ADVERTISEMENT

ಉಕ್ಕಿದ ಬೆಣ್ಣೆಹಳ್ಳ, ಹಂದಿಗನ ಹಳ್ಳ: ಗ್ರಾಮಗಳು ಜಲಾವೃತ, ಅಪಾರ ಹಾನಿ

ತೀವ್ರ ಸಂಕಷ್ಟದಲ್ಲಿ ಜನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 3:48 IST
Last Updated 7 ಸೆಪ್ಟೆಂಬರ್ 2022, 3:48 IST
ಬೆಣ್ಣೆಹಳ್ಳದ ಪ್ರವಾಹದ ಪರಿಣಾಮ ನವಲಗುಂದ ತಾಲ್ಲೂಕಿನಲ್ಲಿ ನೂರಾರು ಹೆಕ್ಟೇರ್ ಜಮೀನು ಜಲಾವೃತಗೊಂಡಿವೆ
ಬೆಣ್ಣೆಹಳ್ಳದ ಪ್ರವಾಹದ ಪರಿಣಾಮ ನವಲಗುಂದ ತಾಲ್ಲೂಕಿನಲ್ಲಿ ನೂರಾರು ಹೆಕ್ಟೇರ್ ಜಮೀನು ಜಲಾವೃತಗೊಂಡಿವೆ   

ನವಲಗುಂದ: ಬೆಣ್ಣೆಹಳ್ಳ, ಹಂದಿಗನ ಹಳ್ಳ ಉಕ್ಕಿದ ಪರಿಣಾಮ ಅಪಾರ ಬೆಳೆ ಹಾನಿಯಾಗಿದೆ. ಹಂದಿಗನ ಹಳ್ಳ ಉಕ್ಕಿದ್ದರಿಂದ ರೋಣ– ನವಲಗುಂದ ಸಂಪರ್ಕ ರಸ್ತೆಯ ಸೇತುವೆ ಕುಸಿದು ಬಿದ್ದಿದೆ. ಶಲವಡಿ ಗ್ರಾಮದ ಸಂಪರ್ಕ ರಸ್ತೆಗೆ ಹಾನಿಯಾಗಿದ್ದು, ಸಂಚಾರ ಸ್ಥಗಿತವಾಗಿದೆ.

ಖನ್ನೂರ ಗ್ರಾಮದಲ್ಲಿ ರಾತ್ರಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಒಂದೇ ಕುಟುಂಬದ ಮಂಜುನಾಥ ನಾಗಪ್ಪ ತಳವಾರ (25) ಹನುಮಂತಪ್ಪ ನಾಗಪ್ಪ ತಳವಾರ (22) ತ್ಯಾಗಪ್ಪ ಸೋಮಪ್ಪ ತಳವಾರ (55) ಮನೆಯಲ್ಲಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳ
ದೊಂದಿಗೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಅನೀಲ ಬಡಗೇರ, ಪಿಎಸ್‍ಐ ನವೀನ ಜಕ್ಕಲಿ ಅವರ ತಂಡ ಕಾರ್ಯಾಚರಣೆ ನಡೆಸಿ ಮೂರೂ ಮಂದಿಯನ್ನು ರಕ್ಷಿಸಿತು. ಪ್ರವಾಹ ವೀಕ್ಷಿಸಲು ತೆರಳಿದ್ದ ವೇಳೆ ಸೇತುವೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿ ಗಿಡದಲ್ಲಿ ಸಿಕ್ಕಿಹಾಕಿಕೊಂಡಿದ್ದ ಚನ್ನಬಸಪ್ಪ ತಿಮ್ಮನವರ ಅವರನ್ನು ಸಹ ರಕ್ಷಿಸಲಾಗಿದೆ.

ಭೂಗಾನೂರ ಗ್ರಾಮದಲ್ಲಿ 45ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಾಲ್ಕು ಮನೆಗಳು ಕುಸಿದಿವೆ. ತಮ್ಮ ಮನೆಯೂ ಬೀಳಬಹುದು ಎಂಬ ಆತಂಕ
ದಲ್ಲಿ ಕೆಲಸವರು ಗ್ರಾಮ ತೊರೆಯುತ್ತಿ
ದ್ದಾರೆ. ಖನ್ನೂರ ಗ್ರಾಮದಲ್ಲಿ 10 ಮನೆ
ಗಳಿಗೆ ನೀರು ನುಗ್ಗಿದ್ದು, ನಿರಾಶ್ರಿತರಿಗೆ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದರು.

ADVERTISEMENT

ಅರಹಟ್ಟಿ ಗ್ರಾಮಕ್ಕೆ ಬೆಳಗಿನ ಜಾವ 4 ಗಂಟೆಗೆ ಸುಮಾರಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಭೂಕುಸಿತ ಉಂಟಾಗಿ ನಿಂಗಪ್ಪ ಬಸಪ್ಪ ಶಿವಳ್ಳಿ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್‌ ನೆಲದಲ್ಲಿ ಹೂತುಕೊಂಡಿದೆ. ಕೃಷಿ ಉಪಕರಣಗಳು ನೀರಿನಲ್ಲಿ ಮುಳುಗಿವೆ.

ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ರೈತರು ಬೆಳೆದ ಹೆಸರು ರಾಶಿ ಮಾಡಿ ಖರೀದಿ ಕೇಂದ್ರಕ್ಕೆ ಕೊಂಡೊಯ್ಯುವ ಸಿದ್ಧತೆಯಲ್ಲಿದ್ದರು. ಆದರೆ ಮಳೆ ನೀರು ನುಗ್ಗಿ ಹೆಸರು ಚೀಲಗಳು ನೆಂದುಹೋಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ.

ಉಕ್ಕಿದ ಬೆಣ್ಣಿಹಳ್ಳ: ಬೆಣ್ಣೆಹಳ್ಳ ಪ್ರವಾಹದಿಂದಾಗಿ ತಾಲ್ಲೂಕಿನ ಆರೇ ಕುರಹಟ್ಟಿಯಲ್ಲಿ 80, ಪಡೆಸೂರ ಗ್ರಾಮದಲ್ಲಿ 40 ಮನೆಗಳಿಗೆ ನೀರು ನುಗ್ಗಿದೆ. ಯಮನೂರ ಗ್ರಾಮದಲ್ಲಿ 10 ಮನೆಗಳಿಗೆ ನೀರು ನುಗ್ಗಿದ್ದು, ಕಾಲವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ತಹಡಹಾಳ ಮತ್ತು ಅರಹಟ್ಟಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಖನ್ನೂರ ಮತ್ತು ನ್ಯಾವಳ್ಳಿ ಗ್ರಾಮದ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಇಲ್ಲಿಯೂ ರಸ್ತೆ ಸಂಪರ್ಕ ಕಡಿತಗೊಂಡಿದೆ. ಯಮನೂರ ಮತ್ತು ಪಡೆಸೂರ ಗ್ರಾಮಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಭೂಗಾನೂರ ಗ್ರಾಮ ರೈತ ಈಶ್ವರ ಕುಲಕರ್ಣಿ ಅವರಿಗೆ ಸೇರಿದ ಕರು ನೀರಿನಲ್ಲಿ ಮುಳಗಿ ಮೃತಪಟ್ಟಿದೆ. ಅಲ್ಲದೇ ಅರಹಟ್ಟಿ ಗ್ರಾಮದ ರೈತ ಬಸಪ್ಪ ಶಂಕ್ರಪ್ಪ ಜಲಾದಿ ಎಂಬುವರಿಗೆ ಸೇರಿದ ಎರಡು ಆಡು, ಎಮ್ಮೆ ಕರು ಮೃತಪಟ್ಟಿದೆ.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಾಲ್ಲೂಕಿನ ಖನ್ನೂರ ಗ್ರಾಮದಲ್ಲಿ ಪ್ರವಾಹ ಪರಿಶೀಲನೆ ಮಾಡಲು ತೆರಳಿದ ವೇಳೆ ರೈತ ತಿಪ್ಪಣ್ಣ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನ ಕಲಕುವಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.