ಹುಬ್ಬಳ್ಳಿ: ಎಚ್‌ಐವಿ/ ಏಡ್ಸ್ ಎಂದ ಕೂಡಲೇ ಜೀವ ಹೋಗುವಷ್ಟು ಭಯ ಬೀಳುವ ಕಾಲ ಒಂದಿತ್ತು. ಈಗ ಅಂಥ ಕಾಲ ಇಲ್ಲ. ಈ ಸೋಂಕಿಗೆ ಸೂಕ್ತ ಔಷಧ ಆವಿಷ್ಕಾರ ಆಗದಿದ್ದರೂ, ಸೋಂಕು ಹರಡದಂತೆ ಹಾಗೂ ಹೆಚ್ಚಳವಾಗದಂತೆ ತಡೆಯಲು ವ್ಯವಸ್ಥಿತ ಕ್ರಮ ಕೈಗೊಳ್ಳಲಾಗಿದೆ. ಔಷಧಗಳನ್ನು ನಿಯಮಿತವಾಗಿ ತೆಗೆದುಕೊಂಡವರು ಸಾಮಾನ್ಯರಂತೆ ವಿವಾಹವಾಗಿ ಇನ್ನೊಬ್ಬರಿಗೂ ಸೋಂಕು ಹರಡದಂತೆ ಕುಟುಂಬದೊಂದಿಗೆ ಬದುಕಲು ಕಲಿತಿದ್ದಾರೆ.
ಸದ್ಯ ಎಚ್‌ಐವಿ ಸೋಂಕು ಹರಡುವಿಕೆ ನಿಂತಿಲ್ಲವಾದರೂ, ನಿಯಂತ್ರಣದಲ್ಲಿದೆ. ಹೊಸ ಸೋಂಕಿತರ ಸಂಖ್ಯೆ ಕಡಿಮೆಯೂ ಆಗುತ್ತಿದೆ. ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಪತ್ತೆ ಮಾಡುವ ಸಮಗ್ರ ಆಪ್ತಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳು (ಐಸಿಟಿಸಿ) 11, ಎಫ್‌ಐಸಿಟಿಸಿ 34, ಪಿಪಿಪಿ ಕೇಂದ್ರ–1, ಪೂರ್ಣ ಪ್ರಮಾಣದ ಎಆರ್‌ಟಿ ಚಿಕಿತ್ಸಾ ಕೇಂದ್ರಗಳು (ಆ್ಯಂಟಿ ರಿಟ್ರೊ ವೈರಲ್ ಥೆರಪಿ) 2 ಇವೆ. ಲಿಂಕ್ ಎಆರ್‌ಟಿ ಕೇಂದ್ರಗಳು 3 ಇವೆ (ಕುಂದಗೋಳ, ಕಲಘಟಗಿ, ನವಲಗುಂದ) ಕೆಎಂಸಿ–ಆರ್‌ಐನಲ್ಲಿ ಇರುವ ಎಆರ್‌ಟಿ ಪ್ಲಸ್ ಕೇಂದ್ರದಲ್ಲಿ ಸದ್ಯ 4,500 ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 24 ಐಸಿಟಿಸಿ ಹಾಗೂ ಎಆರ್‌ಟಿ ಸಮಾಲೋಚಕರು ಇದ್ದು ಸೋಂಕಿತರೊಂದಿಗೆ ಸಮಾಲೋಚನೆ ನಡೆಸಿ ಅವರು ನಿರಂತರ ಚಿಕಿತ್ಸೆ ಪಡೆಯುವಂತೆ ಮನವೊಲಿಸುತ್ತಾರೆ. ಜಿಲ್ಲೆಯ ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ ಎಆರ್‌ಟಿ ಕೇಂದ್ರಗಳು ಇವೆ. ಎಚ್‌ಐವಿ ಸೋಂಕಿತರಿಗೆ ಜೀವಮಾನವಿಡೀ ಚಿಕಿತ್ಸೆ ಹಾಗೂ ಮಾತ್ರೆಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ.
‘ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುವ ಪ್ರಮಾಣವನ್ನು ಶೇ 100ರಷ್ಟು ನಿಯಂತ್ರಿಸಲಾಗಿದೆ. ಪ್ರತಿ ಗರ್ಭಿಣಿಗೂ ಎಚ್‌ಐವಿ ಟೆಸ್ಟ್ ಕಡ್ಡಾಯ ಮಾಡಿರುವುದರಿಂದ ಇದು ಸಾಧ್ಯವಾಗಿದೆ. ಎಚ್‌ಐವಿ ಸೋಂಕು ಇರುವುದು ಖಾತ್ರಿಯಾದರೆ ಅವರಿಗೆ ಔಷಧ ನೀಡಲು ಆರಂಭಿಸಲಾಗುತ್ತದೆ. ಮಗು ಜನಿಸಿದ ಕೂಡಲೇ ಅದಕ್ಕೆ ನೆವಿರಾಪಿನ್ ಅಥವಾ ಝಿಡೊವಿಡಿನ್ ಡ್ರಾಪ್ಸ್ ನೀಡಲಾಗುತ್ತದೆ. ಮಗುವಿಗೆ 6ನೇ ವಾರಕ್ಕೆ, 6ನೇ ತಿಂಗಳಿಗೆ ಹಾಗೂ 1 ವರ್ಷ ತುಂಬಿದಾಗ ರಕ್ತ ತಪಾಸಣೆ ಮಾಡಿಸಲಾಗುತ್ತದೆ. ಆಗ ಎಚ್‌ಐವಿ ನೆಗೆಟಿವ್ ಇದ್ದರೆ ಏನೂ ಸಮಸ್ಯೆ ಇಲ್ಲ ಎಂದು ಅರ್ಥ’ ಎಂದು ಎಆರ್‌ಟಿ ಪ್ಲಸ್ ಕೇಂದ್ರದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಬಿರಾದಾರ್ ತಿಳಿಸಿದರು.
‘ರಕ್ತ ಪಡೆದಾಗ ಹರಡುವ ಎಚ್‌ಐವಿ ಸೋಂಕನ್ನೂ ಕೂಡ ಶೇ 100ರಷ್ಟು ನಿಯಂತ್ರಿಸಲಾಗಿದೆ. ದೈಹಿಕ ಸಂಪರ್ಕದಿಂದ ಹರಡುವ ಸೋಂಕನ್ನು ನಿಯಂತ್ರಿಸುವುದೇ ಇಂದಿಗೂ ಇರುವ ಸವಾಲಾಗಿದೆ. ಬಹುತೇಕ ಜನರಲ್ಲಿ ಜಾಗೃತಿ ಮೂಡಿರುವುದರಿಂದ ಪರಿಸ್ಥಿತಿ ಆತಂಕಕಾರಿಯಾಗಿಯಾಗಿಲ್ಲ. ಆದರೆ ಹೊಸ ಪೀಳಿಗೆಯವರಲ್ಲಿ ಕಂಡು ಬರುತ್ತಿರುವ ಉಡಾಫೆ ಮನೋಭಾವದಿಂದಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ಲಿವ್ ಇನ್ ರಿಲೇಷನ್‌ಶಿಪ್‌ನಿಂದಲೂ ಎಚ್‌ಐವಿ ಸೋಂಕು ಹರಡುತ್ತಿದೆ’ ಎಂದವರು ವಿವರಿಸಿದರು.
‘ಸಾಮಾಜಿಕ ಕಳಂಕದ ಭಯ ಹಲವು ಎಚ್‌ಐವಿ ಸೋಂಕಿತರನ್ನು ಕಾಡುತ್ತದೆ. ಕೆಲವರು ಮನೆಯಿಂದ ಹೊರಗೆ ಬರಲೂ ಹೆದರುತ್ತಾರೆ. ಚಿಕಿತ್ಸೆ ಪಡೆಯಲು ಎಆರ್‌ಟಿ ಕೇಂದ್ರಕ್ಕೆ ಬಂದರೆ ಸಮಾಜದವರು ಗುರುತಿಸುತ್ತಾರೆ ಎಂದು ಸಹ ಕೆಲವರು ಹಿಂಜರಿಯುತ್ತಾರೆ. ಇಂಥ ಹಿಂಜರಿಕೆ, ಭಯ ತೊರೆದು ಅವರು ಸ್ವಾವಲಂಬಿಯಾದರೆ ಯಾರಿಗೂ ಭಯ ಪಡದೇ ಬದುಕಬಹುದು. ಜೀವನವಿಡೀ ನಿಯಮಿತ ಔಷಧ ಸೇವನೆ ಮಾತ್ರವೇ ಸದ್ಯಕ್ಕೆ ಈ ಸಮಸ್ಯೆಗೆ ಇರುವ ಪರಿಹಾರವಾಗಿದೆ. ಈ ಬಗ್ಗೆ ಎಆರ್‌ಟಿ ಕೇಂದ್ರದಲ್ಲಿರುವ ಸಮಾಲೋಚಕರು ಸೋಂಕು ಪೀಡಿತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾರೆ, ಪೂರ್ಣ ಮಾರ್ಗದರ್ಶನ ನೀಡುತ್ತಾರೆ’ ಎಂದು ಡಾ. ಬಿರಾದಾರ್ ತಿಳಿಸಿದರು.
‘ಮಕ್ಕಳಲ್ಲಿ ಎಚ್‌ಐವಿ ಕಂಡು ಬಂದಾಗ ಅವರಿಗೆ 10 ವರ್ಷವಾದಾಗ ಭಾಗಶಃ ಸೋಂಕಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ. 16–18 ವರ್ಷವಾಗುವ ಸಂದರ್ಭದಲ್ಲಿ ಪೂರ್ಣ ವಿವರ ತಿಳಿಸಿ ಮಾತ್ರೆಗಳನ್ನು ಜೀವನವಿಡೀ ತೆಗೆದುಕೊಳ್ಳಬೇಕಾದ ಅವಶ್ಯಕತೆ ತಿಳಿಸಲಾಗುತ್ತದೆ. ಕೆಲವು ಮಕ್ಕಳು ನಿಯಮಿತ ತಪಾಸಣೆ, ಮಾತ್ರೆ ತೆಗೆದುಕೊಳ್ಳುವುದನ್ನು ಇಷ್ಟ ಪಡುವುದಿಲ್ಲ. ಆರೋಗ್ಯ ಬಿಗಡಾಯಿಸಿದಾಗ ಪಾಲಕರು ಮತ್ತೆ ಕರೆತರುತ್ತಾರೆ’ ಎಂದು ಅವರು ತಿಳಿಸಿದರು.
‘ಎಚ್‌ಐವಿ ಸೋಂಕು ಪತ್ತೆಯಾದಾಗ ಅವರು ಓದಿದವರಾದರೇ ಸಾಮಾಜಿಕ ಕಳಂಕ ಎದುರಾಗುವ ಭಯದಲ್ಲಿ ಒದ್ದಾಡುತ್ತಾರೆ. ಅಶಿಕ್ಷಿತರಾದರೆ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿ ಔಷಧವನ್ನೇ ಸರಿಯಾಗಿ ತೆಗೆದುಕೊಳ್ಳದೇ ನಂತರ ಆರೋಗ್ಯ ಸಮಸ್ಯೆಗೀಡಾಗುತ್ತಾರೆ. ಎಲ್ಲರಲ್ಲೂ ಮೊದಲು ಬರುವ ಪ್ರಶ್ನೆ ಎಂದರೆ ನನಗೆ ಎಲ್ಲಿಂದ ಇದು ತಗುಲಿತು? ಈ ಬಗ್ಗೆ ಸಮಾಲೋಚನೆ ನಡೆಸಿ ಅವರಲ್ಲಿ ಧೈರ್ಯ ತುಂಬುತ್ತೇವೆ. ಔಷಧಗಳನ್ನು ನಿಯಮಿತವಾಗಿ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡುತ್ತೇವೆ’ ಎಂದು ಎಆರ್‌ಟಿ ಪ್ಲಸ್ ಕೇಂದ್ರದ ಸಮಾಲೋಚಕರಾದ ಸೀಮಾ ಸ್ವಾಮಿ ತಿಳಿಸಿದರು.
‘ಎಚ್‌ಐವಿ ಸೋಂಕು ಖಚಿತವಾದ ಕೂಡಲೇ ಎಆರ್‌ಟಿ ಕೇಂದ್ರದಲ್ಲಿ ಮೊದಲ ಹಂತದ ಚಿಕಿತ್ಸೆ ಆರಂಭಿಸಲಾಗುತ್ತದೆ. 6 ತಿಂಗಳ ನಂತರ ವೈರಲ್ ಲೋಡ್ ಪರೀಕ್ಷಿಸಲಾಗುತ್ತದೆ. ಇದು 1000ಕ್ಕಿಂತ ಹೆಚ್ಚು ಬಂದರೆ ಮತ್ತೆ ಮೂರು ತಿಂಗಳು ಅದೇ ಔಷಧಗಳನ್ನು ತಪ್ಪದೇ ತೆಗೆದುಕೊಳ್ಳುವಂತೆ ತಿಳಿಸಲಾಗುತ್ತದೆ. ನಂತರ ಮತ್ತೆ ವೈರಲ್ ಲೋಡ್ ಪರೀಕ್ಷೆ ಮಾಡಿಸಲಾಗುತ್ತದೆ. ಆಗಲೂ 1000ಕ್ಕಿಂತ ಹೆಚ್ಚು ಇದ್ದರೆ ಅವರಿಗೆ ಎರಡನೇ ಹಂತದ ಚಿಕಿತ್ಸೆ ನೀಡಲು ಆರಂಭಿಸಲಾಗುತ್ತದೆ. 6 ತಿಂಗಳ ನಂತರ ವೈರಲ್ ಲೋಡ್ ಟೆಸ್ಟ್ ಹಾಗೂ ಮತ್ತೆ ಮೂರು ತಿಂಗಳ ನಂತರ ಮತ್ತೆ ವೈರಲ್ ಲೋಡ್ ಟೆಸ್ಟ್ ಮಾಡಿದಾಗ 1000ಕ್ಕಿಂತ ಹೆಚ್ಚು ಬಂದರೆ ಅವರಿಗೆ 3ನೇ ಹಂತದ ಚಿಕಿತ್ಸೆಗೆ ರೆಫರ್ ಮಾಡಲಾಗುತ್ತದೆ. ಮೂರನೇ ಹಂತದ ಚಿಕಿತ್ಸೆ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.