ADVERTISEMENT

ತಗ್ಗದ ಕೊರೊನಾ ಭೀತಿ: ಹೋಟೆಲ್‌ ಮಾಲೀಕರಿಗೆ ಮತ್ತಷ್ಟು ಹೊರೆ

ಪ್ಲಾಸ್ಟಿಕ್– ಪೇಪರ್ ತಟ್ಟೆ, ಲೋಟ, ಬಾಳೆ ಎಲೆ ಬಳಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 2:48 IST
Last Updated 12 ಸೆಪ್ಟೆಂಬರ್ 2020, 2:48 IST
ಹುಬ್ಬಳ್ಳಿಯ ಚನ್ನಮ್ಮನ ವೃತ್ತದಲ್ಲಿರುವ ಕಾಮತ್ ಹೋಟೆಲ್‌ನಲ್ಲಿ ಬಾಳೆಎಲೆಯಲ್ಲಿ ಉಪಾಹಾರ ಸವಿದ ಗ್ರಾಹಕರು ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಚನ್ನಮ್ಮನ ವೃತ್ತದಲ್ಲಿರುವ ಕಾಮತ್ ಹೋಟೆಲ್‌ನಲ್ಲಿ ಬಾಳೆಎಲೆಯಲ್ಲಿ ಉಪಾಹಾರ ಸವಿದ ಗ್ರಾಹಕರು ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ಕೊರೊನಾ ಭೀತಿಯಿಂದ ತತ್ತರಿಸಿದ್ದ ಹೋಟೆಲ್‌ ಉದ್ಯಮ, ಲಾಕ್‌ಡೌನ್ ಬಳಿಕ ಆರಂಭಗೊಂಡರೂ ಸಂಕಷ್ಟದಿಂದ ಹೊರಬಂದಿಲ್ಲ. ಮುಂಚಿನಂತೆ ಗ್ರಾಹಕರ ಹರಿವು ಇಲ್ಲ. ಸಿಬ್ಬಂದಿ ವೇತನ, ನಿರ್ವಹಣೆ ಖರ್ಚು ಎಂದೆಲ್ಲ ಮಾಲೀಕರಿಗೆ ಮಾತ್ರ ಆರ್ಥಿಕ ಹೊರೆ ಹೆಚ್ಚಾಗಿದೆ.

ಸದ್ಯ ಬಹುತೇಕ ಹೋಟೆಲ್‌ನವರು ಒಮ್ಮೆ ಬಳಸಿ ಎಸೆಯಬಹುದಾದ ಪ್ಲಾಸ್ಟಿಕ್ ಮತ್ತು ಪೇಪರ್‌ನ ತಟ್ಟೆ, ಲೋಟ, ಚಮಚ ಹಾಗೂ ಬಾಳೆ ಎಲೆಗಳ ಮೊರೆ ಹೋಗಿದ್ದಾರೆ. ಇದರಿಂದಾಗಿ, ಗ್ರಾಹಕರಿಗೆ ಒದಗಿಸುವ ಸೇವೆ ಮತ್ತು ಹೋಟೆಲ್‌ ನಿರ್ವಹಣಾ ವೆಚ್ಚ ಏರಿಕೆಯಾಗಿದೆ.

‘ಹೋಟೆಲ್‌ಗೆ ಬರುವವರು ಸೇವೆಯ ಮಾದರಿ ಮತ್ತು ಸುರಕ್ಷತಾ ಕ್ರಮಗಳನ್ನು ಗಮನಿಸುತ್ತಾರೆ. ಹಾಗಾಗಿ, ಪೇಪರ್ ತಟ್ಟೆ ಮತ್ತು ಲೋಟಗಳ ಬಳಕೆಗೆ ಹೆಚ್ಚು ಒತ್ತು ನೀಡಿದ್ದೇವೆ’ ಎಂದು ಸಿದ್ಧಪ್ಪ ಕಂಬಳಿ ರಸ್ತೆಯಲ್ಲಿರುವ ನ್ಯೂ ಅಯೋಧ್ಯ ದರ್ಶಿನಿ ಹೋಟೆಲ್‌ನ ಶ್ರೀಕಾಂತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಬಹುತೇಕ ಸಣ್ಣ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ ಇತರ ಪಾನೀಯಗಳನ್ನು ಪೇಪರ್‌ ಲೋಟಗಳಲ್ಲೇ ನೀಡಲಾ
ಗುತ್ತಿದೆ. ಇದರಿಂದ ಮಾಲೀಕರಿಗೆ ನಷ್ಟವಾದರೂ, ಗ್ರಾಹಕರ ದೃಷ್ಟಿಯಿಂದ ಇದು ಅನಿವಾರ್ಯ’ ಎಂದು ದೇಶಪಾಂಡೆ ನಗರದಲ್ಲಿ ಟೀ ಅಂಗಡಿಯ ರಾಘವೇಂದ್ರ ಭಟ್ ಅಭಿಪ್ರಾಯಪಟ್ಟರು.

ನಿರ್ವಹಣಾ ವೆಚ್ಚ ಹೆಚ್ಚಳ:‘ಆಹಾರ ಸೇವೆಗೆ ಒಮ್ಮೆ ಬಳಸಬಹುದಾದ ಸಾಮಗ್ರಿಗಳ ಖರೀದಿ ಹೊರೆಯ ಜತೆಗೆ, ಮಾಲೀಕರಿಗೆ ಹೋಟೆಲ್ ನಿರ್ವಹಣಾ ವೆಚ್ಚವು ಹೆಚ್ಚಾಗಿದೆ’ ಎಂದು ಚನ್ನಮ್ಮನ ವೃತ್ತದಲ್ಲಿರುವ ಕಾಮತ್ ಹೋಟೆಲ್‌ನ ಮಾಧುರಿ ಕಾಮತ್ ಹೇಳಿದರು.

‘ಹೋಟೆಲ್‌ಗೆ ಬರುವ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್‌ ತಪಾಸಣೆ, ಕೈಗಳಿಗೆ ಉಚಿತವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಸಿಬ್ಬಂದಿಗೆ ಮಾಸ್ಕ್‌ ನೀಡುವ ಜತೆಗೆ, ಹೋಟೆಲ್ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದರು.

ಕೆಲವೆಡೆ ದರ ಹೆಚ್ಚಳ:ಹೋಟೆಲ್ ನಿರ್ವಹಣೆ ವೆಚ್ಚ ಹೆಚ್ಚಿದ ಬೆನ್ನಲ್ಲೇ, ಕೆಲ ಮಾಲೀಕರು ಊಟ ಮತ್ತು ಉಪಾಹಾರಗಳ ದರವನ್ನು ಏರಿಕೆ ಮಾಡಿದ್ದಾರೆ. ರಸ್ತೆ ಬದಿಯ ಹೋಟೆಲ್‌ಗಳಲ್ಲೂ ದರ ಹೆಚ್ಚಳವಾಗಿದೆ.

‘ಕೊರೊನಾದಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಹಿಂದಿಗಿಂತಲೂ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಅನಿವಾರ್ಯವಾಗಿ ಆಹಾರದ ದರವನ್ನು ಮೂರ್ನಾಲ್ಕು ರೂಪಾಯಿಗೆ ಹೆಚ್ಚಿಸಿ, ಖರ್ಚನ್ನು ಸರಿದೂಗಿಸಬೇಕಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಹೋಟೆಲ್ ಮಾಲೀಕರೊಬ್ಬರು ಹೇಳಿದರು.

‘ತ್ಯಾಜ್ಯದ ಪ್ರಮಾಣವೂ ಹೆಚ್ಚಳ’:‘ಕೊರೊನಾ ಕಾರಣದಿಂದಾಗಿಅವಳಿನಗರದ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಮತ್ತು ಪೇಪರ್ ತಟ್ಟೆ–ಲೋಟ ಹಾಗೂ ಬಾಳೆ ಎಲೆ ಬಳಕೆ ಹೆಚ್ಚಾಗಿದೆ. ಹಾಗಾಗಿ, ತ್ಯಾಜ್ಯದ ಪ್ರಮಾಣವೂ ಏರಿಕೆಯಾಗಿದೆ’ ಎಂದು ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ವಿಜಯಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.