
ನವಲಗುಂದ ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರ ತರಬೇತಿ ಕಾರ್ಯಕ್ರಮವನ್ನು ಸಹಕಾರಿ ಧುರೀಣ ವಿಜಯ ಕುಲಕರ್ಣಿ ಉದ್ಘಾಟಿಸಿದರು
ನವಲಗುಂದ: ‘ನೀರು ಬಳಕೆದಾರರ ಸಹಕಾರ ಸಂಘಗಳು ರಾಜ್ಯದಲ್ಲಿ ರೈತರ ಸ್ನೇಹಿಯಾಗಿ ಕಾರ್ಯನಿರ್ವಹಿಸುವ ಮೂಲಕ ರೈತರು ನೀರಾವರಿ ಅನುಕೂಲ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ಕೃಷಿಯಲ್ಲಿ ಹನಿ ನೀರಾವರಿಗೆ ಒತ್ತು ನೀಡಬೇಕು’ ಎಂದು ಸಹಕಾರಿ ಧುರೀಣ ವಿಜಯ ಕುಲಕರ್ಣಿ ಹೇಳಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್, ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ– ನವಿಲುತೀರ್ಥ, ಸಹಕಾರ ಇಲಾಖೆ ಆಶ್ರಯದಲ್ಲಿ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರುಗಳಿಗಾಗಿ ಗುರುವಾರ ನಡೆದ ಒಂದು ದಿನದ ಜಿಲ್ಲಾಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಹಕಾರ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಕಾನೂನಿನ ಅರಿವು ಮತ್ತು ಸಿಬ್ಬಂದಿಯಲ್ಲಿ ವೃತ್ತಿಪರತೆ ಮುಖ್ಯ. ಈ ತರಬೇತಿ ಪ್ರಯೋಜನ ಪಡೆದು ಸಂಘಗಳ ಪ್ರಗತಿಗೆ ಶ್ರಮಿಸಬೇಕು’ ಎಂದು ತಿಳಿಸಿದರು.
ವಾಲ್ಮಿ ನಿರ್ದೇಶಕ ಗಿರೀಶ ಎನ್.ಮರಡ್ಡಿ ಮಾತನಾಡಿ, ‘ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಪಶು ಆಧಾರಿತ ಕೃಷಿ ಮತ್ತು ಗಿಡಗಳ ಆಧಾರಿತ ಕೃಷಿಯಿಂದ ಲಾಭ ಕಾಣಲು ಸಾಧ್ಯ’ ಎಂದರು.
ನವಿಲುತೀರ್ಥದ ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಸದಾಶಿವಗೌಡ ಅ. ಪಾಟೀಲ, ‘ನೀರು ಬಳಕೆದಾರರ ಸಹಕಾರ ಸಂಘಗಳಲ್ಲಿ ಸಿಬ್ಬಂದಿ– ಆಡಳಿತ ಮಂಡಳಿಯ ಸಮನ್ವಯವಿದ್ದರೆ ಪ್ರಗತಿ ಹೊಂದಲು ಸಾಧ್ಯ. ಸಂಘಗಳು ರೈತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಚಂಬಣ್ಣ ಬ. ಹಾಳದೋಟರ, ಚಂದ್ರಗೌಡ ಪಾಟೀಲ ಮಾತನಾಡಿದರು. ಯೂನಿಯನ್ ನಿರ್ದೇಶಕ ಫಕ್ಕೀರಗೌಡ ಕಲ್ಲನಗೌಡ್ರ, ನಾಮ ನಿರ್ದೇಶಿತ ನಿರ್ದೇಶಕ ಶ್ರೀನಿವಾಸ ಬೂದಿಹಾಳ, ನೀರು ಬಳಕೆದಾರರ ಮಹಾಮಂಡಳದ ನಿರ್ದೇಶಕರಾದ ಸುರೇಶ ನಿಡವಣಿ, ವೀರಣ್ಣ ಚುಳಕಿ, ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ. ದುಮ್ಮಳ್ಳಿ, ವಿ.ಜಿ. ಕುಲಕರ್ಣಿ, ಮಂಗಳಗೌಡ ಬಿ. ದಾನಪ್ಪಗೌಡ್ರ, ಮಹೇಶ ಎಸ್. ಗೊರಾಬಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.