ADVERTISEMENT

ಕಾರ್ಮಿಕರ ಕೊರತೆ; ಕಾಮಗಾರಿ ವಿಳಂಬ

ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ಮಹೇಶ ಟೆಂಗಿನಕಾಯಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:22 IST
Last Updated 8 ಜುಲೈ 2025, 4:22 IST
ಹುಬ್ಬಳ್ಳಿಯ ಬಸವ ವನದ ಬಳಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಬಸವ ವನದ ಬಳಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ವೀಕ್ಷಿಸಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ನಗರದ ಚನ್ನಮ್ಮ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಆಗಸ್ಟ್‌ 19ರ ಒಳಗೆ ಬಸವ ವನದಿಂದ ಹಳೇ ಕೋರ್ಟ್‌ ವೃತ್ತದವರೆಗಿನ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಡಳಿತ ಗಡುವು ನೀಡಿದೆ. ಕಾರ್ಮಿಕರ ಕೊರತೆಯಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಯುವುದು ಅನುಮಾನ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಜತೆ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ  ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

‘ಯೋಜನೆ ಪ್ರಕಾರ ಕಾಮಗಾರಿ ಹತ್ತು ದಿನ ಹಿಂದೆ ಬಿದ್ದಿದೆ. ನಗರದ ಮಧ್ಯ ಭಾಗದಲ್ಲಿರುವ ಮುಖ್ಯರಸ್ತೆಯನ್ನು ನಾಲ್ಕು ತಿಂಗಳವರೆಗೆ (ಏಪ್ರಿಲ್‌ 20ರಿಂದ ಆಗಸ್ಟ್‌ 19) ಬಂದ್‌ ಮಾಡುವುದೆಂದರೆ ಹುಡುಗಾಟಿಕೆಯಲ್ಲ. ಅಗತ್ಯವಿದ್ದಷ್ಟು ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿಗೆ ವೇಗ ನೀಡಬೇಕು. ಹೆಚ್ಚುವರಿಯಾಗಿ ಹತ್ತು ದಿನ ತೆಗೆದುಕೊಂಡು ಆಗಸ್ಟ್‌ 30ರ ಒಳಗೆ ಯಾವ ಸಬೂಬು ಹೇಳದೆ ಕಾಮಗಾರಿ ಪೂರ್ಣಗೊಳಸಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಬಸವ ವನದ ಬಳಿ ನಾಲ್ಕು ಗರ್ಡರ್‌ಗಳನ್ನು ಮಾತ್ರ ಅಳವಡಿಸಿದ್ದು, ಇನ್ನೂ ಏಳು ಗರ್ಡರ್‌ಗಳನ್ನು ಅಳವಡಿಸಬೇಕಿದೆ. ಕ್ರೇನ್‌ ಮೂಲಕ ಗರ್ಡರ್‌ ಏರಿಸಬೇಕಿದ್ದು, ಅದರ ಆಪರೇಟರ್‌ ರಜೆ ಹಾಕಿದ್ದರಿಂದ ವಿಳಂಬವಾಗಿದೆ. ಅದರ ಹೊರತಾಗಿ, ಬಸವ ವನದಿಂದ ಚನ್ನಮ್ಮ ವೃತ್ತದವರೆಗೆ 25 ಗರ್ಡರ್‌ಗಳನ್ನು ಅಳವಡಿಸುವುದು ಬಾಕಿಯಿದೆ. ಕಾರ್ಮಿಕರ ಕೊರತೆಯಿಂದಾಗಿ ಯೋಜನೆಯಂತೆ ಕಾಮಗಾರಿ ನಡೆದಿಲ್ಲ’ ಎಂದು ಶಾಸಕ ಟೆಂಗಿನಕಾಯಿ ಮಾಧ್ಯಮದವರಿಗೆ ತಿಳಿಸಿದರು.

‘ಪ್ರತಿ ದಿನ ಎರಡು ಗರ್ಡರ್‌ಗಳನ್ನು ಅಳವಡಿಸಲಾಗುತ್ತಿದೆ. ರಸ್ತೆ, ಚರಂಡಿ ಕಾಮಗಾರಿಗಳು ಬಾಕಿಯಿವೆ. ಸದ್ಯ 120 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಹೆಚ್ಚುವರಿಯಾಗಿ ಅಷ್ಟೇ ಸಂಖ್ಯೆಯ ಕಾರ್ಮಿಕರನ್ನು ಬಳಸಿಕೊಂಡು, ಹಗಲು–ರಾತ್ರಿ ಕೆಲಸ ಮಾಡುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಕಾಮಗಾರಿ ವಿಳಂಬಕ್ಕೆ ಗುತ್ತಿಗೆ ಪಡೆದ ಕಂಪನಿಯ ನಿರ್ಲಕ್ಷ್ಯ ಕಾರಣ. ಕಾರ್ಮಿಕರ ಕೊರತೆ ಎಂದು ಹೇಳುವುದು ಅವರ ಸಮಸ್ಯೆ. ಪೊಲೀಸ್‌ ಇಲಾಖೆ, ಮಹಾನಗರ ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಹೀಗೆ ಎಲ್ಲ ಇಲಾಖೆಗಳ ಸಹಕಾರವಿದ್ದಾಗಲೂ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಇದನ್ನು ಜಿಲ್ಲಾಡಳಿತ ಮತ್ತು ಕೇಂದ್ರ ಸಚಿವರ ಗಮನಕ್ಕೆ ತರಲಾಗುವುದು’ ಎಂದರು.

ಮತ್ತೊಂದು ಫಿಲ್ಲರ್‌: ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದ ಸಮೀಪ ಬೃಹತ್‌ ಫಿಲ್ಲರ್‌ ನಿರ್ಮಿಸಬೇಕಿದ್ದು, ತಕ್ಷಣ ಕಾಮಗಾರಿ ಆರಂಭಿಸಲು ಶಾಸಕ ಟೆಂಗಿನಕಾಯಿ ಸೂಚಿಸಿದರು. ಕಾಮಗಾರಿ ನಡೆಯುವ ಸ್ಥಳದ ಸುತ್ತ ಬ್ಯಾರಿಕೇಡ್‌ ಅಳವಡಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪೊಲೀಸರು ತಿಳಿಸಿದರು.

- ‘ಗಣೇಶ ಹಬ್ಬಕ್ಕೆ ಸಮಸ್ಯೆಯಾಗದಿರಲಿ’

‘ಆಗಸ್ಟ್‌ 27ರಂದು ಗಣೇಶ ಹಬ್ಬವಿದ್ದು ನಂತರದ ಒಂಬತ್ತು ಮತ್ತು ಹತ್ತನೇ ದಿನ ಮೂರ್ತಿಗಳ ವಿಸರ್ಜನೆ ಪ್ರಯುಕ್ತ ಅದ್ದೂರಿ ಮೆರವಣಿಗೆ ಇದೇ ಮಾರ್ಗದಲ್ಲಿ ನಡೆಯುತ್ತದೆ. ಹಬ್ಬಕ್ಕೆ ಸಮಸ್ಯೆಯಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಸಬೇಕು’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಗುತ್ತಿಗೆದಾರರಿಗೆ ಸೂಚಿಸಿದರು.

ಅಳಲು ತೋಡಿಕೊಂಡ ವ್ಯಾಪಾರಸ್ಥರು...

ಬಸವವನ ಹಾಗೂ ಹಳೇ ಬಸ್‌ ನಿಲ್ದಾಣದ ಸುತ್ತಮುತ್ತಲಿನ ವ್ಯಾಪಾರಸ್ಥರು ಶಾಸಕರ ಎದುರು ಅಳಲು ತೋಡಿಕೊಂಡರು. ‘ವ್ಯಾಪಾರ–ವಹಿವಾಟು ಇಲ್ಲದೆ ಅಂಗಡಿಗಳಿಗೆ ಬಾಡಿಗೆ ತುಂಬಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ ಸಾಲದ ಜೊತೆಗೆ ಕುಟುಂಬ ನಿರ್ವಹಣೆಯೂ ಕಷ್ಟವಾಗುತ್ತದೆ. ಬೀಡ ಪಾನ್‌ ಶಾಪ್‌ ಅಂಗಡಿ ಇಟ್ಟುಕೊಂಡವರು ಸ್ವಿಗ್ಗಿ ಜೊಮ್ಯಾಟೊಗೆ ಹೋಗುತ್ತಿದ್ದಾರೆ. ಏಳು–ಎಂಟು ದಿನಗಳಿಂದ ಇಲ್ಲಿ ಯಾವ ಕೆಲಸವೂ ನಡೆಯುತ್ತಿಲ್ಲ’ ಎಂದು ವ್ಯಾಪಾರಸ್ಥರ ಶೇಖರ ಹಾದಿಮನಿ ಹೇಳಿದರು. ‘ಪ್ರಮುಖ ಬಸ್‌ ನಿಲ್ದಾಣದ ಮುಖ್ಯರಸ್ತೆ ನಾಲ್ಕು ತಿಂಗಳು ಬಂದ್‌ ಮಾಡಿ ಕಾಮಗಾರಿಗೆ ಅವಕಾಶ ಮಾಡಿಕೊಡುವುದು ತಮಾಶೆಯಲ್ಲ. ಇದರಿಂದ ನಗರದ ವಿವಿಧೆಡೆ ವಾಹನಗಳ ಸಂಚಾರ ದಟ್ಟಣೆ ಏರ್ಪಟ್ಟಿದೆ. ಬೇಕಾದಷ್ಟು ಹಣ ಇಲಾಖೆಗಳ ಸಹಕಾರವಿದ್ದಾಗಲೂ ವಿಳಂಬ ಮಾಡುತ್ತಿರುವುದು ಸರಿಯಲ್ಲ’ ಎಂದು ಗುತ್ತಿಗೆ ಕಂಪನಿಯ ಸಿಂಗ್‌ ಅವರನ್ನು ತರಾಟೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.