
ಹುಬ್ಬಳ್ಳಿ: 'ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕಾಗಿಯೇ ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಅಗತ್ಯವಿಲ್ಲ. ಈಗಾಗಲೇ ಸಾಕಷ್ಟು ಕಾನೂನುಗಳಿದ್ದು, ಅವುಗಳಲ್ಲಿನ ಲೋಪ-ದೋಷಗಳನ್ನು ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗುವುದು' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ದೌರ್ಜನ್ಯಕ್ಕೆ ಒಳಗಾದ ಕುಟುಂಬ ಸದಸ್ಯರಿಗೆ ಸಾಂತ್ವನ ನೀಡಿ, ಮಾಧ್ಯಮದವರೊಂದಿಗೆ ಮಾತನಾಡಿ ಅವರು, 'ಈ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಲಯ ರಚನೆ ಮಾಡಲಾಗುವುದು' ಎಂದರು.
'ಆಧುನಿಕ ದಿನಗಳಲ್ಲೂ ಇಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸೂಕ್ತ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇನೆ' ಎಂದರು.
'ಗ್ರಾಮದಲ್ಲಿ ನಡೆದ ಘಟನೆಯಿಂದ ಕುಟುಂಬದವರೆಲ್ಲ ಭಯ ಭೀತರಾಗಿದ್ದು, ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳಲ್ಲಿ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ, ಸರ್ಕಾರಿ ಉದ್ಯೋಗ ಹಾಗೂ ಆರ್ಥಿಕ ಪರಿಹಾರ ಮುಖ್ಯವಾಗಿದ್ದು, ಪರಿಶೀಲನೆ ನಡೆಸಲಾಗುವುದು. ಪ್ರಾಥಮಿಕವಾಗಿ ನೀಡಬೇಕಾದ ಪರಿಹಾರವನ್ನು ಈಗಾಗಲೇ ಜಿಲ್ಲಾಡಳಿತ ನೀಡಿದೆ' ಎಂದು ಹೇಳಿದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್ಪಿ ಗುಂಜನ್ ಆರ್ಯ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.