
ಪ್ರಜಾವಾಣಿ ವಾರ್ತೆ
ಧಾರವಾಡ: ನಗರದ ನುಗ್ಗಿಕೇರಿಯ ಆಂಜನೇಯ ದೇವರ ಮೂರ್ತಿಯನ್ನು ಚಿನ್ನದ ಕವಚದಿಂದ (1.4 ಕೆ.ಜಿ) ಶನಿವಾರ ಅಲಂಕರಿಸಲಾಗಿತ್ತು. ಭಕ್ತರು ಮೂರ್ತಿ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ಪರ್ಯಾಯಸ್ಥರು ಮತ್ತು ಭಕ್ತರು ಸಹಕಾರದಿಂದ ಈ ಬಂಗಾರ ಕವಚ ಸಿದ್ಧವಾಗಿದೆ. ಸ್ವರ್ಣ ಜ್ಯುವೆಲ್ಲರ್ಸ್‌ನವರು ಕವಚ ತಯಾರಿಸಿದ್ದಾರೆ. ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿಯವರು ಈ ಆಭರಣವನ್ನು ನವೆಂಬರ್ 25ರಂದು ಸಮರ್ಪಣೆ ಮಾಡಿ ಆಭರಣ ಪೂಜೆ ನೆರವೇರಿಸಿದ್ದರು.
‘ಕಿರೀಟ ಭಾಗದಿಂದ ಪಾದದವರೆಗೆ ಕವಚ ನಿರ್ಮಿಸಲಾಗಿದೆ. ಮೂರು ತಿಂಗಳಲ್ಲಿ ತಯಾರಿಸಲಾಗಿದೆ’ ಎಂದು ಕವಚ ತಯಾರಕ ಗುಜ್ಜಾಡಿ ಪ್ರಭಾಕರ ನಾಯಕ ತಿಳಿಸಿದರು.
ಚಿನ್ನದ ಕವಚ ಸಿದ್ಧಪಡಿಸಿದ ಸ್ವರ್ಣ ಜುವೆಲರ್ಸ್ ಸಿಇಒ ಗುಜ್ಜಾಡಿ ಪ್ರಭಾಕರ ನಾಯಕ ದಂಪತಿಯನ್ನು ದೇವಸ್ಥಾನದ ಸಮಿತಿಯವರು ಸನ್ಮಾನಿಸಿದರು. ಪರ್ಯಾಯಸ್ಥರಾದ ಕೆ.ಆರ್. ದೇಸಾಯಿ, ಶ್ರೀಧರ ದೇಸಾಯಿ, ಪಲ್ಹಾದ ದೇಸಾಯಿ ಇದ್ದರು.