ಕುಂದಗೋಳ ತಾಲ್ಲೂಕಿನ ಗುಡಗೇರಿ ಗ್ರಾಮದಲ್ಲಿ ರೈತರು ಬೆಳೆದ ಬೆಳ್ಳುಳ್ಳಿ
ಗುಡಗೇರಿ: ಚೀನಾದ ಹೈಬ್ರಿಡ್ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಸ್ಥಳೀಯವಾಗಿ ಬೆಳೆದ ಜವಾರಿ ಬೆಳ್ಳುಳ್ಳಿ ದರ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
ಕುಂದಗೋಳ ತಾಲ್ಲೂಕಿನ ಗುಡಗೇರಿ, ಗೌಡಗೇರಿ, ಹರಲಾಪುರ, ಸಂಕ್ಲೀಪುರ, ಕಳಸ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂಗಾರು ಬೆಳೆಯಾಗಿ ಬೆಳ್ಳುಳ್ಳಿ ಬೆಳೆಯಲಾಗಿದೆ.
ಬಿತ್ತನೆ ಸಂದರ್ಭದಲ್ಲಿ ಒಂದು ಕ್ವಿಂಟಲ್ ಬೆಳ್ಳುಳ್ಳಿ ದರ ₹ 40 ಸಾವಿರ ಈಗ ದರ ₹ 6 ಸಾವಿರದಿಂದ ₹7 ಸಾವಿರಕ್ಕೆ ಕುಸಿದಿದೆ.
‘ಒಂದೂವರೆ ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆದಿದ್ದು, ಬೀಜ, ಗೊಬ್ಬರ ಸೇರಿ ₹ 1.30 ಲಕ್ಷ ವೆಚ್ಚ ಮಾಡಿದ್ದೇನೆ. ಈಗ ದರ ಕುಸಿದಿದ್ದು, ಹಾಕಿದ ಬಂಡವಾಳವೂ ಬಾರದ ಸ್ಥಿತಿ ಇದೆ’ ಎಂದು ಗುಡಗೇರಿ ಗ್ರಾಮದ ರೈತ ಗಂಗಾಧರ ಗಿರಮಲ್ಲ ಬೇಸರ ವ್ಯಕ್ತಪಡಿಸಿದರು.
ರೈತ ವಿಜಯಕುಮಾರ ಹಾಲಿ, ‘ಕಳೆದ ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬೆಳ್ಳುಳ್ಳಿ ಬೆಳೆಗೂ ಸೂಕ್ತ ಧಾರಣಿ ಇಲ್ಲ. ಇದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ’ ಎಂದರು.
‘ಬೆಳ್ಳುಳ್ಳಿ ದರ ಕಳೆದ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಕಡಿಮೆ ಇದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಕ್ವಿಂಟಲ್‌ಗೆ ₹ 12 ಸಾವಿರದಿಂದ ₹ 18 ಸಾವಿರವರೆಗೆ ದರ ಇದೆ. ಗುಣಮಟ್ಟ ಚೆನ್ನಾಗಿಲ್ಲದಿದ್ದ ಮಾಲಿಗೆ ದರ ಕಡಿಮೆ ಇರುತ್ತದೆ’ ಎಂದು ಎಪಿಎಂಸಿ ಅಧಿಕಾರಿ ವಿರೂಪಾಕ್ಷ ಲಮಾಣಿ ‘ಪ್ರಜಾವಾಣಿ‘ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.