ADVERTISEMENT

ಹುಬ್ಬಳ್ಳಿ | ಮೇಲ್ಸೇತುವೆ ಕಾಮಗಾರಿ ಸ್ಥಗಿತ

ಮುಂಜಾಗ್ರತಾ ಕ್ರಮಗಳ ವರದಿ ನಂತರವೇ ಅನುಮತಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 4:35 IST
Last Updated 2 ಅಕ್ಟೋಬರ್ 2024, 4:35 IST
ಹುಬ್ಬಳ್ಳಿ ಅಯೋಧ್ಯಾ ಹೋಟೆಲ್‌ ಎದುರು ನಡೆಯುತ್ತಿರುವ ಮೇಲ್ಸೇತುವೆಗೆ ಪ್ಲಾಸ್ಟಿಕ್‌ ಜಾಲರಿ ಅಳವಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ ಅಯೋಧ್ಯಾ ಹೋಟೆಲ್‌ ಎದುರು ನಡೆಯುತ್ತಿರುವ ಮೇಲ್ಸೇತುವೆಗೆ ಪ್ಲಾಸ್ಟಿಕ್‌ ಜಾಲರಿ ಅಳವಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ‘ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಅಪಾಯಕಾರಿ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಪುನರಾರಂಭಿಸಲು ಜಿಲ್ಲಾಡಳಿತ ಇನ್ನೂ ಅನುಮತಿ ನೀಡಿಲ್ಲ.

ಸಂಭವನೀಯ ಅಪಾಯಕಾರಿ ಸ್ಥಳಗಳನ್ನು ಪರಿಶೀಲಿಸಿ, ಕೈಗೊಂಡ ಮುಂಜಾಗ್ರತಾ ಕ್ರಮಗಳ ವರದಿ ಸಲ್ಲಿಸುವಂತೆ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿತ್ತು. ಸೂಚನೆ ನೀಡಿ ಮೂರು ವಾರವಾದರೂ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕಾಮಗಾರಿ ಆರಂಭಿಸಲು ಒಪ್ಪಿಗೆ ಕೊಟ್ಟಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿದೆ.

ಅರ್ಧಮರ್ಧ ಕಾಮಗಾರಿ ನಡೆದ ಸ್ಥಳದಲ್ಲಿ ಗುತ್ತಿಗೆ ಪಡೆದ ಕಂಪನಿ ಕೆಲದಿನಗಳಿಂದ ಮುಂಜಾಗ್ರತಾ ಕಾರ್ಯ ಕೈಗೊಳ್ಳುತ್ತಿದೆ. ಕ್ಲಬ್‌ ರಸ್ತೆ, ಹಳೇಕೋರ್ಟ್‌ ವೃತ್ತ, ಹಳೇ ಬಸ್‌ ನಿಲ್ದಾಣದ ಎದುರು, ಬಸವವನ ಬಳಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿದ್ದು, ಸದ್ಯ ಹಳೇ ಬಸ್‌ ನಿಲ್ದಾಣದ ಅಯೋಧ್ಯಾ ಹೋಟೆಲ್‌ ಬಳಿ ಮೇಲ್ಸೇತುವೆಗೆ ಪ್ಲಾಸ್ಟಿಕ್‌ ಜಾಲರಿ ಅಳವಡಿಸುವ ಕಾರ್ಯ ನಡೆಸಿದೆ. ಈ ಎಲ್ಲ ಸ್ಥಳಗಳಿಗೆ ಜಾಲರಿ ಅಳವಡಿಸಿಲು ಇನ್ನೂ ಎರಡು ಅಥವಾ ಮೂರು ವಾರಗಳು ಬೇಕಾಗಬಹುದು ಎಂದು ಜಾಲರಿ ಅಳವಡಿಸುವ ಕಾರ್ಮಿಕರು ಹೇಳುತ್ತಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ‘ಅಪಾಯಕಾರಿ ಸ್ಥಳಗಳಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ವರದಿಯನ್ನು ಇಲಾಖೆ ಇನ್ನೂ ಸಲ್ಲಿಸಿಲ್ಲ. ಅದಕ್ಕೆ ಸಂಬಂಧಿಸಿ ಮುಂಜಾಗ್ರತಾ ಕ್ರಮವಾಗಿ ಕೆಲವು ಸ್ಥಳಗಳಲ್ಲಿ ಕಬ್ಬಿಣದ ಜಾಲರಿ ಅಳವಡಿಸುವ ಕೆಲಸ ನಡೆದಿದೆ. ಯಾವ್ಯಾವ ಸ್ಥಳಗಳಲ್ಲಿ ಯಾವ್ಯಾವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ, ಅವುಗಳಿಂದಾಗುವ ಸಂಭವನೀಯ ಅಪಾಯಗಳೇನು ಎನ್ನುವುದನ್ನು ಪೊಲೀಸ್‌ ಇಲಾಖೆ ಜೊತೆ ಪರಿಶೀಲನೆ ನಡೆಸಿ, ವಾಹನಗಳ ಸಂಚಾರ ಬದಲಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ನಗರ ಮಧ್ಯ ಹಾಗೂ ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ನಡೆಸಬೇಕಿರುವುದರಿಂದ, ಅಗತ್ಯಕ್ಕಿಂತ ಹೆಚ್ಚಾಗಿ ಸುರಕ್ಷಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ತೀರಾ ಅಪಾಯಕಾರಿ ಎನಿಸುವ ಕಾಮಗಾರಿಯನ್ನು ರಾತ್ರಿ ವೇಳೆ ಅಥವಾ ಜನರ, ವಾಹನಗಳ ಸಂಚಾರ ಸ್ಥಗಿತಗೊಳಿಸಿ ನಡೆಸಲು ಸೂಚಿಸಲಾಗುವುದು. ಅರ್ಧಮರ್ಧ ನಡೆಸಿದ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ನಿರ್ದೇಶಿಸಲಾಗುವುದು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಾವು ಸಹ ಹೇಳುತ್ತಿದ್ದೇವೆ. ಆದರೆ, ಅವರು ಕೈಗೊಂಡ ಮುಂಜಾಗ್ರತಾ ವರದಿಯಾಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕಾಮಗಾರಿ ಸ್ಥಗಿತಕ್ಕೆ ಕಾರಣ: ಸೆಪ್ಟೆಂಬರ್‌ 10ರಂದು ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‌ಐ ನಾಬಿರಾಜ ಅವರ ತಲೆಮೇಲೆ ಹಳೇಕೋರ್ಟ್‌ ವೃತ್ತದ ಬಳಿ ಕಬ್ಬಿಣದ ರಾಡ್‌ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕಿಮ್ಸ್‌ಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಮೇಲ್ಸೇತುವೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಅಪಾಯ ಎದುರಾಗಬಹುದಾದ ಸ್ಥಳಗಳನ್ನು ಗುರುತಿಸಿ, ಕೈಗೊಂಡ ಮುಂಜಾಗ್ರತಾ ಕ್ರಮಗಳ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಸೂಚಿಸಿತ್ತು.

ಮುಂಜಾಗ್ರತಾ ಕ್ರಮವಾಗಿ ಮೇಲ್ಸೇತುವೆ ಮೇಲಿರುವ ಅವಶೇಷಗಳನ್ನು ಕಾರ್ಮಿಕರು ತೆಗೆಯುತ್ತಿದ್ದಾರೆ. ಕಾಮಗಾರಿ ಆರಂಭವಾದ ನಂತರ ವಾಹನಗಳ ಮಾರ್ಗ ಬದಲಾವಣೆಗೆ ಯೋಜನೆ ರೂಪಿಸಲಾಗುವುದು
ರಮೇಶ ಗೋಕಾಕ ಇನ್‌ಸ್ಪೆಕ್ಟರ್‌ ಉತ್ತರ ಸಂಚಾರ ಠಾಣೆ

ಶೀಘ್ರ ವರದಿ ಸಲ್ಲಿಕೆ: ಡಿಸಿದಿವ್ಯಪ್ರಭು

‘ಮೇಲ್ಸೇತುವೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯ ಕೆಲವು ಸಿಬ್ಬಂದಿ ಬಂಧನವಾಗಿರುವುದರಿಂದ ಲೋಕೋಪಯೋಗಿ ಇಲಾಖೆಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ವಿಳಂಬವಾಗಿರಬಹುದು. ಕಂಪನಿ ಪೊಲೀಸ್‌ ತನಿಖೆಗೂ ಸಹಕರಿಸುತ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಶೀಘ್ರವೇ ಇಲಾಖೆ ವರದಿ ಸಲ್ಲಿಸುವ ವಿಶ್ವಾಸವಿದ್ದು ಕಾಮಗಾರಿ ಸಹ ತ್ವರಿತವಾಗಿ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.