ADVERTISEMENT

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿ ಹಿಂಪಡೆಯಲು ಹೊರಟ್ಟಿ ಒತ್ತಾಯ

ಜ. 20ಕ್ಕೆ ಬೆಂಗಳೂರಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 5:37 IST
Last Updated 18 ಜನವರಿ 2023, 5:37 IST
   

ಹುಬ್ಬಳ್ಳಿ: ‘ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಇದೇ ತಿಂಗಳ 20ರಂದು ಬೆಂಗಳೂರಿನಲ್ಲಿ ಸರ್ಕಾರದ ಕಾರ್ಯದರ್ಶಿಗಳ, ಅಧಿಕಾರಿಗಳ ಸಭೆ ನಡೆಯಲಿದ್ದು, ವರ್ಗಾವಣೆ ನೀತಿ ಹಿಂದಕ್ಕೆ ಪಡೆಯುವಂತೆ ಸೂಚಿಸುತ್ತೇನೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಮಾಡಲು ಶಿಕ್ಷಣ ಇಲಾಖೆ 250ಕ್ಕಿಂತ ಕಡಿಮೆ‌ ಮಕ್ಕಳಿರುವ ಶಾಲೆಯಲ್ಲಿನ ಹೆಚ್ಚುವರಿ ಶಿಕ್ಷಕರನ್ನು ವರ್ಗಾಯಿಸಲು ಮುಂದಾಗಿದೆ. ಇಂತಹ ಅವೈಜ್ಞಾನಿಕ ಕೆಲಸ ನಡೆಯುವಾಗ ಸರ್ಕಾರ ಕಣ್ಮುಚ್ಚಿ ಕುಳಿತುಕೊಳ್ಳಬಾರದು. ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ, ಹಿಂಪಡೆಯಲು ಹೇಳುತ್ತೇನೆ. ಇಲ್ಲದಿದ್ದರೆ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇನೆ’ ಎಂದು ಹೇಳಿದರು.

‘ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿಗೆ ಇದ್ದರೂ ಶಿಕ್ಷಕರನ್ನು ವರ್ಗಾಯಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕನಿಷ್ಠ ಬುದ್ಧಿಯೂ ಇಲ್ಲದಂತಾಗಿದೆ. ರೀತಿ, ನೀತಿಯಿಲ್ಲದ ಕಾಯ್ದೆಗಳು ಕನ್ನಡ ಶಾಲೆಗಳಿಗೆ ಮಾರಕವಾಗುತ್ತಿವೆ. ಇಂತಹ ಅಧಿಕಾರಿಗಳಿಂದಲೇ ಕನ್ನಡ‌ ಶಾಲೆಗಳು ಮುಚ್ಚುತ್ತಿರುವುದು’ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.