
ಕುಂದಗೋಳ: ‘ಸರ್ಕಾರಗಳು ಬಜೆಟ್‌ನಲ್ಲಿ ಹಣ ನಿಗದಿ ಮಾಡಿ ರೈತರ ಬೆಳೆ ಖರೀದಿ ಮಾಡಬೇಕು’ ಎಂದು ಶಾಸಕ ಎಂ.ಆರ್.ಪಾಟೀಲ ಹೇಳಿದರು.
ಪಟ್ಟಣದ ತಾಲ್ಲೂಕು ಕೃಷಿ ಇಲಾಖೆ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣಸಿಂಗ್ ಜಯಂತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ, ನಾವು ರಾಜಕರಣಿಗಳು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತೇವೆ. ಆದರೆ ರೈತರ ಬೆಳೆಗಳಿಗೆ ನಿಗದಿತ ದರ ಸಿಗುತ್ತಿಲ್ಲ. ಖರ್ಚು, ಕೂಲಿ ದರ ಹೆಚ್ಚಿನ ಹೊರೆಯಾಗಿದೆ. ಇನ್ನೂ ಬೆಳೆ ವಿಮೆ ಬರುತ್ತಿಲ್ಲ. ಆಣೆವಾರು ಪಟ್ಟಿಗೆ ಬಾರದಿದ್ದರು ರೈತರಿಂದ ವಿಮೆ ಕಟ್ಟಿಸಿಕೊಳ್ಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ದಿನಾಚರಣೆ ಸಾರ್ಥಕವಾಗಬೇಕಾದರೆ ಅಧಿಕಾರುಗಳು, ವಿಜ್ಞಾನಿಗಳು, ರೈತರು ಹಾಗೂ ನಾವು ಸಭೆ ಮಾಡಿ ಚರ್ಚೆ ಮಾಡುವ ಮೂಲಕ ತೊಂದರೆ ಸಾಧಕ, ಬಾಧಕ ಚರ್ಚೆಯಾಗಿ ಅನುಕೂಲವಾಗುವಂತ ವಾತಾವರಣ ನಿರ್ಮಾಣವಾಗಬೇಕು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರೈತರ ಹೆಸರು ಖರೀದಿಗೆ ಎ, ಬಿ, ಸಿ ಮಾನದಂಡ ಮಾಡಿ, ಬೆಲೆ ನಿಗದಿಪಡಿಸಿ ಖರೀದಿ ಮಾಡುವ ವ್ಯವಸ್ಥೆಯನ್ನು ಮಾಡಿಕೊಟ್ಟರು ಎಂದು ಶ್ಲಾಘಿಸಿದರು.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಸಭೆ ನಡೆಸಿ ಖರೀದಿ ಕೇಂದ್ರ ತೆರೆಯುವ ವ್ಯವಸ್ಥೆಯನ್ನು ಸಕಾಲಕ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ತಹಶಿಲ್ದಾರ ರಾಜು ಮಾವರಕರ ಮಾತನಾಡಿ, ಕುಂದಗೋಳ ಭಾಗ ಶೇ 90ರಷ್ಟು ಜನ ರೈತರು ಇದ್ದಾರೆ. ಅವರಿಗೆ ₹ 10 ಕೋಟಿ ಬೆಳೆ ಪರಿಹಾರ ನೀಡಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಕ್ಷಕ್ಷ ಅರವಿಂದ ಕಟಗಿ ಮಾತನಾಡಿದರು.
ಎಫ್.ಬಿ.ಸೊರಟೂರ ಕೃಷಿ ಉಪನ್ಯಾಸ ನೀಡಿದರು. ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಸಹಾಯಕ ಕೃಷಿ ನಿರ್ದೇಶಕಿ ರೇಖಾ ಗಡ್ಡದವರ ಹಾಗೂ ಬಾಬಾಜಾನ ಮಿಶ್ರಿಕೊಟಿ , ಸೋಮರಾವ ದೇಸಾಯಿ, ನಾಗರಾಜ ದೇಶಪಾಂಡೆ, ರಮೇಶ ಕೊಪ್ಪದ, ಸಿದ್ಲಿಂಗಪ್ಪ ಬಾಳಿಕಾಯಿ, ಮಾಲತೇಶ ಶ್ಯಾಗೋಟಿ, ಮಾಣಿಕ್ಯ ಚಿಲ್ಲೂರ, ಖಾದರಸಾಬ್ ಡಗಲಿ, ಸಿದ್ದಪ್ಪ ಇಂಗಳಳ್ಳಿ, ಭರಮಣ್ಣ ಸೊರಟೂರ, ದೇವಪ್ಪ ಇಚ್ಚಂಗಿ, ಮಲ್ಲಿಕಾರ್ಜುನ ಕುನ್ನೂರ, ಮಲ್ಲಪ್ಪ ಮಾರಡಗಿ, ಶೇಖಣ್ಣ ಬಾಳಿಕಾಯಿ, ಹೇಮನಗೌಡ ಬಸವನಗೌಡ್ರ, ಬಸವರಾಜ ಶಂಭೋಜಿ, ಡಿ.ಎಸ್ ಗಂಗಾಯಿ, ವೆಂಕನಗೌಡ ಕಂಟಪ್ಪಗೌಡ್ರ, ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.