‌ಜು ಕಂಪೆನಿಯ ಎಲೆಕ್ಟ್ರಿಕ್‌ ಬೈಕ್‌ ಷೋ ರೂಂಗಳಿವೆ. ಎಲೆಕ್ಟ್ರಿಕ್‌ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಹುತೇಕ ಕಂಪೆನಿಗಳು ಹುಬ್ಬಳ್ಳಿಯಲ್ಲೂ ಷೋ ರೂಂ ತೆರೆದಿವೆ. 

ADVERTISEMENT

ಎಲೆಕ್ಟ್ರಿಕ್‌ ಬಸ್‌ಗಳು, ಎಲೆಕ್ಟ್ರಿಕ್‌ ಆಟೊಗಳು ಹಾಗೂ ಎಲೆಕ್ಟ್ರಿಕ್‌ ಸರಕು ಸಾಗಣೆ ವಾಹನಗಳು ಈಗಾಗಲೇ ಮಾರುಕಟ್ಟೆಗೆ ವಿವಿಧ ಕಂಪೆನಿಗಳು ಬಿಡುಗಡೆ ಮಾಡಿವೆ. ಹುಬ್ಬಳ್ಳಿಯಲ್ಲೂ ಎಲೆಕ್ಟ್ರಿಕ್‌ ಆಟೊಗಳು ರಸ್ತೆಗೆ ಲಗ್ಗೆ ಇಟ್ಟಿವೆ.

‘ಹುಬ್ಬಳ್ಳಿಯಲ್ಲಿ ಬಿಸಿಲು ಇತ್ತೀಚೆಗೆ ಹೆಚ್ಚಳವಾಗುತ್ತಿದೆ. ಸಾಮಾನ್ಯವಾಗಿ ತಾಪಮಾನ ಯಾವಾಗಲೂ ಸಹನೀಯ ಸ್ಥಿತಿಯಲ್ಲೇ ಇರುತ್ತದೆ. ಹೀಗಾಗಿ ಎಲೆಕ್ಟ್ರಿಕ್‌ ವಾಹನಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವ ಖಾತರಿ ಜನರಲ್ಲಿ ಮನದಟ್ಟಾಗಿದೆ. ಇಂಧನಕ್ಕಾಗಿ ಹಣ ಕೊಡುವ ತಾಪತ್ರಯ ಇರುವುದಿಲ್ಲ ಹಾಗೂ ಪರಿಸರ ಸಂರಕ್ಷಣೆಗೂ ಪರೋಕ್ಷವಾಗಿ ಸಹಾಯವಾಗುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಎಲೆಕ್ಟ್ರಿಕ್‌ ಕಾರು, ಬೈಕ್‌ ಖರೀದಿಸುತ್ತಿದ್ದಾರೆ’ ಎಂದು ಸಹದೇವ ನಗರ ನಿವಾಸಿ ಗಂಗಾಧರ ಕುಸುಗಲ್‌ ಹೇಳಿದರು.

ಹುಬ್ಬಳ್ಳಿ ತಾಲ್ಲೂಕು ಹಾಗೂ ಕುಂದಗೋಳ ವ್ಯಾಪ್ತಿ ಹೊಂದಿರುವ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ 2022–23ನೇ ಸಾಲಿನಲ್ಲಿ ಒಟ್ಟು 2,930 ಎಲೆಕ್ಟ್ರಿಕ್‌ ಬೈಕ್‌ ಹಾಗೂ 100 ಎಲೆಕ್ಟ್ರಿಕ್‌ ಕಾರುಗಳು ನೋಂದಣಿಯಾಗಿವೆ. 2023–24ನೇ ಸಾಲಿನಲ್ಲಿ ಎಲೆಕ್ಟ್ರಿಕ್‌ ಬೈಕ್‌ ನೋಂದಣಿ ಪ್ರಮಾಣವು ಶೇ 31ರಷ್ಟು ಹೆಚ್ಚಳವಾಗಿದ್ದು, ಒಟ್ಟು 3,843 ಎಲೆಕ್ಟ್ರಿಕ್‌ ಬೈಕ್‌ಗಳು ನೋಂದಣಿಯಾಗಿವೆ. ಇದೇ ಸಾಲಿನಲ್ಲಿ 189 ಎಲೆಕ್ಟ್ರಿಕ್‌ ಕಾರುಗಳು ನೋಂದಣಿಯಾಗಿವೆ.

ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ಮೂರು ತಿಂಗಳಲ್ಲೂ ಎಲೆಕ್ಟ್ರಿಕ್‌ ವಾಹನಗಳ ಖರೀದಿ ಭರಾಟೆ ಮುಂದುವರಿದಿದೆ. ಇಂಧನ ಚಾಲಿತ ಕಾರು, ಬೈಕ್‌ ಹೊಂದಿದ್ದರೂ ವಿದ್ಯುತ್‌ ಚಾಲಿತ ವಾಹನವೊಂದನ್ನು ಖರೀದಿಸುವ ಆಸಕ್ತಿಯಿಂದ ಜನರು ಷೋ ರೂಂಗಳಿಗೆ ಭೇಟಿಕೊಟ್ಟು ವಿಚಾರಿಸುತ್ತಿದ್ದಾರೆ. ದೂರದ ಪ್ರಯಾಣ ಹಾಗೂ ತುಂಬಾ ಭಾರವಾದ ಸರಕು ಸಾಗಣೆ ಮಾಡುವಾಗ ಇಂಧನ ಚಾಲಿತ ವಾಹನ ಬಳಸಬಹುದು. ಇನ್ನುಳಿದ ಸಂದರ್ಭಗಳಲ್ಲಿ ವಿದ್ಯುತ್‌ಚಾಲಿತ ವಾಹನವೇ ಸರಿ ಎನ್ನುವುದನ್ನು ಸಾಮಾನ್ಯವಾಗಿ ಜನರು ಹೇಳುತ್ತಿದ್ದಾರೆ.

ವಾಯುಮಾಲಿನ್ಯ ಆಗದಂತೆ ಪರಿಸರಸ್ನೇಹಿ ವಾಹನಗಳನ್ನು ಪ್ರೋತ್ಸಾಹಿಸಲು ಸರ್ಕಾರ ಕೂಡಾ ಎಲ್ಲ ರೀತಿಯ ವಿದ್ಯುತ್‌ಚಾಲಿತ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿದೆ.
ಕೆ.ದಾಮೋದರ್‌, ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ

ಎಎಂಐ ಸೌಲಭ್ಯ: ಇಂಧನ ಚಾಲಿತ ವಾಹನಗಳನ್ನು ಖರೀಸುವುದಕ್ಕೆ ಬ್ಯಾಂಕುಗಳು ಮತ್ತು ಫೈನಾನ್ಸ್‌ಗಳು ಸಾಲ ಸೌಲಭ್ಯ ಒದಗಿಸುತ್ತಿವೆ. ಅದೇ ಮಾದರಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೂ ನಿಗದಿತ ಬಡ್ಡಿ ಆಧಾರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ. ಮಾಸಿಕ ಕಂತುಗಳಲ್ಲಿ ಸಾಲ ಮರುಪಾವತಿ (ಇಎಂಐ) ಮಾಡುವುದಕ್ಕೆ ಅವಕಾಶವನ್ನು ಹಣಕಾಸು ಸಂಸ್ಥೆಗಳು ಒದಗಿಸುತ್ತಿವೆ. ಎಲೆಕ್ಟ್ರಿಕ್‌ ಕಾರು, ಬೈಕ್‌ ಷೋ ರೂಂಗಳಲ್ಲಿ ಸಾಲಸೌಲಭ್ಯದ ಬಗ್ಗೆ ಮಾಹಿತಿ ನೀಡುವ ಪ್ರತಿನಿಧಿಗಳಿದ್ದಾರೆ.

ಹುಬ್ಬಳ್ಳಿಯಲ್ಲಿರುವ ವಿದ್ಯುತ್‌ಚಾಲಿತ ಬೈಕ್‌ ಹಾಗೂ ಕಾರು ಷೋ ರೂಂಗಳಲ್ಲಿ ಜನರು ಮುಗಿಬಿದ್ದು ಮಾಹಿತಿ ಪಡೆಯುವುದು ಕಂಡುಬರುತ್ತಿದೆ.

ಸರ್ಕಾರದ ಆದಾಯಕ್ಕೆ ಖೋತಾ

ಇಂಧನ ಚಾಲಿತ ವಾಹನಗಳಿಗೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ವಾಹನಗಳನ್ನು ಜನರು ಖರೀದಿಸಿದಾಗ ಸರ್ಕಾರದ ಬೊಕ್ಕಸಕ್ಕೆ ಒಂದು ವಾಹನದಿಂದ ಸಿಗಬೇಕಿದ್ದ ವಾಹನ ತೆರಿಗೆ ಸಿಗುವುದಿಲ್ಲ. ವಿದ್ಯುತ್‌ಚಾಲಿತ ಕಾರು ಬೈಕ್‌ ಹಾಗೂ ಇನ್ನಿತರ ಯಾವುದೇ ವಾಹನದಿಂದ ನೋಂದಣಿ ಶುಲ್ಕ ಮತ್ತು ಸ್ಮಾರ್ಟ್‌ಕಾರ್ಡ್‌ ಶುಲ್ಕ ಮಾತ್ರ ಆರ್‌ಟಿಓ ಕಚೇರಿಗೆ ಕೊಡಬೇಕಾಗುತ್ತದೆ. ಇಂಧನ ಚಾಲಿತ ಒಂದು ಕಾರು ಖರೀದಿಯಾದಾಗ ಸರಾಸರಿ ₹15,5400 ವಾಹನ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ. ಪೆಟ್ರೊಲ್‌ ಚಾಲಿತ ಒಂದು ಬೈಕ್‌ನಿಂದ ಸರಾಸರಿ ₹13320 ವಾಹನ ತೆರಿಗೆ ಸಂಗ್ರಹವಾಗುತ್ತದೆ. ವಿದ್ಯುತ್‌ಚಾಲಿತ ವಾಹನಗಳ ಖರೀದಿ ಹೆಚ್ಚಳವಾದಂತೆ ಪ್ರತಿವರ್ಷವೂ ಸರ್ಕಾರದ ಆದಾಯಕ್ಕೆ ಖೋತಾ ಆಗುತ್ತಿದೆ. 2022–23ನೇ ಹಣಕಾಸು ವರ್ಷದಲ್ಲಿ ಹುಬ್ಬಳ್ಳಿ ಆರ್‌ಟಿಓ ಕಚೇರಿಯಿಂದ ಸಂಗ್ರಹವಾಗಬೇಕಿದ್ದ ವಾಹನ ತೆರಿಗೆ ಆದಾಯದಲ್ಲಿ ಒಟ್ಟು ₹5.48 ಕೋಟಿ ಆದಾಯ ಕಡಿಮೆ ಆಗಿದೆ. 2023–24ರಲ್ಲಿ ವಿದ್ಯುತ್‌ಚಾಲಿತ ವಾಹನಗಳ ಖರೀದಿ ಏರಿಕೆ ಆಗಿದ್ದರಿಂದ ₹8.06 ಕೋಟಿ ತೆರಿಗೆ ಆದಾಯ ಕಡಿಮೆ ಸಂಗ್ರಹವಾಗಿದೆ. ಪರೋಕ್ಷವಾಗಿ ಪರಿಸರ ಮಾಲಿನ್ಯ ತಗ್ಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.