ADVERTISEMENT

ಹುಬ್ಬಳ್ಳಿ: ನ. 29ರಂದು 42,346 ಮನೆಗಳ ಹಂಚಿಕೆ

ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ: ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 4:33 IST
Last Updated 13 ಅಕ್ಟೋಬರ್ 2025, 4:33 IST
ಹುಬ್ಬಳ್ಳಿಯ ಮಂಟೂರು ರಸ್ತೆ ಬಳಿ ಸ್ಲಂ ಬೋರ್ಡ್‌ ನಿರ್ಮಿಸಿರುವ ಮನೆಗಳ ಹಂಚಿಕೆ ಹಿನ್ನೆಲೆ ಕಾರ್ಯಕ್ರಮದ ಸ್ಥಳವನ್ನು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಭಾನುವಾರ ಪರಿಶೀಲಿಸಿದರು. ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ಪಾಲಿಕೆ ಸದಸ್ಯ ಮೋಹನ್, ಸ್ಲಂ ಬೋರ್ಡ್ ಆಯುಕ್ತ ಅಶೋಕ, ಇಂಜಿನಿಯರ್ ಸುಧೀರ್ ಉಪಸ್ಥಿತರಿದ್ದರು
ಹುಬ್ಬಳ್ಳಿಯ ಮಂಟೂರು ರಸ್ತೆ ಬಳಿ ಸ್ಲಂ ಬೋರ್ಡ್‌ ನಿರ್ಮಿಸಿರುವ ಮನೆಗಳ ಹಂಚಿಕೆ ಹಿನ್ನೆಲೆ ಕಾರ್ಯಕ್ರಮದ ಸ್ಥಳವನ್ನು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಭಾನುವಾರ ಪರಿಶೀಲಿಸಿದರು. ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ಪಾಲಿಕೆ ಸದಸ್ಯ ಮೋಹನ್, ಸ್ಲಂ ಬೋರ್ಡ್ ಆಯುಕ್ತ ಅಶೋಕ, ಇಂಜಿನಿಯರ್ ಸುಧೀರ್ ಉಪಸ್ಥಿತರಿದ್ದರು   

ಹುಬ್ಬಳ್ಳಿ: ‘ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ(ಸ್ಲಂ ಬೋರ್ಡ್‌)ಯಿಂದ ನಿರ್ಮಿಸಿರುವ 42,346 ಮನೆಗಳನ್ನು ನ.29ರಂದು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಹಂಚಿಕೆ ಮಾಡಲಾಗುವುದು’ ಎಂದು ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್ ಹೇಳಿದರು.

ನಗರದ ಹೊರಭಾಗದ ಮಂಟೂರು ರಸ್ತೆ ಬಳಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ನಿರ್ಮಾಣ ಹಂತದ ಮನೆಗಳು ಹಾಗೂ ಕಾರ್ಯಕ್ರಮ ಆಯೋಜಿಸುವ ಸ್ಥಳ ಭಾನುವಾರ ಪರಿಶೀಲಿಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮನೆಗಳ ಹಂಚಿಕೆ ಕಾರ್ಯಕ್ರಮ ಆಯೋಜನೆಗೆ 18 ಎಕರೆಯಷ್ಟು ವಿಶಾಲವಾದ ಜಾಗ ಗುರುತಿಸಿದ್ದು, ಸುಮಾರು 2 ಲಕ್ಷ ಆಸನಗಳ ವ್ಯವಸ್ಥೆ ಮಾಡಲು ಅನುಕೂಲವಾಗಿದೆ’ ಎಂದರು.

ADVERTISEMENT

‘2013ರಿಂದ 18ರವರೆಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಲಂ ಬೋರ್ಡ್‌ನಿಂದ 1,80,253 ಮನೆಗಳು ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಯಡಿ 47,863 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಒಟ್ಟು 2 ಲಕ್ಷ 33 ಸಾವಿರ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಬಿಜೆಪಿ, ಜೆಡಿಎಸ್‌ ನೇತೃತ್ವದ ಸರ್ಕಾರ ಒಂದೇ ಒಂದು ಮನೆ ನಿರ್ಮಾಣ ಮಾಡಲಿಲ್ಲ. ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈ ಯೋಜನೆ ಕೈಗೆತ್ತಿಕೊಂಡು, ಕಳೆದ ವರ್ಷ 36,789 ಮನೆಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಒಂದು ಮನೆ ನಿರ್ಮಾಣಕ್ಕೆ ₹7.50 ಲಕ್ಷ ಬೇಕಾಗುತ್ತದೆ. ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ₹1.50 ಲಕ್ಷ ನೀಡಿ ಶೇ 18ರಷ್ಟು ಜಿಎಸ್‌ಟಿ ಹಾಕಿ ಬಡವರಿಂದ ₹1.38 ಲಕ್ಷ ಹಣವನ್ನು ವಾಪಸ್ ಪಡೆಯುತ್ತಿದೆ. ರಾಜ್ಯ ಸರ್ಕಾರದಿಂದ ಸಾಮಾನ್ಯರಿಗೆ ₹1.50 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ₹2 ಲಕ್ಷ ನೀಡಲಾಗುತ್ತದೆ. ಹಾಗೆಯೇ ₹4 ಲಕ್ಷ ಹಣವನ್ನು ಫಲಾನುಭವಿಗಳಿಂದ ಪಡೆಯಬೇಕಿತ್ತು. ಬಡವರಿಗೆ ಇಷ್ಟು ಹಣ ನೀಡಲು ಸಾಧ್ಯವಿಲ್ಲ. 2 ಲಕ್ಷ 30 ಸಾವಿರ ಮನೆಗಳಿಗೆ ₹9,500 ಕೋಟಿ ಸಂಗ್ರಹ ಆಗಬೇಕಿತ್ತು. ಆದರೆ, ಕೇವಲ ಫಲಾನುಭವಿಗಳಿಂದ ₹310 ಕೋಟಿ ಮಾತ್ರ ಪಾವತಿಸಿಕೊಳ್ಳಲಾಗಿದೆ. ಬಡವರ ಕಾಳಜಿವಹಿಸಿ ಫಲಾನುಭವಿಗಳ ವಂತಿಕೆಯನ್ನೂ ರಾಜ್ಯ ಸರ್ಕಾರವೇ ಭರಿಸುವ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿದ್ದಾರೆ’ ಎಂದು ಹೇಳಿದರು.

‘2024ರ ಫೆಬ್ರುವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹಂತವಾಗಿ ₹500 ಕೋಟಿ ಬಿಡುಗಡೆಗೊಳಿಸಿದ್ದರಿಂದ, ಕಳೆದ ವರ್ಷ 36,789 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಯಿತು’ ಎಂದು ತಿಳಿಸಿದರು.

ಬಡವರ ಮನೆಗಳ ಮೇಲೆ ಜಿಎಸ್‌ಟಿ ಹಾಕಬೇಡಿ ಎಂದು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಅವರಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ
ಜಮೀರ್ ಅಹ್ಮದ್ ಖಾನ್ ವಸತಿ ಸಚಿವ

‘ಆರೋಪ ಮಾಡುವುದೊಂದೇ ಬಿಜೆಪಿಗರ ಕೆಲಸ’

‘ರಾಜ್ಯದ ಒಬ್ಬ ಬಡವನಿಗಾದರೂ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದರೆ ರಾಜ್ಯಪಾಲರ ಬಳಿ ಹೋಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ನಾಯಕರಿಗೆ ನೇರವಾಗಿ ಸವಾಲು ಹಾಕಿದ್ದೇನೆ. ಹೇಳಿಕೆ ನೀಡಿ ಒಂದು ವಾರ ಕಳೆದರೂ ಈ ಬಗ್ಗೆ ಬಿಜೆಪಿಯ ಯಾರೊಬ್ಬರೂ ಮಾತನಾಡಿಲ್ಲ. ಬಿಜೆಪಿ ನಾಯಕರಿಗೆ ಆರೋಪ ಮಾಡುವುದೊಂದೇ ಕೆಲಸ ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಟೀಕಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.