ADVERTISEMENT

ಬ್ಯಾಹಟ್ಟಿ: ಗ್ರಾಮದೇವಿಯರ ಜಾತ್ರಾ ಮಹೋತ್ಸವ ಮೇ 13ರವರೆಗೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 14:06 IST
Last Updated 5 ಮೇ 2022, 14:06 IST
ಬ್ಯಾಹಟ್ಟಿಯ ಗ್ರಾಮದೇವತೆಗಳು
ಬ್ಯಾಹಟ್ಟಿಯ ಗ್ರಾಮದೇವತೆಗಳು   

ಹುಬ್ಬಳ್ಳಿ: ತಾಲ್ಲೂಕಿನ ಬ್ಯಾಹಟ್ಟಿಯ ಗ್ರಾಮ ದೇವತೆಯರಾದ ದ್ಯಾಮವ್ವ, ದುರ್ಗವ್ವ, ಉಡಚಮ್ಮ, ಸೀಮಿ ದ್ಯಾಮವ್ವ ಹಾಗೂ ಗಾಳಿ ದುರ್ಗಮ್ಮನವರ ಜಾತ್ರಾ ಮಹೋತ್ಸವ ಗುರುವಾರ ಆರಂಭಗೊಂಡಿದ್ದು ಮೇ 13ರವರೆಗೆ ನಡೆಯಲಿದೆ.

‘480 ವರ್ಷದ ಹಿಂದೆ ಗ್ರಾಮದೇವತೆಗಳ ಜಾತ್ರೆ ನಡೆದಿತ್ತು ಎಂಬ ಪ್ರತೀತಿ ಇದೆ. ಇದೀಗ ನೂತನ ದೇವಸ್ಥಾನದ ಉದ್ಘಾಟನೆಯೊಂದಿಗೆ ಮತ್ತೆ ಒಂಬತ್ತು ದಿನಗಳ ಜಾತ್ರೆಯನ್ನು ಗ್ರಾಮ ಪಂಚಾಯಿತಿ ಬಯಲಿನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಗ್ರಾಮದೇವತೆಗಳ ಹೊಸ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಅಷ್ಟೂ ದಿನಗಳು ವಿವಿಧ ಕಾರ್ಯಕ್ರಮಗಳು, ಪ್ರವಚನ ಹಾಗೂ ರಸಮಂಜರಿ ಜರುಗಲಿದೆ’ ಎಂದುಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ನಿರ್ದೇಶಕ ಮೂಗಪ್ಪ ಬೆಟದೂರ ಹೇಳಿದರು.

‘ಪ್ರತಿ ದಿನ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಧರ್ಮಸಭೆ ಹಾಗೂ ಪ್ರವಚನ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ನಿತ್ಯವೂ ಒಂದೊಂದು ರೀತಿಯ ರಸಮಂಜರಿ, ಜಾನಪದ ಸಂಗೀತ, ನೃತ್ಯ, ಜೋಗುತಿ ಕುಣಿತ, ಸಂಗೀತ ಕಾರ್ಯಕ್ರಮ, ಮಲ್ಲಕಂಭ ಪ್ರದರ್ಶನ ಇರಲಿದೆ. 13ರಂದು ನಡೆಯುವ ಜಾತ್ರೆಯ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ವಹಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ್ಯೋತಿ ಬೆಳಗಿಸಲಿದ್ದಾರೆ’ ಎಂದರು.

ADVERTISEMENT

‘ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಬ್ಯಾಹಟ್ಟಿಯ ಹಿರೇಮಠದ ಮರುಳಸಿದ್ಧ ಸ್ವಾಮೀಜಿ, ಮಣಕವಾಡದ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತಿ ವಹಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಜಗದೀಶ ಶೆಟ್ಟರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಮುಖ್ಯ ಅತಿಥಿಗಳಾಗಿ ಶಾಸಕರಾದ ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ ಮಾಜಿ ಶಾಸಕರಾದ ಸಂತೋಷ್ ಲಾಡ್, ಕೆ.ಎನ್. ಗಡ್ಡಿ, ನಾಗರಾಜ ಛಬ್ಬಿ, ಮುಖಂಡರಾದ ವಿನೋದ ಅಸೂಟಿ, ಬಸನಗೌಡ ಆಡೂರಗೌಡ್ರ, ಪರಮೇಶ್ವರ ಯಡ್ರಾವಿ ಹಾಗೂ ಲಲಿತಾ ತಮ್ಮಣ್ಣ ಬೆಟದೂರ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಪಾದರಕ್ಷೆ ಧರಿಸುವಂತಿಲ್ಲ’
‘ಗ್ರಾಮದಲ್ಲಿ ಜಾತ್ರೆ ಮುಗಿಯುವವರೆಗೆ ಒಂಬತ್ತು ದಿನಗಳವರೆಗೆ ಯಾರೂ ಕಾಲಿಗೆ ಪಾದರಕ್ಷೆ ಮತ್ತು ಶೂ ಧರಿಸುವಂತಿಲ್ಲ. ಹೊರಗಿನವರೂ ಧರಿಸಿಕೊಂಡು ಬರುವಂತಿಲ್ಲ. ಗುಟಕಾ, ತಂಬಾಕು ತಿನ್ನುವಂತಿಲ್ಲ. ಮದ್ಯ ಮತ್ತು ಧೂಮಪಾನ ಮಾಡುವಂತಿಲ್ಲ. ಒಂಬತ್ತು ದಿನವೂ ಮೂರು ಹೊತ್ತು ಪ್ರಸಾದ ವ್ಯವಸ್ಥೆ ಇರುವುದರಿಮದ ಮನೆಯಲ್ಲಿ ಅಡುಗೆ ಮಾಡುವಂತಿಲ್ಲ. ಕೊನೆಯ9ನೇ ದಿನದಂದು ರಾತ್ರಿ 11ರಿಂದ ಬೆಳಿಗ್ಗೆ 6ರವರೆಗೆ ಗ್ರಾಮದ ಸರಹದ್ದನ್ನು ಪೊಲೀಸರ ಸಹಕಾರದಲ್ಲಿ ಬಂದ್ ಮಾಡಲಾಗುವುದು. ಅಂದು ಯಾರೂ ಮೂರ್ತಿಗಳನ್ನು ನೋಡುವಂತಿಲ್ಲ.ಜಾತ್ರೆ ಮುಗಿದ ಬಳಿಕ ಮುಂದಿನ ಬಸವ ಜಯಂತಿವರೆಗೆ ಮದುವೆ ಕಾರ್ಯ ಮಾಡುವಂತಿಲ್ಲ’ ಎಂದುಮೂಗಪ್ಪ ಬೆಟದೂರ ಹೇಳಿದರು.

ಗ್ರಾಮದ ಎಂ.ವಿ. ಹೈದರ, ತುಳಜಪ್ಪ ಹುಲಕೋಟಿ, ಮಂಜುನಾಥ ಬೆಟಗೇರಿ, ಸಂಜೀವ ಶಾನವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.