ADVERTISEMENT

ಮಹಾರಾಷ್ಟ್ರದಿಂದ ರಾಣೆಬೆನ್ನೂರಿಗೆ ಸಾಗಿಸುತ್ತಿದ್ದ 15 KG ಗಾಂಜಾ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:45 IST
Last Updated 17 ಜನವರಿ 2026, 5:45 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಹುಬ್ಬಳ್ಳಿ: ಮಹಾರಾಷ್ಟ್ರದಿಂದ ಹಾವೇರಿ ಜಿಲ್ಲೆಗೆ ಹುಬ್ಬಳ್ಳಿ ಮಾರ್ಗವಾಗಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ‘ನಗರ ಅಪರಾಧ ವಿಭಾಗ (ಸಿಸಿಬಿ)’ದ ಸಿಬ್ಬಂದಿ, ₹7.74 ಲಕ್ಷ ಮೌಲ್ಯದ 15ಕೆ.ಜಿ. 483 ಗ್ರಾಂ ಗಾಂಜಾ, ₹2 ಲಕ್ಷ ಮೌಲ್ಯದ ಕಾರು ಹಾಗೂ ಮೂರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಮಹಾರಾಷ್ಟ್ರದ ಹಣ್ಣಿನ ವ್ಯಾಪಾರಿ ಫರೀಜಖಾನ್‌ ಜಹೀರಖಾನ್‌ ಮತ್ತು ಆಟೊ ಚಾಲಕ ಸಲ್ಮಾನ್‌ ರೈಯಿಜಖಾನ್‌ ಬಂಧಿತ ಆರೋಪಿಗಳು. ಐದು ಕೆ.ಜಿ.ಯ ಮೂರು ಬಂಡಲ್‌ನಲ್ಲಿ ಗಾಂಜಾ ತುಂಬಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕಸಬಾಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾವನ್ನು ಮಹಾರಾಷ್ಟ್ರದಿಂದ ಹಾವೇರಿಯ ರಾಣಿಬೆನ್ನೂರಿಗೆ ಮಹಾರಾಷ್ಟ್ರ ಪಾಸಿಂಗ್‌ ಇರುವ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದರು. ಸಿಸಿಬಿ ಪೊಲೀಸರು, ನ್ಯೂ ಇಂಗ್ಲಿಷ್‌ ಸ್ಕೂಲ್‌ ಮತ್ತು ಗಬ್ಬೂರು ವೃತ್ತದಲ್ಲಿ ದಾಳಿಗೆ ಮುಂದಾಗಿದ್ದರು. ಧಾರವಾಡ–ಹುಬ್ಬಳ್ಳಿ ಬೈಪಾಸ್‌ ರಸ್ತೆ ಮೂಲಕ ಗಬ್ಬೂರು ವೃತ್ತದ ಬಳಿ ಬಂದಾಗ, ಬ್ಯಾರಿಕೇಡ್‌ ಹಾಕಿ ಆರೋಪಿಗಳನ್ನು ಗಾಂಜಾ ಸಮೇತ ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪಿಎಸ್‌ಐಗಳಾದ ಮಂಜುನಾಥ ಟಿ.ಎಂ., ರೂಪಕ್‌ ಡಿ., ಸಿಬ್ಬಂದಿಯಾದ ಎಂ.ಎಂ. ವನಹಳ್ಳಿ, ಆರ್‌.ಜಿ. ಅಕ್ಕೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  

ಕಾರಾಗೃಹದಲ್ಲಿ ಗದ್ದಲ: ಇಲ್ಲಿನ ಅಶೋಕ ನಗರದಲ್ಲಿರುವ ಉಪ ಕಾರಾಗೃಹದಲ್ಲಿದ್ದ ಕೈದಿಗಳಿಗೆ ಅನಗತ್ಯವಾಗಿ ತೊಂದರೆ ಕೊಡುವುದು, ಅಶಾಂತಿ ಸೃಷ್ಟಿಸುವುದು ಮಾಡುತ್ತಿದ್ದ ಇಬ್ಬರು ಬಂಧಿತ ಆರೋಪಿಗಳನ್ನು ಶುಕ್ರವಾರ ಬೇರೆ ಜಿಲ್ಲೆಗಳ ಉಪ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ.

ಮಂಟೂರ ರಸ್ತೆಯಲ್ಲಿ ನಡೆದ ಮಲ್ಲಿಕ್ ಜಾನ್ ಕೊಲೆ ಪ್ರಕರಣದ ಆರೋಪಿಗಳಾದ ಬಾಲರಾಜ ಅಲಿಯಾಸ್‌ ಬಂಗಾರ ಬಾಲ್ಯಾ ಕಲಬುರಗಿ ಮತ್ತು ಪ್ರಜ್ವಲ್ ವಿಜಯಪುರಕ್ಕೆ ಸ್ಥಳಾಂತರ ಮಾಡಲಾಗಿದೆ.

‘ಜೈಲಿನಲ್ಲಿ ಪದೇಪದೇ ಗದ್ದಲ ಹಾಗೂ ಕೆಲವರಿಗೆ ಜೀವ ಬೆದರಿಕೆ ಹಾಕುತ್ತಿದ್ದ ಕಾರಣ ಇಬ್ಬರು ಆರೋಪಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿತ್ತು. ಆ ವೇಳೆ ತಮ್ಮನ್ನು ಸ್ಥಳಾಂತರಿಸದಂತೆ ಆರೋಪಿಗಳು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಕೆಲಸಮಯ ಕಾರಾಗೃಹದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಇಬ್ಬರನ್ನು ಸ್ಥಳಾಂತರಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ: ಇಲ್ಲಿಯ ಕುಸಗಲ್‌ ರಸ್ತೆಯ ಆಕಾಶ ಪಾರ್ಕ್‌ನ ಮೆಹಬೂಬ್‌ ಸಾಹೇಬ್‌ ಅವರ ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ, ಅದರಲ್ಲಿದ್ದ ₹3.89 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದಲ್ಲಿರುವ ಫೆಡರಲ್‌ ಬ್ಯಾಂಕ್‌ ಖಾತೆಗೆ ಹಾಗೂ ಪಶ್ಚಿಮ ಬಂಗಾಳದಲ್ಲಿರುವ ಕೆನರಾ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಮೆಹಬೂಬ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.