ADVERTISEMENT

ಟೇಬಲ್ ಟೆನಿಸ್‌ನಲ್ಲಿ 2 ಅಂತರರಾಷ್ಟ್ರೀಯ ಪದಕ ಗಳಿಸಿದ ಹುಬ್ಬಳ್ಳಿಯ ಸುಚೇತ

ಸತೀಶ ಬಿ.
Published 23 ಆಗಸ್ಟ್ 2025, 4:07 IST
Last Updated 23 ಆಗಸ್ಟ್ 2025, 4:07 IST
ಸುಚೇತ ಧರೆಣ್ಣವರ
ಸುಚೇತ ಧರೆಣ್ಣವರ   

ಹುಬ್ಬಳ್ಳಿ: ತಾಲ್ಲೂಕಿನ ರಾಮಾಪುರದ ಬಾಲಕ ಸುಚೇತ ಧರೆಣ್ಣವರ ಟೇಬಲ್‌ ಟೆನಿಸ್‌ ಕ್ರೀಡೆಯಲ್ಲಿ ಭರವಸೆ ಮೂಡಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಸಾಧಿಸಿದ್ದಾನೆ.

ಲಾವೋಸ್‌ನ ವಿಯೆಂಟಿಯಾನ್‌ನಲ್ಲಿ ಆಗಸ್ಟ್‌ 6ರಿಂದ 9ವರೆಗೆ ನಡೆದ ವಿಶ್ವ ಟೇಬಲ್‌ ಟೆನಿಸ್‌ (ಡಬ್ಲ್ಯುಟಿಟಿ) ಯೂತ್‌ ಕಂಟೆಂಡರ್‌ ವಿಯೆಂಟಿಯಾನ್‌ –2025 ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದಾನೆ. 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸುಚೇತ್ 3–0 ರಿಂದ ಥಾಯ್ಲೆಂಡ್‌ನ ಸ್ಪರ್ಧಿ ಎದುರು ಪರಾಭವಗೊಂಡನು.

ಇದೇ ವರ್ಷ ಫೆಬ್ರುವರಿಯಲ್ಲಿ ಗುಜರಾತ್‌ನ ವಡೋದರಾದಲ್ಲಿ ನಡೆದ ವಿಶ್ವ ಟೇಬಲ್‌ ಟೆನಿಸ್‌ (ಡಬ್ಲ್ಯುಟಿಟಿ) ಟೂರ್ನಿಯಲ್ಲಿ ಸಹ ಕಂಚಿನ ಪದಕ ಗಳಿಸಿದ್ದಾನೆ. ಬೆಂಗಳೂರು, ಮೈಸೂರು, ಹೊಸಪೇಟೆ, ಬೆಳಗಾವಿಯಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಗಳಲ್ಲಿ ಪ್ರಥಮ ಮತ್ತು ಮಂಗಳೂರಿನಲ್ಲಿ ನಡೆದ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪ್ರೀಕ್ವಾರ್ಟರ್ ಫೈನಲ್ ತಲುಪಿದ್ದಾನೆ.

ADVERTISEMENT

ಸುಚೇತ, ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯ ಸಿಐಸಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ. ಆತನ ತಂದೆ ಚನ್ನಬಸಪ್ಪ ಧರೆಣ್ಣವರ, ತಾಯಿ ಸುನಂದಾ ಧರೆಣ್ಣವರ ಅವರು ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಉದ್ಯೋಗಿಗಳಾಗಿದ್ದಾರೆ.

‘ಮೊಬೈಲ್ ಗೀಳು ಬಿಡಿಸಲು ಸುಚೇತ ಒಂದನೇ ತರಗತಿಯಲ್ಲಿದ್ದಾಗ ಟೇಬಲ್ ಟೆನಿಸ್ ತರಬೇತಿ ಕೊಡಿಸಿದೆ.  ನನ್ನ ತಂದೆ ಕುಸ್ತಿಪಟುವಾಗಿದ್ದರು. ನಾನು ಮತ್ತು ಸಹೋದರ ಸಹ ಅಥ್ಲೀಟ್‌ಗಳು. ಹೀಗಾಗಿ ಆತನೂ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬುದು ಆಶಯ’ ಎಂದು ಚನ್ನಬಸಪ್ಪ ಧರೆಣ್ಣವರ ಹೇಳಿದರು.

‘ವಿಜಯಕುಮಾರ್ ಕರಿಗಾರ ಅವರ ಬಳಿ ತರಬೇತಿ ಪಡೆದಿದ್ದಾನೆ. ಅಲ್ಲದೆ, ವರ್ಷದಲ್ಲಿ ಎರಡು–ಮೂರು ಬಾರಿ ವಿಯೆಟ್ನಾಂನ ಟಿ ಲಾಂಗ್ ಅವರ ಬಳಿಯೂ ತರಬೇತಿ ಪಡೆಯುತ್ತಾನೆ. ಚೀನಾ, ಜಪಾನ್‌, ದಕ್ಷಿಣ ಕೊರಿಯಾದ ಕ್ರೀಡಾಪಟಗಳು ಟೇಬಲ್‌ ಟೆನಿಸ್ ಕ್ರೀಡೆಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅವರ ಸವಾಲು ಎದುರಿಸಲು ಅಂತರರಾಷ್ಟ್ರೀಯ ಮಟ್ಟದ ತರಬೇತುದಾರರಿಂದ ತರಬೇತಿ ಪಡೆಯುವುದು ಅವಶ್ಯ’ ಎಂದರು.

ಬೆಂಗಳೂರಿನ ಜೀನಿಯಸ್ ದೆಹಲಿಯ ಸ್ಟ್ಯಾಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದೇನೆ. ನನ್ನ ಸಾಧನೆಗೆ ತರಬೇತುದಾರರ ಮಾರ್ಗದರ್ಶನ ತಂದೆ ಮತ್ತು ಶಾಲೆಯ ಪ್ರೋತ್ಸಾಹ ಕಾರಣ
ಸುಚೇತ ಧರೆಣ್ಣವರ ಟೇಬಲ್‌ ಟೆನಿಸ್ ಪಟು
ಸುಚೇತನಿಗೆ ಮೂರು ವರ್ಷಗಳಿಂದ ತರಬೇತಿ ನೀಡುತ್ತಿದ್ದೇನೆ. ಪ್ರತಿ ದಿನ‌ ಹತ್ತು ಗಂಟೆ ಅಭ್ಯಾಸ ಮಾಡುತ್ತಾನೆ. ಮುಂಬರುವ ರಾಜ್ಯ ರ‍್ಯಾಂಕಿಂಗ್ ಟೂರ್ನಿ ಮಿನಿ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಿದ್ದಾನೆ
ವಿಜಯಕುಮಾರ ಕರಿಗಾರ ತರಬೇತುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.