ADVERTISEMENT

‘ಊಟ ಸೂಪರ್– ಸಿಂಪಲ್, ಬದಲಾಯಿಸಿ ಪೊಂಗಲ್’

ರಾತ್ರಿ ಊಟದ ಸಮಯ ಬದಲಾವಣೆಗೆ ಜನರ ಬೇಡಿಕೆ

ಎಂ.ನವೀನ್ ಕುಮಾರ್
Published 16 ಅಕ್ಟೋಬರ್ 2018, 19:46 IST
Last Updated 16 ಅಕ್ಟೋಬರ್ 2018, 19:46 IST
ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಿಂಭಾಗದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಚಿಣ್ಣರು. ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್
ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಿಂಭಾಗದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಚಿಣ್ಣರು. ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಇಂದಿರಾ ಕ್ಯಾಂಟೀನ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಿಂಭಾಗ, ಎಸ್‌.ಎಂ. ಕೃಷ್ಣ ನಗರ ಹಾಗೂ ಸೋನಿಯಾ ಗಾಂಧಿನಗರದಲ್ಲಿ ಸೆ.11ರಂದು ಆರಂಭವಾಗಿರುವ 3 ಕ್ಯಾಂಟೀನ್‌ಗಳಲ್ಲಿ ಪ್ರತಿ ನಿತ್ಯ ಸುಮಾರು ನಾಲ್ಕೂವರೆ ಸಾವಿರ ಜನರು ಊಟ ಹಾಗೂ ಉಪಹಾರ ಮಾಡುತ್ತಿದ್ದಾರೆ.

ಕ್ಯಾಂಟೀನ್‌ನಲ್ಲಿ ಸ್ವಚ್ಛತೆಯನ್ನು ಸಹ ಕಾಪಾಡಲಾಗಿದೆ. ಬೆಂಗೇರಿಯ ಅಡುಗೆ ಮನೆಯಿಂದ ಕ್ಯಾಂಟೀನ್‌ಗೆ ಊಟ ತಲುಪುವಾಗ 5–10 ನಿಮಿಷ ತಡವಾಗುತ್ತಿದೆ ಎಂಬುದನ್ನು ಬಿಟ್ಟರೆ, ಯಾವುದೇ ದೂರುಗಳು ಕೇಳಿ ಬಂದಿಲ್ಲ. ಆರಂಭವಾದ ದಿನ ಹೇಗೆ ಆವರಣ ಹಾಗೂ ಕ್ಯಾಂಟೀನ್ ಒಳಾಂಗಣ ಸ್ವಚ್ಛವಾಗಿತ್ತೂ, ಅದೇ ರೀತಿ ಈಗಲೂ ನಿರ್ವಹಣೆ ಮಾಡಲಾಗುತ್ತಿದೆ. ಕುಡಿಯಲು ಶುದ್ಧೀಕರಿಸಿದ ನೀರು, ಮೂರು ಹಂತದಲ್ಲಿ ಪ್ಲೇಟ್ ತೊಳೆಯುವ ವಿಧಾನ ಚಾಲ್ತಿಯಲ್ಲಿದೆ ಎಂಬುದು ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಗೊತ್ತಾಯಿತು.

ರಾತ್ರಿ ಊಟದ ಸಮಯ ಸಂಜೆ 6.30ರಿಂದ 8.30 ನಿಗದಿ ಮಾಡಲಾಗಿದ್ದು, ಇದಕ್ಕೆ ಬಹಳಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಗಂಟೆ ವರೆಗೆ ವಿಸ್ತರಿಸಿದರೆ ಅನುಕೂಲ ಎಂಬುದು ಅವರ ವಾದ. ಬುಧವಾರ ಇಡ್ಲಿ ಅಥವಾ ಪೊಂಗಲ್ ನೀಡಲಾಗುತ್ತಿದೆ. ಪೊಂಗಲ್‌ ಬಗ್ಗೆ ಜನರಿಗೆ ಸಮಾಧಾನ ಇದ್ದಂತಿಲ್ಲ. ಅದನ್ನು ಬದಲಾಯಿಸಬೇಕು ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಇಂದಿರಾ ಕ್ಯಾಂಟೀನ್ ಬಗ್ಗೆ ಕೇಳಿದ್ದೆ, ಅಲ್ಲಿ ಊಟ ಹೇಗಿರಬಹುದು ಎಂಬ ಕುತೂಹಲಕ್ಕೆ ಬಂದು ಊಟ ಮಾಡಿದೆ. ಅತ್ಯಂತ ಕಡಿಮೆ ಬೆಲೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ. ರುಚಿಯೂ ತುಂಬ ಚೆನ್ನಾಗಿದೆ. ಪ್ರಮಾಣವೂ ಸಾಕೆನಿಸುತ್ತದೆ, ಕಡಿಮೆ ಎನಿಸಿದರೆ ಇನ್ನೊಂದು ಊಟ ಪಡೆಯಬಹುದು. ಮೊಸರನ್ನವೂ ಇರುವುದರಿಂದ ಊಟ ಸಮಾಧಾನವಾಗುತ್ತದೆ. ಊಟದ ಜೊತೆಗೆ ಒಂದು ಉಪ್ಪಿನ ಕಾಯಿ ನೀಡಿದರೆ ಇನ್ನೂ ಚೆನ್ನಾಗಿರುತ್ತದೆ’ ಎಂದು ಶಿಕ್ಷಕ ವಿ.ಬಿ. ಶಿವಾನಂದ ಹೇಳಿದರು.

‘ಊಟ ಚೆನ್ನಾಗಿದೆ ಹಾಗೂ ಬೆಲೆಯೂ ಕಡಿಮೆ ಇದೆ. ಆದರೆ ರಾತ್ರಿ ಊಟದ ಸಮಯ ಮಾತ್ರ ಸರಿಯಿಲ್ಲ. ರಾತ್ರಿ ಎಂಟು ಗಂಟೆ ಸುಮಾರಿಗೆ ಊಟ ಬಂದ್ ಆಗುತ್ತದೆ. ಅದನ್ನು 9,30ರ ವರೆಗೆ ವಿಸ್ತರಿಸಿದರೆ, ಕೂಲಿ ಮಾಡುವವರ, ಹಮಾಲಿಗಳಿಗೆ ಅನುಕೂಲವಾಗುತ್ತದೆ’ ಎಂದು ಪವಾಡಕುಮಾರ ಅಮರಾವತಿ ಹೇಳಿದರು. ಕಡಿಮೆ ಬೆಲೆಗೆ ನಂಬರ್ ಒನ್ ಊಟ ನೀಡುತ್ತಿದ್ದಾರೆ. ಆಗಾಗ್ಗೆ ಬಂದು ಇಲ್ಲಿ ಊಟ ಮಾಡುತ್ತೇವೆ ಎಂದು ಸುರೇಶ್ ಸವಣೂರ ತಿಳಿಸಿದರು.

‘ಗ್ರಾಹಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಪ್ರತಿ ದಿನ ಬಹುತೇಕ 500 ನಾಷ್ಟಾ ಹಾಗೂ 1000 ಊಟ ಖಾಲಿಯಾಗುತ್ತಿದೆ. ಕೆಲವೊಂದು ದಿನ ರಾತ್ರಿ 10–20 ಊಟ ಉಳಿಯುತ್ತದೆ. ಪೊಂಗಲ್ ಬೇಡ ಎಂದು ಹಲವು ಗ್ರಾಹಕರು ಹೇಳಿದ್ದಾರೆ. ಅದನ್ನು ಬಿಟ್ಟರೆ ಈ ವರೆಗೆ ಯಾವುದೇ ದೂರುಗಳಿಲ್ಲ’ ಎಂದು ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಹಿಂಭಾಗದ ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ಮಹೇಶ್ ಜಾಮದಾರ್ ತಿಳಿಸಿದರು.

‘ಬೆಂಗೇರಿಯ ಕಿಚನ್‌ನಿಂದ ಊಟ ಪೂರೈಕೆ ಮಾಡಲಾಗುತ್ತಿದ್ದು, ಪ್ರತಿ ದಿನ ಬಹುತೇಕ ಪೂರ್ಣ ಆಹಾರ ಖಾಲಿಯಾಗುತ್ತಿದೆ. ಪೊಂಗಲ್ ಬದಲಾಯಿಸುವಂತೆ ಕೆಲವರು ಸಲಹೆ ನೀಡಿದ್ದಾರೆ. ಸಂಬಂಧಿಸಿದವರೊಂದಿಗೆ ಚರ್ಚಿಸಿ ಅದರ ಬಗ್ಗೆ ತೀರ್ಮಾನ ಮಾಡಲಾಗುವುದು’ ಎಂದು ಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕ ಪ್ರಕಾಶ್ ಪವಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.