ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ಧ ಉಡುಪು, ವಾಹನ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಕಂಪನಿಗಳು ಸಾಕಷ್ಟು ರಿಯಾಯಿತಿ ಹಾಗೂ ವಿನಾಯಿತಿಗಳನ್ನು ನೀಡಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ವಿವಿಧ ಮಾಲ್‌ಗಳು, ಬಟ್ಟೆ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ.
ನಗರದ ಕೊಪ್ಪಿಕರ್ ರಸ್ತೆ, ದಾಜಿಬಾನಪೇಟೆ, ಮೌಲಾನಾ ಅಬ್ದುಲ್ ಕಲಾಂ ರಸ್ತೆ ಹಾಗೂ ಪ್ರಮುಖ ಮಾರ್ಗಗಳಲ್ಲಿ ವಿವಿಧ ವಸ್ತುಗಳ ಖರೀದಿಗಾಗಿ ಜನರು ನೆರೆಯುತ್ತಿದ್ದಾರೆ.
ದಾಜಿಬಾನಪೇಟೆ ಮಾರ್ಗದಲ್ಲಿ ತರಹೇವಾರಿ ಸೀರೆ ಮಾರಾಟ ಮಳಿಗೆಗಳಿದ್ದು, ದೀಪಾವಳಿ ಹಬ್ಬಕ್ಕಾಗಿ ಶೇ 30ರಿಂದ ಶೇ 50ರಷ್ಟು ರಿಯಾಯಿತಿ ನೀಡುತ್ತಿರುವ ಬಗ್ಗೆ ಫಲಕಗಳನ್ನು ಅಳವಡಿಸಲಾಗಿದೆ. ಅಲ್ಲದೆ ಮಾಧ್ಯಮಗಳ ಮೂಲಕವೂ ರಿಯಾಯಿತಿ ಕುರಿತು ಪ್ರಚಾರ ಮಾಡಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೀರೆ ಖರೀದಿಗೆ ಧಾವಿಸುತ್ತಿದ್ದಾರೆ.
ಝಗಮಗಿಸುವ ದೀಪ: ದೀಪ ಬೆಳಗಿಸುವುದು ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆ. ಈ ಕಾರಣ ಮಾರುಕಟ್ಟೆಯಲ್ಲಿ ವಿದ್ಯುತ್ ದೀಪಗಳಿಗೆ ಹೆಚ್ಚು ಬೇಡಿಕೆ ಇದ್ದುದು ಕಂಡು ಬಂತು. ಬಟರ್ ಮಾರ್ಕೆಟ್, ಉಳ್ಳಾಗಡ್ಡಿ ಮಠ ರಸ್ತೆ, ಬೆಳಗಾಂವ ಗಲ್ಲಿಯಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳ ಮಳಿಗೆಗಳಲ್ಲಿ ಜನರು ಬಗೆಬಗೆಯ ವಿದ್ಯುತ್ ದೀಪಗಳನ್ನು ಖರೀದಿಸಿದರು.
ಮಾಲ್‌ಗಳಲ್ಲಿ ದಟ್ಟಣೆ: ನಗರದ ಗೋಕುಲ ರಸ್ತೆ, ಜೆ.ಸಿ.ರಸ್ತೆ ಹಾಗೂ ಕೊಪ್ಪಿಕರ್ ರಸ್ತೆಯಲ್ಲಿರುವ ಶಾಪಿಂಗ್ ಮಾಲ್‌ಗಳಿಗೆ ಜನರು ಖರೀದಿಗಾಗಿ ಮುಗಿಬೀಳುತ್ತಿದ್ದಾರೆ. ಸಿದ್ಧಉಡುಪು ಮಾತ್ರವಲ್ಲದೆ ಹಬ್ಬದ ಸಂದರ್ಭದಲ್ಲಿ ರಿಯಾಯಿತಿ ಘೋಷಿಸಿದ್ದರಿಂದ ಗೃಹೋಪಯೋಗಿ ವಸ್ತುಗಳ ಮಾರಾಟವೂ ಜೋರಾಗಿದೆ.
ಗೋಕುಲ ರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾಗಿರುವ ವಿವಿಧ ಮಳಿಗೆ, ಮಾಲ್‌ಗೆ ಕಳೆದ ಕೆಲವು ದಿನಗಳಿಂದ ಜನರು ಹೆಚ್ಚು ಭೇಟಿ ನೀಡುತ್ತಿದ್ದಾರೆ. ಇದರಿಂದ ಮಾಲ್‌ಗಳ ಎದುರು ಜನದಟ್ಟಣೆ, ವಾಹನ ದಟ್ಟಣೆ ಏರ್ಪಡುತ್ತಿದೆ. ಮಾರಾಟಗಾರರಲ್ಲಿ ಮತ್ತು ಖರೀದಿದಾರರಲ್ಲಿ ದೀಪಾವಳಿ ಸಂಭ್ರಮ ಎದ್ದು ಕಾಣುತ್ತಿದೆ.
‘ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಮಳಿಗೆಗಳಲ್ಲಿ ರಿಯಾಯಿತಿ ಘೋಷಿಸಲಾಗಿದೆ. ಉಡುಪುಗಳು ಮತ್ತು ಬಗೆಬಗೆಯ ವಸ್ತುಗಳನ್ನು ಖರೀದಿಸಿದ್ದರಿಂದ ಖುಷಿಯಾಗಿದೆ’ ಎಂದು ಗ್ರಾಹಕರೊಬ್ಬರು ಸಂತಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.