
ಹುಬ್ಬಳ್ಳಿ: ‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ 42,345 ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಜ.24ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದ ಮಂಟೂರ ರಸ್ತೆಯ ಹೊಸಯಲ್ಲಾಪುರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ನಿರ್ಮಾಣವಾಗಿರುವ ಮನೆಗಳನ್ನು ಶನಿವಾರ ಪರಿಶೀಲಿಸಿದರು. ಇದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.
‘ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ಜಿಲ್ಲೆಗಳಿಂದ ಜನರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
‘ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ 1,80,253 ಮನೆಗಳನ್ನು ಮಂಜೂರು ಮಾಡಿದ್ದರು. ಒಂದು ಮನೆ ಕಟ್ಟಲು ₹7 ಲಕ್ಷ ಖರ್ಚಾಗುತ್ತದೆ. ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರ ಆವಾಸ್ ಯೋಜನೆ ಅಡಿ ₹1.50 ಲಕ್ಷ ಸಬ್ಸಿಡಿ ನೀಡುತ್ತಾರೆ. ಆದರೆ, ಅದರ ಮೇಲೂ ಶೇ 18 ರಷ್ಟು ಜಿಎಸ್‌ಟಿ ಹಾಕಿದ್ದಾರೆ’ ಎಂದರು.
‘ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಹಾಯಧನ ಹೊರತುಪಡಿಸಿ ಫಲಾನುಭವಿಗಳು ₹4.50 ಲಕ್ಷ ಭರಿಸಬೇಕು. ಆದರೆ, ಫಲಾನುಭವುಗಳಿಂದ ₹1 ಲಕ್ಷ ಮಾತ್ರ ಪಡೆದು, ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸಿ ಮನೆಗಳನ್ನು ನಿರ್ಮಿಸಿದೆ’ ಎಂದು ಹೇಳಿದರು.
‘2024ರಲ್ಲಿ ಮೊದಲ ಹಂತದಲ್ಲಿ 36,779 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮೂರನೇ ಹಂತದಲ್ಲಿ 30 ಸಾವಿರ ಮನೆಗಳನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು. ಅಲ್ಲದೆ, ರಾಜೀವ್ ಗಾಂಧಿ ಆಶ್ರಯ ಯೋಜನೆ ಅಡಿ 47,860 ಮನೆಗಳನ್ನು ಶೀಘ್ರ ಹಂಚಿಕೆ ಮಾಡಲಾಗುವುದು’ ಎಂದರು.
‘ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ 1,300 ಮನೆಗಳ ಪೈಕಿ 1008 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಯಾದಗಿರಿ, ತುಮಕೂರು, ಬೀದರ್, ಬಳ್ಳಾರಿ, ಚಿತ್ರದುರ್ಗ ಸೇರಿ ವಿವಿಧೆಡೆ ನಿರ್ಮಿಸಿರುವ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ಕೊಡುವುದು ಬಾಕಿ ಇದೆ. ಜ. 24ರ ಕಾರ್ಯಕ್ರಮದಲ್ಲಿ ರಾಯಚೂರು, ಧಾರವಾಡ, ಗದಗ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ 20,345 ನಿವಾಸಿಗಳಿಗೆ ಹಕ್ಕಪತ್ರ ನೀಡಲಾಗುವುದು. ಹಕ್ಕುಪತ್ರ ವಿತರಣೆಗೆ ಪ್ರತ್ಯೇಕ ಕೌಂಟರ್ ಮಾಡಲಾಗಿದೆ’ ಎಂದರು.
ಪತ್ರಕರ್ತರು ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಎಲ್ಲ ಜಿಲ್ಲೆಯಲ್ಲೂ ಕಡಿಮೆ ದರದಲ್ಲಿ ನಿವೇಶನ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿದ ನಂತರ ಮನೆಗಳ ಹಂಚಿಕೆ ಮಾಡಬೇಕು ಎಂಬ ಉದ್ದೇಶ ಇತ್ತು. ಹೀಗಾಗಿ ಮನೆಗಳ ಹಂಚಿಕೆ ವಿಳಂಬವಾಗಿದೆ. ಇಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಆಸ್ಪತ್ರೆ, ಗ್ರಂಥಾಲಯ, ಸಮುದಾಯನ ಭವನ ಸೇರಿ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಅಬ್ದುಲ್ ಜಬ್ಬಾರ್, ಮಾಜಿ ಸಂಸದ ಐ.ಜಿ.ಸನದಿ, ಸದಾನಂದ ಡಂಗನವರ, ಅನ್ವರ ಬಾಷಾ, ದೀಪಕ್ ಚಿಂಚೋರೆ, ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ್, ಮೋಹನ್ ಲಿಂಬಿಕಾಯಿ ಇದ್ದರು.
‘ರಾಜಕೀಯ ನಿವೃತ್ತಿ ಪಡೆಯುವೆ; ಸವಾಲು’
‘ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ (2019ರಿಂದ 2023) ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಒಂದೇ ಒಂದು ಮನೆ ನಿರ್ಮಿಸಿ ಕೊಟ್ಟಿರುವುದನ್ನು ಸಾಬೀತುಪಡಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು. ‘ನಮ್ಮ ಸರ್ಕಾರ ಯಾವ ಜಿಲ್ಲೆಗಳಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಿದೆ ಎಂಬುದನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಹೋಗಿ ಪರಿಶೀಲಿಸಲಿ’ ಎಂದರು. ‘ನಮಗೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಒತ್ತಡವಿದೆ. ಆದರೆ ಬಿಜೆಪಿ ಸರ್ಕಾರ ಇದ್ದಾಗ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರಲಿಲ್ಲ. ಆದರೂ ಮನೆಗಳನ್ನು ನಿರ್ಮಿಸಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.