ADVERTISEMENT

ಹುಬ್ಬಳ್ಳಿ | ಸ್ಮಾರ್ಟ್ ಸಿಟಿ ಯೋಜನೆಗಳ ಹಸ್ತಾಂತರ ಬಹುತೇಕ ಪೂರ್ಣ

ಸ್ಮಾರ್ಟ್ ಸಿಟಿ: ಪಾಲಿಕೆ ನೇಮಿಸಿದ ಸಮಿತಿ ವರದಿ ನೀಡದಿದ್ದರೂ ನಡೆದ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 0:30 IST
Last Updated 6 ಏಪ್ರಿಲ್ 2023, 0:30 IST
ಯೋಜನೆಗಳ ವಿವರ
ಯೋಜನೆಗಳ ವಿವರ   

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹು–ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕೈಗೊಂಡಿರುವ ಯೋಜನೆಗಳ ಗುಣಮಟ್ಟದ ಪರಿಶೀಲನೆ ನಡೆದ ಬಳಿಕವೇ, ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಬೇಕೆಂಬ ಸದಸ್ಯರ ಒತ್ತಡದ ನಡುವೆಯೇ ಸದ್ದಿಲ್ಲದೆ ಪಾಲಿಕೆಗೆ ಯೋಜನೆಗಳ ಹಸ್ತಾಂತರ ನಡೆದಿದೆ.

ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಹೊರತುಪಡಿಸಿ, ಮೂರನೇ ವ್ಯಕ್ತಿ ಪರಿಶೀಲನೆ ನಡೆಸಿದ ಬಳಿಕ ಹಸ್ತಾಂತರ ಪ್ರಕ್ರಿಯೆ ಕೈಗೊಳ್ಳಬೇಕು ಎಂಬ ಕೂಗು ಸದಸ್ಯರಿಂದ ಕೇಳಿಬಂದಿತ್ತು. ಇದಕ್ಕಾಗಿ, ಬಿವಿಬಿ ಮತ್ತು ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ತಾಂತ್ರಿಕ ತಜ್ಞರ ಸಮಿತಿಯನ್ನು ಪಾಲಿಕೆ ನೇಮಿಸಿತ್ತು. ಸಮಿತಿ ವರದಿ ನೀಡುವುದಕ್ಕೂ ಮುನ್ನವೇ ಯೋಜನೆಗಳ ಹಸ್ತಾಂತರವಾಗಿದೆ.

ಡೀಮ್ಡ್ ಹಸ್ತಾಂತರ: ‘ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿ ಪಾಲಿಕೆಗೆ ಹಸ್ತಾಂತರ ಮಾಡುವುದು ನಮ್ಮ ಕರ್ತವ್ಯ. ಅದಕ್ಕೆ ಸಂಬಂಧಿಸಿದ ವರದಿಗಳನ್ನು ಈಗಾಗಲೇ ಪಾಲಿಕೆಗೆ ಸಲ್ಲಿಸಲಾಗಿದೆ. ಕೆಲವನ್ನು ಡೀಮ್ಡ್ ಆಗಿ ಹಸ್ತಾಂತರ ಮಾಡಲಾಗಿದೆ’ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕ್ರೀಡಾ ಸಂಕೀರ್ಣ, ಬಹುಮಹಡಿ ಪಾರ್ಕಿಂಗ್, ಉಣಕಲ್ ಕೆರೆ ಅಭಿವೃದ್ಧಿ ಸೇರಿದಂತೆ ಕೆಲ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಸ್ಮಾರ್ಟ್ ಸಿಟಿ ಯೋಜನೆಗಳ ಅವಧಿ ಜೂನ್‌ಗೆ ಪೂರ್ಣಗೊಳ್ಳಲಿದ್ದು, ಒಂದು ಯೋಜನೆ ಯನ್ನು ಹೊರತುಪಡಿಸಿ ಉಳಿದೆಲ್ಲ ವನ್ನು ಅಷ್ಟರೊಳಗೆ ಸಂಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಭೇಟಿ ನೀಡಿ ಉದ್ಘಾಟಿಸಿದ 16 ಯೋಜನೆಗಳಲ್ಲಿ ಕ್ರೀಡಾ ಸಂಕೀರ್ಣ, ನೆಹರು ಮೈದಾನ ಸೇರಿದಂತೆ ಕೆಲ ಯೋಜನೆಗಳು ಅಪೂರ್ಣವಾಗಿವೆ. ಪಾಲಿಕೆಯ ಆಡಳಿತ ಮಂಡಳಿ ಹಸ್ತಾಂತರ ಮಾಡಿಕೊಳ್ಳದಿದ್ದರೂ, ಅವುಗಳನ್ನು ಪ್ರಧಾನಿ ಉದ್ಘಾಟನೆ ಮಡಿದ್ದಾರೆ.

ಅಪೂರ್ಣವಿದ್ದರೂ ಹಸ್ತಾಂತರ: ‘ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕೆಲವು ಪೂರ್ಣಗೊಂಡಿಲ್ಲ. ಹಲವು ಕಾಮಗಾರಿಗಳು ಕಳಪೆಯಾಗಿವೆ. ಅವುಗಳ ಗುಣಮಟ್ಟದ ಬಗ್ಗೆ ಪಾಲಿಕೆ ಸದಸ್ಯರೇ ಅಪಸ್ವರ ಎತ್ತಿದ್ದಾರೆ. ಅಧಿಕಾರಿ ಗಳು ಮಾತ್ರ ಅವಸರದಲ್ಲಿ ಹಸ್ತಾಂತರ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಲಿಂಗರಾಜ ಧಾರವಾಡಶೆಟ್ಟರ ದೂರಿದರು.

‘ಯಾವುದೇ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿ, ಅನುಕೂಲ ಮತ್ತು ಅನಾನುಕೂಲಗಳನ್ನು ಪರಿಶೀಲಿಸಬೇಕು. ಯೋಜನೆಗಳು ಒಮ್ಮೆ ಪಾಲಿಕೆಗೆ ಹಸ್ತಾಂತರವಾದರೆ, ಮುಂದೆ ಏನೂ ಮಾಡಲು ಬರುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಅಧಿಕಾರಿಗಳಿಂದ ಜಂಟಿ ಪರಿಶೀಲನೆ

ಯೋಜನೆಗಳ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದ್ದೆವು. ಆದರೆ, ಸಮಿತಿ ವರದಿ ನೀಡಿಲ್ಲ. ಹಾಗಾಗಿ, ಡೀಮ್ಡ್ ಆಗಿ ಹಸ್ತಾಂತರವಾಗಿದೆ. ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಅಧಿಕಾರಿಗಳ ತಂಡದಿಂದಲೇ ಯೋಜನೆಗಳ ಪರಿಶೀಲನೆ ಮಾಡಿಸುವಂತೆ ಕೆಯುಡಿಐಎಫ್‌ಸಿ ಸೂಚನೆ ನೀಡಿದೆ. ಇಲಾಖೆಗಳ ಆದೇಶದ ಪ್ರಕಾರ ಹಸ್ತಾಂತರ ಪ್ರಕ್ರಿಯೆ ನಡೆದಿದೆ.

– ಡಾ. ಗೋಪಾಲಕೃಷ್ಣ ಬಿ., ಆಯುಕ್ತ, ಮಹಾನಗರ ಪಾಲಿಕೆ

ಪ್ರಕ್ರಿಯೆ ಬಹುತೇಕ ಪೂರ್ಣ

ಸ್ಮಾರ್ಟ್ ಸಿಟಿ ಯೋಜನೆಗಳನ್ನು ಪಾಲಿಕೆಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಇದುವರೆಗೆ 30 ಯೋಜನೆಗಳು ಹಸ್ತಾಂತರವಾಗಿವೆ. ಉಳಿದವುಗಳನ್ನು ಡೀಮ್ಡ್ ಆಗಿ ಹಸ್ತಾಂತರ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಯೋಜನೆಗಳಲ್ಲಿ ಕೆಲವು ಡೀಮ್ಡ್ ಹಸ್ತಾಂತರವಾಗಿದ್ದವು. ಕೆಲ ಯೋಜನೆಗಳ ಜಂಟಿ ಪರಿಶೀಲನೆ ಆಗಬೇಕಿದೆ.

– ಪ್ರಿಯಾಂಗ ಎಂ., ವ್ಯವಸ್ಥಾಪಕ ನಿರ್ದೇಶಕಿ, ಹು–ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

ಪರಿಶೀಲನೆ ಬಳಿಕವೇ ಹಸ್ತಾಂತರ

ಯೋಜನೆಗಳ ಗುಣಮಟ್ಟ ಪರಿಶೀಲನೆಗೆ ಆಯುಕ್ತರು ಸಮಿತಿ ರಚಿಸಿದ್ದರೂ, ಅದಕ್ಕೆ ಅಗತ್ಯ ಮಾಹಿತಿ ಕೊಟ್ಟಿಲ್ಲ. ಹಾಗಾಗಿ, ವರದಿ ಕೊಟ್ಟಿಲ್ಲ. ಪ್ರಧಾನಿ ಮೋದಿ ಅವರು ಯೋಜನೆಗಳನ್ನು ಲೋಕಾರ್ಪಣೆ ಮಾಡುವುದಕ್ಕೆ ಮುಂಚೆಯೇ ಈ ಪ್ರಕ್ರಿಯೆ ಮುಗಿಯಬೇಕಿತ್ತು. ಸಂಬಂಧಪಟ್ಟವರಿಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿಳಂಬವಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿಯುವುದರೊಳಗೆ ಯೋಜನೆಗಳ ಗುಣಮಟ್ಟ ಪರಿಶೀಲನೆಯಾಗಬೇಕು. ಇಲ್ಲದಿದ್ದರೆ, ಯಾವುದೇ ಕಾರಣಕ್ಕೂ ಹಸ್ತಾಂತರ ಮಾಡಿಕೊಳ್ಳುವುದಿಲ್ಲ. ಅದನ್ನೂ ಮೀರಿ ಮುಂದುವರಿದರೆ ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಪತ್ರ ಬರೆಯಲಾಗುವುದು.

– ಈರೇಶ ಅಂಚಟಗೇರಿ, ಮೇಯರ್, ಹು–ಧಾ ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.