ADVERTISEMENT

ಧಾರವಾಡ: ಪುಟ್ಟ ಭಾರತ ತೆರೆದಿಟ್ಟ ಯುವಜನ

ವೇದಿಕೆಯನ್ನು ವರ್ಣರಂಜಿತವಾಗಿಸಿದ ಜಾನಪದ ನೃತ್ಯ

ಗಣೇಶ ವೈದ್ಯ
Published 16 ಜನವರಿ 2023, 21:45 IST
Last Updated 16 ಜನವರಿ 2023, 21:45 IST
ಯುವ ಜನೋತ್ಸವದಲ್ಲಿ ಮರದ ಕಾಲು ಕಟ್ಟಿಕೊಂಡು ಜಾನಪದ ನೃತ್ಯ ಪ್ರದರ್ಶಿಸಿದ ಛತ್ತೀಸಗಢ ಕಲಾವಿದರು –ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಯುವ ಜನೋತ್ಸವದಲ್ಲಿ ಮರದ ಕಾಲು ಕಟ್ಟಿಕೊಂಡು ಜಾನಪದ ನೃತ್ಯ ಪ್ರದರ್ಶಿಸಿದ ಛತ್ತೀಸಗಢ ಕಲಾವಿದರು –ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಧಾರವಾಡ: ಯುವ ಜನೋತ್ಸವವು ವರ್ಣರಂಜಿತ ಪುಟ್ಟ ಭಾರತವನ್ನೇ ತೆರೆದಿಟ್ಟಿದೆ. ಇಲ್ಲಿನ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ ಜಾನಪದ ನೃತ್ಯವು ಇದನ್ನು ಸಾಕ್ಷೀಕರಿಸಿದೆ.

ಭಾನುವಾರ ಬೆಳಿಗ್ಗೆಯಿಂದಲೇ ಸೃಜನಾ ರಂಗಮಂದಿರವು ದೇಶದ ವಿವಿಧ ಭಾಗಗಳ ತೊಡುಗೆ, ಜಾನಪದ ನೃತ್ಯಗಳಿಗೆ ವೇದಿಕೆ ಆಯಿತು. ಕಣ್ಣು ಕೋರೈಸುವಂತಹ ಬಣ್ಣ ಬಣ್ಣಗಳ ಉಡುಗೆ ತೊಟ್ಟ ಕಲಾವಿದರ ಉತ್ಸಾಹ ಮೇರೆ ಮೀರಿತ್ತು.

ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಕರ್ನಾಟಕ, ಚಂಡೀಗಢ, ಛತ್ತೀಸಗಢ, ಅಸ್ಸಾಂ ಯುವ ಕಲಾವಿದರು ತಮ್ಮ ತಮ್ಮ ರಾಜ್ಯಗಳ ಜಾನಪದ ನೃತ್ಯವನ್ನು ಪ್ರಸ್ತುತಪಡಿಸಿದರು.

ADVERTISEMENT

ಛತ್ತೀಸಗಢದ ಯುವಕ ಯುವತಿಯರು ಮರದ ಕಾಲುಗಳನ್ನು ಕಟ್ಟಿಕೊಂಡು ನರ್ತಿಸುತ್ತಿದ್ದರೆ ನೋಡಲೆರಡು ಕಣ್ಣುಗಳೇ ಸಾಲುತ್ತಿರಲಿಲ್ಲ. ಸಭಿಕರ ಕಡೆಯಿಂದ ಕರತಾಡನ, ಶಿಳ್ಳೆಗಳು ಇನ್ನಿಲ್ಲದಂತೆ ತೂರಿ ಬರುತ್ತಲೇ ಇದ್ದವು.‌

ಚಂಡೀಗಢದ ಕಲಾವಿದರು ‘ಪಂಜಾಬಿ’ ಹೋಲುವ ಲುಂಡಿ ನೃತ್ಯ ಪ್ರದರ್ಶಿಸಿದರು. ಉತ್ತರಾಖಂಡದ ಕಲಾವಿದರು ಕೃಷಿ–ಗ್ರಾಮೀಣ ಹಿನ್ನೆಲೆಯ ನೃತ್ಯ ಪ್ರದರ್ಶಿಸಿದರೆ ಮುಂದಿನದು ತಮಿಳುನಾಡಿನ ತಂಡದ ಸರದಿ.

ತಮಿಳುನಾಡು ಕಲಾವಿದರು ದೇವಸ್ಥಾನಗಳ ಉತ್ಸವಗಳ ಸಂದರ್ಭದಲ್ಲಿ ಪ್ರದರ್ಶಿಸುವ ನೃತ್ಯವನ್ನು ಪ್ರಸ್ತುತಡಿಸಿದರು. ಐದು ಜಾನಪದ ನೃತ್ಯಗಳ ಸಮ್ಮಿಳನ ಅದು. ಯಾವ ಸರ್ಕಸ್‌ಗೂ ಕಡಿಮೆ ಇಲ್ಲದಂತೆ, ಸಭಿಕರನ್ನು ಆಸನದ ಅಂಚಿಗೆ ತಂದು ಕೂರಿಸುವ ಸಾಹಸವೂ ಅದರಲ್ಲಿ ಇದ್ದುದು ವಿಶೇಷ.

ಅತ್ತ ವೇದಿಕೆಯಲ್ಲಿ ಕೊಂಚ ಬಿಡುವು ಸಿಗುತ್ತಿದ್ದಂತೆ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಹಾಡಿಗೆ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಯುವಕರು ಹುಚ್ಚೆದ್ದು ಕುಣಿದು ಮನ ತಣಿಸಿಕೊಂಡರು.

ತುಳುನಾಡಿನ ಕಂಗಿಲು ಕುಣಿತ

ದಕ್ಷಿಣ ಕನ್ನಡ ಭಾಗದ ಕಲಾವಿದರು ತಮ್ಮ ನೆಲದ ದೈವಗಳಲ್ಲಿ ಒಂದಾಗಿರುವ ಸ್ವಾಮಿ ಕೊರಗಜ್ಜನ ಬಗೆಗಿನ ನೃತ್ಯ ಪ್ರದರ್ಶಿಸಿ ಮನಸೂರೆಗೊಂಡರು.

ತಮ್ಮ ಉಡುಪಿನ ಮೇಲೆ ತೆಂಗಿನ ಎಳೆಯ ಗರಿಗಳು, ಅಡಿಕೆ ಸಿಂಗಾರಗಳನ್ನು ಬಳಸಿಕೊಂಡು ಸಿಂಗರಿಸಿದ್ದ ಇವರನ್ನು ನೋಡುವುದೇ ಒಂದು ವಿಶೇಷವಾಗಿತ್ತು. ಈಚೆಗೆ ಜನಪ್ರಿಯವಾದ ‘ಕಾಂತಾರ’ ಸಿನಿಮಾದ ದೈವ ಕುಣಿತವನ್ನು ನೆನಪಿಸಿದ ಈ ನೃತ್ಯವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.