
ಹುಬ್ಬಳ್ಳಿ: ನಗರದ ರಾಯಾಪೂರದಲ್ಲಿನ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಭಿಕ್ಷುಕರ ಹಾಗೂ ನಿರಾಶ್ರಿತರ ಪೋಷಣೆಗಾಗಿ ಸರ್ಕಾರ ವಾರ್ಷಿಕ ಅಂದಾಜು ₹1.50 ಕೋಟಿ ವ್ಯಯ ಮಾಡುತ್ತಿದ್ದರೂ ಹುಬ್ಬಳ್ಳಿ– ಧಾರವಾಡ ನಗರದಲ್ಲಿ ಭಿಕ್ಷಾಟನೆ ಪ್ರವೃತ್ತಿ ಮಾತ್ರ ಕಡಿಮೆಯಾಗುತ್ತಿಲ್ಲ!
ಇಲ್ಲಿನ ನಿರಾಶ್ರಿತರ ಪರಿಹಾರ ಕೇಂದ್ರವು ಧಾರವಾಡ ಸೇರಿದಂತೆ ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿಗೂ ಸೇರಿದೆ. ಕೇಂದ್ರದಲ್ಲಿ ಪ್ರಸ್ತುತ 143 ನಿರಾಶ್ರಿತರಿದ್ದಾರೆ. ಇವರಲ್ಲಿ ಧಾರವಾಡ, ಬೆಳಗಾವಿ, ಬೆಂಗಳೂರು, ಬಳ್ಳಾರಿ, ಮೈಸೂರು, ತುಮಕೂರು, ವಿಜಯಪುರ ಜಿಲ್ಲೆಗಳ ಹಾಗೂ ಹೊರ ರಾಜ್ಯದ ನಿರಾಶ್ರಿತರೂ ಸೇರಿದ್ದಾರೆ. ಬಹುತೇಕರು ಭಿಕ್ಷಾಟನೆಯಲ್ಲಿ ತೊಡಗಿದ್ದವರು ಹಾಗೂ ಅನಾಥರಿದ್ದಾರೆ.
ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಅನ್ವಯ ನಿರಾಶ್ರಿತರಿಗೆ ಊಟ, ಉಪಾಹಾರ, ಬಟ್ಟೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜತೆಗೆ ಅವರ ಬದುಕಿಗೆ ನೆರವಾಗುವಂತಹ ವೃತ್ತಿಪರ ಕ್ರಿಯಾತ್ಮಕ ಚಟುವಟಿಕೆ ತರಬೇತಿಯನ್ನೂ ನೀಡಲಾಗುತ್ತಿದೆ.
ನಿರಾಶ್ರಿತರನ್ನು ಪೋಷಿಸುವುದಕ್ಕಾಗಿಯೇ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದ್ದು, ಇದಕ್ಕಾಗಿಯೇ ಪ್ರತಿ ತಿಂಗಳು ಅಂದಾಜು ₹15 ಲಕ್ಷ ವ್ಯಯ ಮಾಡಲಾಗುತ್ತಿದೆ. ಆದರೂ ಭಿಕ್ಷಾಟನೆ ಮಾಡುವವರು ಮಾತ್ರ ಕಡಿಮೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ನಗರದಲ್ಲಿ ಇಂದಿಗೂ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ, ಮಾರ್ಕೆಟ್ ಪ್ರದೇಶ, ಪ್ರಮುಖ ಸಿಗ್ನಲ್‌ಗಳಲ್ಲಿ ಹಾಗೂ ದೇವಸ್ಥಾನಗಳ ಬಳಿ ಭಿಕ್ಷಕರು, ನಿರಾಶ್ರಿತರ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.
ಸಾಮಾಜಿಕ ಹೊಣೆಗಾರಿಕೆ ಅವಶ್ಯ: ‘ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಅನ್ವಯ ಭಿಕ್ಷಾಟನೆ ಮಾಡುವುದು ಹಾಗೂ ಭಿಕ್ಷೆ ಕೊಡುವುದು ಎರಡೂ ಅಪರಾಧ. ಆದರೆ, ಈ ಕಾಯ್ದೆಯನ್ನು ಯಾರೂ ಪಾಲನೆ ಮಾಡುತ್ತಿಲ್ಲ‘ ಎನ್ನುತ್ತಾರೆ ರಾಯಾಪೂರದ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕಿ ನಂದಾ ಎಂ.ಹುರುಳಿ.
‘ಭಿಕ್ಷಾಟನೆ ತಡೆಯುವುದು ಸರ್ಕಾರದ ಜವಾಬ್ದಾರಿ ಎಂದು ಸಾರ್ವಜನಿಕರು ನಮ್ಮ ಕಡೆ ಕೈತೋರಿಸುತ್ತಾರೆ. ಆದರೆ, ಜನರ ಸಹಕಾರವೂ ತುಂಬಾ ಮುಖ್ಯ. ಅವರದೂ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ಭಿಕ್ಷೆ ಬೇಡಲು ಬರುವವರಿಗೆ ತಿಳಿವಳಿಕೆ ಹೇಳಿ, ಅವರಿಗೆ ಹಣ ಕೊಡದೇ ಕಳುಹಿಸಬೇಕು. ಆಗ ಮಾತ್ರ ಈ ಪಿಡುಗನ್ನು ನಿಯಂತ್ರಿಸಲು ಸಾಧ್ಯ’ ಎನ್ನುತ್ತಾರೆ ಅವರು.
‘ಭಿಕ್ಷುಕರು, ನಿರಾಶ್ರಿತರ ಪತ್ತೆಗಾಗಿ ವಾರದಲ್ಲಿ ಎರಡು ದಿನ ಕಾಯಾಚರಣೆ ನಡೆಸಲಾಗುತ್ತದೆ. ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದರೆ ಅಂತಹ ಸ್ಥಳಗಳಿಗೂ ನಮ್ಮ ವಾರ್ಡರ್‌ಗಳು ಹೋಗಿ ಅವರನ್ನು ಕರೆತಂದು ನಮ್ಮ ಕೇಂದ್ರದಲ್ಲಿ ಇಟ್ಟುಕೊಂಡು ಊಟ, ಉಪಾಹಾರ, ಬಟ್ಟೆಯನ್ನು ನೀಡಿ ಭಿಕ್ಷಾಟನೆ ಮಾಡುವುದು ಅಪರಾಧ ಎಂದು ತಿಳಿವಳಿಕೆ ನೀಡುತ್ತೇವೆ. ನಿಗದಿ ಪಡಿಸಿದ ಅವಧಿಯ ನಂತರ ಅವರನ್ನು ಬಿಟ್ಟು ಕಳುಹಿಸುತ್ತೇವೆ. ಆದರೆ, ಅವರು ಮತ್ತೆ ಭಿಕ್ಷಾಟನೆಯ ಹಾದಿ ತುಳಿಯುತ್ತಾರೆ. ಇದಕ್ಕೆ ಜನರೇ ಕಡಿವಾಣ ಹಾಕಬೇಕು’ ಎನ್ನುತ್ತಾರೆ.
ಹು–ಧಾ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಇನ್ನೂ ₹3.50 ಕೋಟಿಗೂ ಹೆಚ್ಚು ಬೆಗ್ಗರ್ ಸೆಸ್ ಬಾಕಿ ಬರಬೇಕಿದೆನಂದಾ ಎಂ.ಹುರುಳಿ ಅಧೀಕ್ಷಕಿ ನಿರಾಶ್ರಿತರ ಪರಿಹಾರ ಕೇಂದ್ರ ರಾಯಾಪೂರ
ವೃತ್ತಿ ಕೌಶಲ ಚಟುವಟಿಕೆ
ತರಬೇತಿ ಕೇಂದ್ರದಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಪ್ರಸ್ತುತ 143 ನಿರಾಶ್ರಿತರಿದ್ದಾರೆ. ಎಲ್ಲರಿಗೂ ಉಚಿತವಾಗಿ ನಿತ್ಯ ಊಟ ಉಪಾಹಾರ ಬಟ್ಟೆ ಸೇರಿದಂತೆ ಅವರಿಗೆ ಬದುಕಿಗೆ ಅನುಕೂಲವಾಗುವಂತೆ ಕೇಂದ್ರದ ಆವರಣದಲ್ಲಿಯೇ ವೃತ್ತಿ ಕೌಶಲ ಚಟುವಟಿಕೆ ತರಬೇತಿ ನೀಡಲಾಗುತ್ತದೆ. ಪ್ರಮುಖವಾಗಿ ಕೈತೋಟದಲ್ಲಿ ತರಕಾರಿ ಬೆಳೆಯುವುದು ತೋಟದ ನಿರ್ವಹಣೆ ಕಸಬರಿಕೆ ಫೈಲ್ ಹಾಗೂ ಫಿನಾಯಿಲ್ ತಯಾರಿಕೆ ತರಬೇತಿ ನೀಡಲಾಗುತ್ತದೆ. ಈ ಎಲ್ಲಾ ಚಟುವಟಿಕೆ ಕೇಂದ್ರದ ನಿರ್ವಹಣೆ ಹಾಗೂ ಸಿಬ್ಬಂದಿ ವೇತನಕ್ಕಾಗಿ ವಾರ್ಷಿಕವಾಗಿ ಅಂದಾಜು ₹1.50 ಕೋಟಿ ವ್ಯಯವಾಗುತ್ತದೆ’ ಎನ್ನುತ್ತಾರೆ ನಂದಾ ಎಂ.ಹುರುಳಿ.
ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
ಜಿಲ್ಲೆಯಲ್ಲಿ ಭಿಕ್ಷಾಟನೆ ಮಾಡುವ ಹಾಗೂ ನಿರಾಶ್ರಿತ ವ್ಯಕ್ತಿಗಳು ಕಂಡು ಬಂದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: 9482 300 400 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿದರೆ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯುತ್ತಾರೆ.