
ಹುಬ್ಬಳ್ಳಿಯ ಗಣೇಶಪೇಟೆ ಕ್ರಾಸ್‌ನಲ್ಲಿ ಹಾಳಾಗಿರುವ ರಸ್ತೆಯಲ್ಲಿಯೇ ದ್ವಿಚಕ್ರ ವಾಹನ ಸವಾರರ ಸಂಚಾರ
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ: ಹಾಳಾದ ರಸ್ತೆಗಳು, ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳು. ಈ ರಸ್ತೆಗಳಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು, ಆಟೊ ಚಾಲಕರು ಪರದಾಡುತ್ತಾರೆ. ಪಾದಚಾರಿಗಳ ಸ್ಥಿತಿಯಂತೂ ಹೇಳತೀರದು!
ಇದು ಹಳೇ ಹುಬ್ಬಳ್ಳಿಯ ಇಂಡಿಪಂಪ್ ಮುಖ್ಯ ರಸ್ತೆಯ (ದಿಡ್ಡಿ ಓಣಿ ರಸ್ತೆ ಮಾರ್ಗ) ಸ್ಥಿತಿ. ಇದೊಂದೇ ಅಲ್ಲ; ಹೆಗ್ಗೇರಿ ರಸ್ತೆ, ಪತೇಹ ನಗರ, ಗಣೇಶಪೇಟೆ ರಸ್ತೆ, ತೊರವಿಹಕ್ಕಲ, ಆನಂದ ನಗರ, ನೇಕಾರ ನಗರ, ದುರ್ಗದ ಬೈಲ್ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ವಾಹನಗಳ ಸಂಚಾರವಲ್ಲ; ಪಾದಚಾರಿಗಳ ಸಂಚಾರಕ್ಕೂ ಯೋಗ್ಯವಾಗಿಲ್ಲ.
ಹಳೇ ಹುಬ್ಬಳ್ಳಿಯ ಇಂಡಿಪಂಪ್ ಮುಖ್ಯರಸ್ತೆ ಹಾಳಾಗಿ ಹಲವು ವರ್ಷಗಳಾದರೂ ದುರಸ್ತಿಗೆ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಪಾಲಿಕೆಯ ಅಧಿಕಾರಿಗಳಾಗಲಿ ಇಂದಿಗೂ ಆಸಕ್ತಿ ತೋರುತ್ತಿಲ್ಲ. ಈ ರಸ್ತೆಯು ಕಾರವಾರ ರಸ್ತೆ, ಸಿದ್ಧಾರೂಢ ಮಠ, ಗಬ್ಬೂರು ರಸ್ತೆ, ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್, ದುರ್ಗದ ಬೈಲ್ ಸೇರಿದಂತೆ ಹಳೇ ಹುಬ್ಬಳ್ಳಿಯ ಬಹುತೇಕ ನಗರಗಳನ್ನು ಸಂಪರ್ಕಿಸುತ್ತದೆ. ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿಯೇ ಸಂಚರಿಸುತ್ತವೆ.
ಇದೇ ರಸ್ತೆಯಲ್ಲಿ ಹಲವು ಖಾಸಗಿ ಆಸ್ಪತ್ರೆ ಸೇರಿದಂತೆ ಕ್ಲಿನಿಕ್, ನೇತ್ರಾಲಯ ಹಾಗೂ ಅಂಗಡಿಗಳಿವೆ. ಈ ರಸ್ತೆಯು ಯಾವಾಗಲೂ ಜನ ಹಾಗೂ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ವಾಹನ ಸವಾರರು, ಪಾದಚಾರಿಗಳು ತುಂಬಾ ಎಚ್ಚರಿಕೆಯಿಂದ ಸಂಚರಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ.
ಅನಾರೋಗ್ಯಕ್ಕೆ ಒಳಗಾಗದವರು ನಿತ್ಯ ಇಲ್ಲಿನ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಚಿಕಿತ್ಸೆಗಾಗಿ ಓಡಾಡುತ್ತಿರುತ್ತಾರೆ. ಆದರೆ, ಹಾಳಾಗಿರುವ ರಸ್ತೆಯಿಂದ ಏಳುವ ದೂಳಿನಿಂದ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಲೇ ಇದ್ದಾರೆ.
ಈ ರಸ್ತೆ ಮಾರ್ಗವು ಹು–ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಹು– ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಇವರಿಬ್ಬರ ವ್ಯಾಪ್ತಿಗೆ ಸೇರುತ್ತದೆ. ಇಲ್ಲಿನ ರಸ್ತೆಯನ್ನು ದುರಸ್ತಿ ಮಾಡಿಸಿ ಎಂದು ಹಲವು ಬಾರಿ ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಹೆಗ್ಗೇರಿಯ ಸಾರ್ವಜನಿಕ ಸ್ಮಶಾನ ಬಳಿಯ ರಸ್ತೆ, ಪತೇಹ ನಗರ, ಮಂಜುನಾಥ ನಗರ, ಉಣಕಲ್ ಗ್ರಾಮ ಮಾರ್ಗದ ರಸ್ತೆ ಸೇರಿದಂತೆ ನಗರದ ಒಳ ರಸ್ತೆಗಳು ಬಹುತೇಕ ಹಾಳಾಗಿವೆ. ಕೆಲವೆಡೆ ನಗರದ ಬಡಾವಣೆಯ ಒಳರಸ್ತೆಗಳು ದುರಸ್ತಿ ಕಾಮಗಾರಿಯನ್ನು ಈಚೆಗೆ ಕೈಗೊಳ್ಳಲಾಗಿದೆ. ಇನ್ನೂ ಕೆಲವೆಡೆ ಹಾಳಾಗಿರುವ ರಸ್ತೆಗಳಲ್ಲಿಯೇ ಜನರು ಸಂಚರಿಸುತ್ತಿದ್ದು, ಅವರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ.
‘ನಿರಂತರ ಮಳೆ ಹಾಗೂ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿವೆ. ರಸ್ತೆಗಳ ಗುಂಡಿ ಮುಚ್ಚಿಸುವ ಕೆಲಸ ಮಾಡದೇ ಹೊಸ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ನಿರ್ಲಕ್ಷಿಸಿದರೆ, ಪಾಲಿಕೆ ಕಚೇರಿ ಮುತ್ತಿಗೆ ಹಾಕಿ, ಪ್ರತಿಭಟಿಸಲಾಗುವುದು‘ ಎನ್ನುತ್ತಾರೆ ನಗರದ ಹಿರಿಯ ನಾಗರಿಕ ಡಿ.ಗೋವಿಂದರಾವ್.
ವಾಯುಮಾಲಿನ್ಯ ಹೆಚ್ಚಳ: ‘ಅವಳಿ ನಗರದಲ್ಲಿ ಹಾಳಾಗಿರುವ ರಸ್ತೆಗಳ ದುರಸ್ತಿ ಕಾರ್ಯ ಶಾಶ್ವತವಾಗಿರುವಂತೆ ಮಾಡುತ್ತಿಲ್ಲ. ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಹೆಚ್ಚಳವಾಗುತ್ತಿದೆ. ಇದು ಅವಳಿ ನಗರದಲ್ಲಿ ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ’ ಎಂದು ನಗರದ ವೈದ್ಯ ಡಾ.ಹಿರೇಮಠ್ ಕಳವಳ ವ್ಯಕ್ತಪಡಿಸುತ್ತಾರೆ.
ಹಳೇ ಹುಬ್ಬಳ್ಳಿಯ ಇಂಡಿಪಂಪ್ ಮುಖ್ಯ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದು
ಹುಬ್ಬಳ್ಳಿಯ ವರಕೆರೆ ಓಣಿಯ ರಸ್ತೆ ಹಾಳಾಗಿರುವುದು
ಹುಬ್ಬಳ್ಳಿಯ ತೊರವಿಹಕ್ಕಲ ಓಣಿಯಲ್ಲಿ ರಸ್ತೆ ಹಾಳಾಗಿದ್ದು ಜಲ್ಲಿಕಲ್ಲುಗಳು ಮೇಲೆದ್ದಿವೆ
ಹುಬ್ಬಳ್ಳಿಯ ದಾಳಿಂಬರ್ ಪೇಟೆ ಓಣಿಯಲ್ಲಿನ ರಸ್ತೆ ಹಾಳಾಗಿರುವುದು
₹2 ಕೋಟಿ ವೆಚ್ಚದಲ್ಲಿ ಇಂಡಿಪಂಪ್ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳುವ ಚಿಂತನೆಯಿತ್ತು. ಆದರೆ ಶಾಸಕ ಪ್ರಸಾದ ಅಬ್ಬಯ್ಯ ಅವರು ರಸ್ತೆ ವಿಸ್ತರಣೆ ಕಾರ್ಯ ಕೈಗೊಂಡಿದ್ದರಿಂದ ಮತ್ತೆ ರಸ್ತೆ ದುರಸ್ತಿ ಕಾಮಗಾರಿ ನನೆಗುದಿಗೆ ಬಿದ್ದಿದೆಮಹೇಶ್ ಟೆಂಗಿನಕಾಯಿ ಶಾಸಕ ಹು–ಧಾ ಸೆಂಟ್ರಲ್ ಕ್ಷೇತ್ರ
ಅವಳಿ ನಗರಗಳಲ್ಲಿ ಹಾಳಾಗಿರುವ ರಸ್ತೆಗಳ ಗುಂಡಿ ಮುಚ್ಚಲು 3 ತಿಂಗಳ ಹಿಂದೆಯೇ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಇಂದಿಗೂ ಕಾಮಗಾರಿ ಕೈಗೊಂಡಿಲ್ಲ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದೆಇಮ್ರಾನ್ ಎಲಿಗಾರ ವಿರೋಧ ಪಕ್ಷದ ನಾಯಕ ಹು–ಧಾ ಮಹಾನಗರ ಪಾಲಿಕೆ
ಆಗಾಗ ಮಳೆ ಬರುತ್ತಿರುವ ಕಾರಣ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿಲ್ಲ. ಅವಳಿ ನಗರದಲ್ಲಿ ಹಾಳಾಗಿರುವ ಎಲ್ಲಾ ರಸ್ತೆಗಳ ದುರಸ್ತಿಯನ್ನು ಏಕಕಾಲದಲ್ಲಿಯೇ ಮಾಡಲಾಗುವುದುಆರ್.ವಿಜಯಕುಮಾರ್ ಅಧೀಕ್ಷಕ ಎಂಜಿನಿಯರ್ ಹು–ಧಾ ಮಹಾನಗರ ಪಾಲಿಕೆ
‘₹6 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾರ್ಯ’
‘ಅವಳಿ ನಗರ ವ್ಯಾಪ್ತಿಯಲ್ಲಿನ ವಲಯವಾರು ಹಾಗೂ ವಾರ್ಡ್‌ವಾರು ಪ್ರದೇಶಗಳಲ್ಲಿ ಹಾಳಾಗಿರುವ ರಸ್ತೆಗಳ ತಾತ್ಕಾಲಿಕ ದುರಸ್ತಿಗಾಗಿ ಈಗಾಗಲೇ ₹6 ಕೋಟೆ ವೆಚ್ಚದ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾರ್ಯಾದೇಶ ನೀಡಲಾಗಿದೆ. ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ₹40 ಲಕ್ಷ ವೆಚ್ಚದಲ್ಲಿ ಇಂಡಿಪಂಪ್ ಮುಖ್ಯರಸ್ತೆಯ ತಾತ್ಕಾಲಿಕ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎನ್ನುತ್ತಾರೆ ಪಾಲಿಕೆ ಆಯುಕ್ತ ರುದ್ರೇಶ ಘಾಳಿ.
‘ಹುಬ್ಬಳ್ಳಿ–ಧಾರವಾಡ: ವಾಯುಮಾಲಿನ್ಯ ನಗರ’
‘ಕೇಂದ್ರ ಸರ್ಕಾರದ ರಾಷ್ಟ್ರೀಯ ಸ್ವಚ್ಛ ಗಾಳಿ ಯೋಜನೆ (ಎನ್‌ಸಿಎಪಿ) ವರದಿಯನ್ವಯ ರಾಜ್ಯದಲ್ಲಿ ವಾಯುಮಾಲಿನ್ಯಕ್ಕೆ ಒಳಪಟ್ಟ ಪ್ರಮುಖ ನಾಲ್ಕು ನಗರಗಳಲ್ಲಿ ಹುಬ್ಬಳ್ಳಿ–ಧಾರವಾಡ ನಗರವೂ ಸೇರಿದೆ. ಇದಕ್ಕೆ ವಾಹನಗಳ ಹೆಚ್ಚಳ ರಸ್ತೆಗಳ ದೂಳು ಅವಳಿ ನಗರದಲ್ಲಿ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಪ್ರಮುಖ ಕಾರಣವಾಗಿವೆ. ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಈಗಾಗಲೇ ಪಾಲಿಕೆಯು ಹಲವು ಕ್ರಮಗಳನ್ನು ಕೈಗೊಂಡಿದೆ‘ ಎನ್ನುತ್ತಾರೆ ಪರಿಸರ ಅಧಿಕಾರಿಯೊಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.