
ಧಾರವಾಡ: ‘ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಧಾರವಾಡ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಮಹಾನ್ ಕಲಾವಿದರು ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ’ ಎಂದು ಪಂಡಿತ್ ಎಂ. ವೆಂಕಟೇಶ ಕುಮಾರ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ನಡೆದ ಸ್ವರಸೇನ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಪಂಚಾಕ್ಷರಿ ಗವಾಯಿ, ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಶಿ, ಬಸವರಾಜ ರಾಜಗುರು, ಪುಟ್ಟರಾಜ ಗವಾಯಿ, ಗಂಗೂಬಾಯಿ ಹಾನಗಲ್ ಮೊದಲಾದ ಗಾಯಕರು ಸಂಗೀತ ಸಿದ್ಧಿಗೆ ಆದ್ಯತೆ ನೀಡಿದರು. ಸಂಗೀತ ಕ್ಷೇತ್ರವನ್ನು ಬೆಳೆಸಿದರು. ಹಿಂದಿನ ಕಲಾವಿದರು ಕಟ್ಟ ಪಟ್ಟರು, ಅದರ ಫಲವನ್ನು ಈಗಿನ ಕಲಾವಿದರು ಪಡೆಯುತ್ತಿದ್ದಾರೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಸಂಗೀತ ಸಾಧನೆಯು ಕಠಿಣವಾದ ತಪಸ್ಸು. ಅದನ್ನು ಸಿದ್ಧಿಸಿಕೊಳ್ಳಲು ಜೀವನ ಪರ್ಯಂತ ಸಾಧನೆ ಮಾಡಬೇಕು’ ಎಂದು ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಶಶಿಧರ ಸಾಲಿ, ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ್, ಪಿ.ಎಚ್. ನೀರಲಕೇರಿ, ಕೈವಲ್ಯಕುಮಾರ ಗುರವ ಇದ್ದರು.
ಸ್ವರಸೇನ ಪಂಡಿತ್ ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನದಿಂದ ಪ್ರತಿವರ್ಷ ಒಬ್ಬರು ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡುವ ಕಾರ್ಯ ಆಗಬೇಕುಪಂಡಿತ್ ಎಂ. ವೆಂಕಟೇಶ ಕುಮಾರ ಹಿಂದೂಸ್ತಾನಿ ಗಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.