ADVERTISEMENT

ಧಾರವಾಡ: ವನಮಹೋತ್ಸವದಲ್ಲಿ ಸಿರಿಗಂಧದ ಪರಿಮಳ

ಧಾರವಾಡ ಅರಣ್ಯ ವ್ಯಾಪ್ತಿಯಲ್ಲಿ 22 ಸಾವಿರ ಗಂಧ ಸೇರಿ 7 ಲಕ್ಷ ಸಸಿಗಳು

Published 25 ಜೂನ್ 2020, 19:30 IST
Last Updated 25 ಜೂನ್ 2020, 19:30 IST
ಧಾರವಾಡ ಅರಣ್ಯ ವಲಯದಲ್ಲಿ ನೆಡಲಾಗಿರುವ ಗಿಡಗಳು
ಧಾರವಾಡ ಅರಣ್ಯ ವಲಯದಲ್ಲಿ ನೆಡಲಾಗಿರುವ ಗಿಡಗಳು   

ಹುಬ್ಬಳ್ಳಿ: ಧಾರವಾಡ ಅರಣ್ಯ ವಿಭಾಗದಲ್ಲಿ ಈ ವರ್ಷದ ವನಮಹೋತ್ಸವ ಯೋಜನೆಯಲ್ಲಿ 7 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದ್ದು, ಇದರಲ್ಲಿ ಶೇ 40ರಷ್ಟು ಸಸಿಗಳನ್ನು ನೆಡಲಾಗಿದೆ.ಸಿರಿಚಂದನವನ ಯೋಜನೆಯಲ್ಲಿ ಸುಮಾರು 22 ಸಾವಿರ ಗಂಧದ ಮರಗಳನ್ನು ಈ ಬಾರಿ ನೆಡಲಾಗುತ್ತಿದೆ.

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲೂ ಧಾರವಾಡ ಅರಣ್ಯ ವಿಭಾಗ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿತ್ತು. ಮೇನಿಂದಲೇ ವನಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಆಗಸ್ಟ್‌ ಅಂತ್ಯದಲ್ಲಿ ಯೋಜಿತ ಸಂಖ್ಯೆಯ ಎಲ್ಲ ಸಸಿಗಳನ್ನು ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ.

‘ಧಾರವಾಡ ಅರಣ್ಯ ವಿಭಾಗದ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 10 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. 7 ಲಕ್ಷ ಸಸಿಗಳು ಅರಣ್ಯ ವ್ಯಾಪ್ತಿ– ನಗರ ಹಾಗೂ ರಸ್ತೆ ಬದಿ ಸುಮಾರು ಒಂದು ಲಕ್ಷ ಮತ್ತು 2 ಲಕ್ಷ ಗಿಡಗಳನ್ನು ಸಮುದಾಯಕ್ಕೆ ಹಂಚಿಕೆ ಮಾಡಲಾಗುತ್ತದೆ’ ಎಂದು ಧಾರವಾಡ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್‌ ಕ್ಷೀರಸಾಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಲಾಕ್‌ಡೌನ್‌ನಿಂದ ವನಮಹೋತ್ಸವಕ್ಕೆ ಏನೂ ಸಮಸ್ಯೆ ಆಗಲಿಲ್ಲ. ನಾವು ಆಗಸ್ಟ್-ಸೆಪ್ಟಂಬರ್‌ನಲ್ಲಿ ಯೋಜನೆ ಮಾಡುತ್ತೇವೆ. ಮೇನಿಂದ ಅನುಷ್ಟಾನ ಮಾಡಲು ಆರಂಭಿಸುತ್ತೇವೆ. ನರ್ಸರಿಯಲ್ಲಿ ಯೋಜನೆಯಂತೆ ಸಸಿಗಳು ಸಿದ್ಧಗೊಂಡಿವೆ. ನಮ್ಮ ಇಲಾಖೆ ಅಗತ್ಯ ಸೇವೆಗಳಡಿ ಇರುವುದರಿಂದ ಕಾಡು ರಕ್ಷಣೆ, ನರ್ಸರಿಯಲ್ಲಿ ಪೋಷಣೆ ಕಾರ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಉಂಟಾಗಲಿಲ್ಲ’ ಎಂದು ಹೇಳಿದರು.

‘ಧಾರವಾಡದಲ್ಲಿ ಸುಮಾರು 1500 ಹೆಕ್ಟೇರ್ ಅಥವಾ ಕಿ.ಮೀ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಅರಣ್ಯದಲ್ಲಿ ಹೆಕ್ಟೇರ್ ಹಾಗೂ ನಗರ ಪ್ರದೇಶದಲ್ಲಿ ಕಿಲೋ ಮೀಟರ್ ಎಂದು ಪರಿಗಣಿಸಲಾಗುತ್ತದೆ. ಕಲಘಟಗಿ ವಲಯದಲ್ಲಿ ಅತಿ ಹೆಚ್ಚು ಸಸಿಗಳನ್ನು ನೆಡಲಾಗಿದೆ’ ಎಂದರು.

‘ರಸ್ತೆ ಬದಿಯಲ್ಲಿ ಹೊಂಗೆ, ತಪಸಿ, ಮಹೊಗನಿ, ಜಾಮೂನು ಸಸಿಗಳನ್ನು ನೆಡಲಾಗುತ್ತಿದೆ. ಅರಣ್ಯದಲ್ಲಿ ಜಾಮೂನು, ನೆಲ್ಲಿಕಾಯಿ, ಹುಣಸೆ ಗಿಡಗಳು ಸೇರಿದಂತೆ ಕಾಡು ಜಾತಿಯ ಸಸಿಗಳನ್ನೇ ನೆಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕಳೆದ ಬಾರಿಗಿಂತ ಈ ಬಾರಿ ಗಂಧದ ಸಸಿಗಳನ್ನು ನೆಡಲಾಗುತಿದೆ. ಮುಂದಿನ ಬಾರಿ ಇದು ಸಾವಿರಾರು ಸಂಖ್ಯೆಯಲ್ಲಿ ಅಧಿಕವಾಗಲಿದೆ
ಯಶ್‌ಪಾಲ್‌ ಕ್ಷೀರಸಾಗರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.