ಧಾರವಾಡ: ಶಿಥಿಲಾವಸ್ಥೆಯ ಕಟ್ಟಡಗಳು, ಶಿಕ್ಷಕರ ಕೊರತೆ ಹಾಗೂ ಮೂಲ ಸೌಕರ್ಯದಿಂದ ವಂಚಿತವಾಗಿರುವ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಹಾಗೂ ಹಾಜರಾತಿ ಕುಸಿಯುತ್ತಲೇ ಸಾಗಿದೆ.
ಕುಂದಗೋಳ ಕಡಿಮೆ ದಾಖಲಾತಿ ಹೊಂದಿದ ತಾಲ್ಲೂಕಾಗಿದೆ. ಕಳೆದ ಬಾರಿ 24 ಸಾವಿರದಷ್ಟು ಇದ್ದ ದಾಖಲಾತಿ, ಈ ಬಾರಿ 22 ಸಾವಿರಕ್ಕೆ ಇಳಿದಿದೆ. 21 ಸಾವಿರರಷ್ಟಿದ್ದ ಹಾಜರಾತಿ 19.6 ಸಾವಿರಕ್ಕೆ ಕುಸಿದಿದೆ. ನವಲಗುಂದ ತಾಲ್ಲೂಕಿನ ನಾಗನೂರ ಗ್ರಾಮದ ಶಾಲೆಯಲ್ಲಿ 2ನೇ ತರಗತಿಗೆ ಒಂದೇ ವಿದ್ಯಾರ್ಥಿ ದಾಖಲಾತಿ ಪಡೆದಿದ್ದು, ಕಡಿಮೆ ದಾಖಲಾತಿ ಪಡೆದ ಶಾಲೆ ಎಂಬ ಹಣೆಪಟ್ಟಿ ಪಡೆದಿದೆ.
ಹುಬ್ಬಳ್ಳಿ ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ 2022ರಲ್ಲಿ 1.8 ಲಕ್ಷ ಮಕ್ಕಳು ದಾಖಲಾತಿ ಪಡೆದಿದ್ದರು. ಇದು ಜಿಲ್ಲೆಯಲ್ಲಿಯೇ ಅತ್ಯಧಿಕವಾಗಿತ್ತು. ಈ ಬಾರಿ ಅದು 97 ಸಾವಿರಕ್ಕೆ ಇಳಿದಿದೆ. 1.3 ಲಕ್ಷರಷ್ಟಿದ್ದ ಹಾಜರಾತಿ 94.7 ಸಾವಿರಕ್ಕೆ ಕುಸಿದಿದೆ. ಹುಬ್ಬಳ್ಳಿಯ ಬಿಡ್ನಾಳದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 875 ಮಕ್ಕಳು ದಾಖಲಾತಿ ಪಡೆದಿದ್ದು, ಜಿಲ್ಲೆಯಲ್ಲಿಯೇ ಅತ್ಯಧಿಕವಾಗಿದೆ.
ಕೋವಿಡ್–19 ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಆ ವರ್ಷಗಳಲ್ಲಿ ದಾಖಲಾತಿ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಆದರೆ, ಕಳೆದ ವರ್ಷದಿಂದ ಮತ್ತೆ ಕುಸಿಯುತ್ತಿದೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಮುಗಿದಿದ್ದು, ದಾಖಲಾತಿ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಎರಡು ವಿಭಾಗದಲ್ಲಿ ಇಳಿಕೆ ಕಂಡು ಬಂದಿದೆ.
‘ಶೌಚಾಲಯಗಳ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಮೈದಾನಗಳ ಕೊರತೆ, ಶಿಕ್ಷಕರ ಕೊರತೆ, ಸಂಬಂಧ ಇಲ್ಲದ ಶಿಕ್ಷಕರನ್ನು ವಿಷಯವಾರು ಪಾಠ ಬೋಧನೆಗೆ ನಿಯೋಜಿಸುವುದು, ಸಮಯಕ್ಕೆ ಸರಿಯಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡದಿರುವುದು ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ರಾಜ್ಯ ಸರ್ಕಾರ ಇವುಗಳ ಬಗ್ಗೆ ಗಮನ ಹರಿಸಿ, ಸರ್ಕಾರಿ ಶಾಲೆಗಳ ಪುನಶ್ವೇತನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಶಿಕ್ಷಣ ಪ್ರೇಮಿ ಮೋಹನ್ ಸಿದ್ದಾಂತಿ ತಿಳಿಸಿದರು.
‘ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಮಕ್ಕಳು ಇಂಗ್ಲಿಷನಲ್ಲಿ ಕಲಿತರೇ ಉದ್ಯೋಗ ಪಡೆಯುತ್ತಾರೆ ಎಂಬ ತಪ್ಪು ಕಲ್ಪನೆ ಅವರಲ್ಲಿದೆ. ಆದರೆ, ಅವರಿಗೆ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತದೆ ಎಂಬುದು ತಿಳಿದಿಲ್ಲ. ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಸರ್ಕಾರಿ ಶಾಲೆಗೆ ಬರುತ್ತಾರೆ. ಪಾಲಕರು ಆಗಾಗ ಮಕ್ಕಳನ್ನು ತಮ್ಮ ಜತೆ ಕೆಲಸಕ್ಕೆ ಕರೆದುಕೊಂಡು ಹೋಗುವುದರಿಂದ ಹಾಜರಾತಿ ಕಡಿಮೆ ಇದೆ’ ಎಂದು ಕಮಲಾಪೂರ ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.