ADVERTISEMENT

ಆದರ್ಶ ದಂಪತಿ ಹಾರ್ನ್‌ಬಿಲ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:00 IST
Last Updated 16 ಆಗಸ್ಟ್ 2019, 20:00 IST
ಹಾರ್ನ್‌ಬಿಲ್‌
ಹಾರ್ನ್‌ಬಿಲ್‌   

ಹಾರ್ನ್‌ಬಿಲ್‌ ಗೊತ್ತಲ್ಲ; ಮಂಗಟ್ಟೆ ಪಕ್ಷಿಗಳು. ಮೂಗಿಗಿಂತ ಮೂಗುತಿ ಭಾರ ಎಂಬಂತೆ, ಮುಖದಲ್ಲಿ ಅವುಗಳ ಕೊಕ್ಕೇ ದೊಡ್ಡದೆನಿಸುವಷ್ಟು ಭಾಸವಾಗುವ ಶಕ್ತಿಯುತವಾದ ಮತ್ತು ಅಷ್ಟೇ ಆಕರ್ಷಕವಾದ ಪಕ್ಷಿಗಳು. ಇವುಗಳ ತಲೆಯ ಮೇಲೆ ಶಿಖೆ ಇರುವುದರಿಂದ ಇವುಗಳನ್ನು ಹಾರ್ನ್‌ಬಿಲ್‌ ಪಕ್ಷಿಗಳೆಂದು ಕರೆಯುತ್ತಾರೆ. ಈ ಹಾರ್ನ್‌ಬಿಲ್‌‌ ಸಂಗಾತಿ ಆದರ್ಶ ದಂಪತಿಯೆಂಬ ಅನ್ವರ್ಥನಾಮವನ್ನು ಹೊಂದಿರುವುದರ ಹಿಂದೆ ಕುತೂಹಲಕಾರಿ ಸಂಗತಿಗಳಿವೆ.

ಒಂದು ಸಲ ಗಂಡು ಹಾರ್ನ್‌ಬಿಲ್‌‌ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ಅದನ್ನು ಜೀವನ ಪೂರ್ತಿ ಕೈ ಬಿಡುವುದಿಲ್ಲ. ಕೊನೆಯ ಉಸಿರು ಇರುವವರೆಗೂ ಜೊತೆಗೂಡಿಯೇ ಇರುತ್ತವೆ. ಇವುಗಳ ಗಾತ್ರ 45 ಸೆಂ.ಮೀ.ನಿಂದ 105 ಸೆಂ.ಮೀ.ನಷ್ಟು. ಗಂಡು ಹಾರ್ನ್‌ಬಿಲ್‌ ಮೊದಲ ಪ್ರಣಯಕ್ರಿಯೆಯಲ್ಲಿ ಹೆಣ್ಣು ಹಾರ್ನ್‌ಬಿಲ್‌‌ಗೆ ಹಣ್ಣುಗಳನ್ನು ತಂದುಕೊಡುತ್ತವೆ. ಹೀಗೆ ತಿಂದ ಹಣ್ಣುಗಳ ಬೀಜಗಳನ್ನು ದಿನಕ್ಕೆ 10 ಕಿಲೋ ಮೀಟರನಷ್ಟು ದೂರದ ಕಾಡಿನಲ್ಲಿ ಪಯಣ ಮಾಡಿ ಚದರಿಸುತ್ತವೆ. ಹೀಗೆ ಬೀಜಗಳನ್ನು ಚದರಿಸುವುದರಿಂದ ಒಂದು ಸ್ಥಳದಲ್ಲಿ ಹುಟ್ಟಿದ ಹಣ್ಣಿನ ಮರ ಇನ್ನೊಂದು ಸ್ಥಳದಲ್ಲಿ ಹುಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಹಾರ್ನ್‌ಬಿಲ್‌ ಪಕ್ಷಿಗಳನ್ನು ಕಾಡಿನ ರೈತ ಎಂದು ಕರೆಯುತ್ತಾರೆ. ಅಷ್ಟಕ್ಕು ಗಂಡು ಹಾರ್ನ್‌ಬಿಲ್‌‌ಗೆ ಹೆಣ್ಣು ಹಾರ್ನ್‌ಬಿಲ್‌‌ನ್ನು ತನ್ನ ಸಂಗಾತಿಗಾಗಿ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಬಹು ದಿನಗಳೇ ಬೇಕಾಗುತ್ತದೆ.

ವರ್ಷದಲ್ಲಿ ಒಂದು ಸಾರಿಯಾದರೂ ಎಲ್ಲ ಹಾರ್ನ್‌ಬಿಲ್‌ ಪಕ್ಷಿಗಳು ಸೇರುತ್ತವೆ. ಏಕೆಂದರೆ ಗಂಡು ಹಾರ್ನ್‌ಬಿಲ್‌‌ಗೆ ತಮಗೆ ಇಷ್ಟವಾದ ಹೆಣ್ಣು ಹಾರ್ನ್‌ಬಿಲ್‌ ಜೊತೆ ಸ್ನೇಹ ಮಾಡಿ ಪ್ರೀತಿಸಿ ತಮ್ಮ ಬಲೆಯಲ್ಲಿ ಬೀಳಿಸಿಕೊಳ್ಳಲು ಸಮಯಬೇಕಾಗಲಿದೆ. ಆದರೆ ಗಂಡು ಹಾರ್ನ್‌ಬಿಲ್‌ ಹೆಣ್ಣು ಹಾರ್ನ್‌ಬಿಲ್‌‌ನ್ನು ಸಂಗಾತಿಯಾಗಿ ಮಾಡಿಕೊಳ್ಳಲು ಪ್ರತಿ ದಿನ ಅದನ್ನು ಭೇಟಿಯಾಗಿ ತನ್ನ ದೊಡ್ಡ ಕೊಕ್ಕೆಯಿಂದ ತಿವಿಯುತ್ತ, ಸ್ಪರ್ಶಿಸುತ್ತಾ, ಆಟವಾಡುತ್ತಾ ಮತ್ತು ಮುತ್ತುಗಳನ್ನು ನೀಡುತ್ತಾ ಪ್ರೀತಿಯಿಂದ ನೋಡಿಕೊಳ್ಳುತ್ತದೆ. ಇವುಗಳ ಪ್ರಣಯಕ್ರಿಯೆ ಜನವರಿ ಅಥವಾ ಫೆಬ್ರುವರಿ ತಿಂಗಳಿನಲ್ಲಿ ಶುರುವಾಗುತ್ತದೆ. ವರ್ಷದಲ್ಲಿ ಕೇವಲ ಒಂದು ಅಥವಾ ಎರಡು ಮರಿಗಳಿಗೆ ಮಾತ್ರ ಹೆಣ್ಣು ಹಾರ್ನ್‌ಬಿಲ್‌ ಜನ್ಮ ಕೊಡುತ್ತದೆ.

ADVERTISEMENT

ಹೆಣ್ಣು ಹಾರ್ನ್‌ಬಿಲ್‌‌ ಗಂಡು ಹಾರ್ನ್‌ಬಿಲ್‌‌ನ ಪ್ರೀತಿಯನ್ನು ಒಪ್ಪಿಕೊಂಡು ಪ್ರೀತಿ ಮಾಡಲೂ ಶುರು ಮಾಡುತ್ತದೆ. ಹೀಗೆ ಪ್ರೀತಿ-ಪ್ರೇಮ ಶುರುವಾದಾಗ ಗಂಡು ಹಾರ್ನ್‌ಬಿಲ್‌‌ಗಳು ಹೆಣ್ಣು ಹಾರ್ನ್‌ಬಿಲ್‌‌ಗೆ ತಿನ್ನಲು ತರಹ ತರಹದ ಹಣ್ಣುಗಳನ್ನು ತಂದು ಕೊಡುತ್ತದೆ. ಒಂದೇ ಬಾರಿಗೆ 15–20ರವರೆಗೆ ಹಣ್ಣುಗಳನ್ನು ತಮ್ಮ ಬಾಯಿಯಲ್ಲಿ ಇಟ್ಟುಕೊಂಡು ಬಂದು ಒಂದೊಂದಾಗಿ ಹೆಣ್ಣು ಹಾರ್ನ್‌ಬಿಲ್‌‌ಗೆ ತಿನಿಸುತ್ತವೆ. ಹೀಗೆ ಐದು ದಿನಗಳವರೆಗೆ ಪ್ರಣಯಕ್ರಿಯೆ ಮುಂದುವರೆದ ಮೇಲೆ ಅವುಗಳ ದಾಂಪತ್ಯ ಜೀವನ ಶುರುವಾಗುತ್ತದೆ.

ಇವು ತಮ್ಮ ಗೂಡುಗಳನ್ನು ತಾವೇ ಕಟ್ಟುವುದಿಲ್ಲ. ಗಂಡು–ಹೆಣ್ಣು ಜೊತೆಗೂಡಿ ಅತಿ ಎತ್ತರದ ಮರಗಳಲ್ಲಿ ಪೊದೆಗಳನ್ನು ಆಯ್ಕೆಮಾಡುತ್ತವೆ. ಆಮೇಲೆ ಹೆಣ್ಣು ಹಾರ್ನ್‌ಬಿಲ್‌ ಪೊದೆಯೊಳಗೆ ಹೋಗಿ ಗೂಡನ್ನು ಸ್ವಚ್ಛಮಾಡಿಕೊಂಡು ಅಲಂಕಾರ ಮಾಡುತ್ತದೆ. ಆನಂತರ ಇವುಗಳ ಪ್ರಣಯಕ್ರಿಯೆ ಮುಂದುವರೆಯುತ್ತದೆ. ಹೆಣ್ಣು ಹಾರ್ನ್‌ಬಿಲ್‌ ಒಂದು ಸಣ್ಣ ರಂಧ್ರವನ್ನು ಆಹಾರ ತೆಗೆದುಕೊಳ್ಳಲು ಬಿಟ್ಟು ತನ್ನ ಮಲದಿಂದ ಅಥವಾ ತಾನು ಕಕ್ಕಿದ ಆಹಾರದಿಂದ ಗೂಡನ್ನು ಮುಚ್ಚಿಕೊಳ್ಳುತ್ತದೆ. ಬೇರೆ ಪ್ರಾಣಿಗಳು ಬಂದು ತಾನು ಹಾಕಿದ ಮೊಟ್ಟೆಯನ್ನು ತಿನ್ನಲುಬಾರದೆಂದು ಅವು ಈ ರೀತಿ ಮಾಡಲಿದೆ. ತನ್ನ ಮೊಟ್ಟೆಗಳಿಗೆ ಕಾವುಕೊಡಲು ಹೆಣ್ಣು ಹಾರ್ನ್‌ಬಿಲ್‌ 35 ದಿನಗಳನ್ನು ತೆಗೆದುಕೊಳ್ಳುತ್ತದೆ. ಮರಿಗಳಿಗೆ ಜನ್ಮಕೊಟ್ಟ ಕೂಡಲೇ ಶೆಲ್‌ಗಳನ್ನು ಆರಿಸಿ ಗಂಡು ಹಾರ್ನ್‌ಬಿಲ್‌‌ಗೆ ಹೊರಹಾಕಲು ಕೊಡುತ್ತದೆ. ಏಕೆಂದರೆ ಆ ಒಡೆದ ಮೊಟ್ಟೆಯ ವಾಸನೆಯನ್ನು ಹುಡುಕಿಕೊಂಡು ಬಂದು ಬೇರೆ ಪ್ರಾಣಿಗಳು ತಮ್ಮ ಮರಿಗಳಿಗೆ ತೊಂದರೆ ಕೊಡಬಾರದೆಂದು. ಈ ಸಮಯದಲ್ಲಿ ಗಂಡು ಹಾರ್ನ್‌ಬಿಲ್‌ ತನ್ನ ಸಂಗಾತಿ ಇರುವ ಗೂಡಿನ ಕಡೆಯೇ ಇದ್ದು ಹಗಲು, ರಾತ್ರಿ ಮಳೆ, ಚಳಿ ಮತ್ತು ಬಿಸಿಲೆನ್ನದೆ ತನ್ನ ಹೆಂಡತಿಗೆ ಮತ್ತು ಮರಿಗಳಿಗೆ ಆಹಾರವನ್ನು ತೆಗೆದುಕೊಂಡು ಬಂದು ತಿನಿಸುತ್ತ ಅವುಗಳು ಹಸಿವಿನಿಂದ ಬಳಲುವುದನ್ನು ತಪ್ಪಿಸಿ ಕಾಪಾಡುತ್ತದೆ. ತನ್ನ ಮಕ್ಕಳು ಸದೃಢವಾಗಿ ಬೆಳೆಯಬೇಕೆಂದು ತರಹ ತರಹದ ಹಣ್ಣುಗಳನ್ನು ಮತ್ತು ಸರೀಸೃಪಗಳನ್ನು, ಕೀಟಗಳನ್ನು ತಂದು ತಿನಿಸುತ್ತಿದೆ.

ಹಾರ್ನ್‌ಬಿಲ್‌ ಮರಿಗಳು ದೊಡ್ಡವಾಗಬೇಕೆಂದರೆ ಮೂರು ತಿಂಗಳುಗಳೇ ಬೇಕಾಗುತ್ತದೆ. ಮರಿಗಳು ದೊಡ್ಡವಾಗುವವರೆಗೂ ಹೆಣ್ಣು ಹಾರ್ನ್‌ಬಿಲ್‌ ಮೂರು ತಿಂಗಳವರೆಗೆ ಗೂಡಿನಲ್ಲಿಯೇ ಇರುತ್ತದೆ. ದಿನವು ಗಂಡು ಹಾರ್ನ್‌ಬಿಲ್‌ ತನ್ನ ಮರಿಗಳು ಸದೃಢವಾಗಿ ಬೆಳೆಯುವುದನ್ನು ಕಂಡು ಸಂತೋಷಪಡುತ್ತಿರುತ್ತದೆ. ಯಾವಾಗ ಮರಿಗಳಿಗೆ ಗರಿಗಳು ಬರಲು ಶುರುವಾಗುತ್ತವೆಯೋ ಮತ್ತು ಅವುಗಳು ಶಾಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತವೆಯೋ ಆಗ ಹೆಣ್ಣು ಹಾರ್ನ್‌ಬಿಲ್‌ ಗೂಡನ್ನು ಒಡೆದು ಹೊರ ಬರುತ್ತದೆ. ಸಾಮಾನ್ಯವಾಗಿ ಜುಲೈ ತಿಂಗಳ ಕೊನೆಯ ವಾರದಲ್ಲಿ ಹೊರಬರುತ್ತವೆ. ಆಮೇಲೆ ಗಂಡು ಹಾರ್ನ್‌ಬಿಲ್‌ ಮತ್ತು ಹೆಣ್ಣು ಹಾರ್ನ್‌ಬಿಲ್‌ ಎರಡು ಸೇರಿ ಹೀಗೆ ಆರು ತಿಂಗಳವರೆಗೆ ತಮ್ಮ ಮರಿಗಳನ್ನು ಪೋಷಿಸುತ್ತವೆ. ಆಮೇಲೆ ಸ್ವಲ್ಪ ದಿನಗಳ ನಂತರ ಮರಿಗಳು ಹೊರಬರುತ್ತವೆ. ಮರಿಗಳು ಆಹಾರವನ್ನು ಹುಡುಕಲು ಹೋಗುತ್ತಾ ಹಾರಾಡುವುದನ್ನು ಕಲಿಯುತ್ತವೆ.

ಗಂಡು ಹಾರ್ನ್‌ಬಿಲ್‌ ತನ್ನ ಹೆಂಡತಿ ಮತ್ತು ಮರಿಗಳಿಗೆ ಆಹಾರವನ್ನು ಹುಡುಕಿಕೊಂಡು ಬರುವಾಗ ಜನರು ಬೇಟೆಯಾಡಿ ಸಾಯಿಸಿದರೆ ಅದರ ಪೂರ್ತಿ ಕುಟುಂಬವೇ ಸರ್ವನಾಶವಾಗಲಿದೆ. ಸಂಗಾತಿ ಆಹಾರ ತೆಗೆದುಕೊಂಡು ಬರಲಿದೆ ಎಂದು ಹೆಣ್ಣು ಹಾರ್ನ್‌ಬಿಲ್‌ ಕಾಯ್ದು ಕುಳಿತಿರುತ್ತದೆ. ದಿನಗಳು, ವಾರಗಳು, ತಿಂಗಳು ಕಳೆಯುತ್ತದೆ. ಆಮೇಲೆ ಹೆಣ್ಣು ಹಾರ್ನ್‌ಬಿಲ್‌‌ ಹಾಗೂ ಅವುಗಳ ಮರಿಗಳು ಹಸಿವೆಯಿಂದ ಸಾಯುತ್ತವೆ. ಗಂಡು ಹಾರ್ನ್‌ಬಿಲ್‌ ಸಹ ತನ್ನ ಹೆಂಡತಿಯ ಸಲುವಾಗಿ ಮತ್ತು ಮಕ್ಕಳ ಸಲುವಾಗಿ ಎಂತಹ ತ್ಯಾಗಕ್ಕೂ ಸಿದ್ಧವಿರುತ್ತವೆ. ಇವುಗಳ ಬಗ್ಗೆ ದಾಂಡೇಲಿ ಅರಣ್ಯ ಪ್ರದೇಶಗಳಲ್ಲಿ ವಿಜ್ಞಾನಿಗಳು ಸಂಶೋಧನೆ ಮಾಡಿ ನೋಡಿದಾಗ ಇವುಗಳ ಅವಶೇಷಗಳು ಮರದ ಪೊಟರೆಗಳಲ್ಲಿ ಕಾಣಸಿಗುತ್ತವೆ. ಹಾಗಾಗಿ ಇವುಗಳನ್ನು ಸಂರಕ್ಷಣೆ ಮಾಡಲೇಂದು ಪ್ರತಿ ವರ್ಷ ದಾಂಡೇಲಿಯಲ್ಲಿ ಹಾರ್ನ್‌ಬಿಲ್‌ ಹಬ್ಬ ಆಚರಿಸುತ್ತಾರೆ. ಆದರ್ಶ ದಂಪತಿಯಾಗಿ, ತ್ಯಾಗಿಗಳೆನಿಸಿರುವ ಹಾರ್ನ್‌ಬಿಲ್‌ ಪಕ್ಷಿಗಳನ್ನು ಸಂರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕು.

ನವೀನ ಪ್ಯಾಟಿಮನಿ, ಸಹಾಯಕ ಉಪನ್ಯಾಸಕ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.