ಹುಬ್ಬಳ್ಳಿಯ ಕೇಶ್ವಾಪುರ ಸರ್ಕಲ್‌ನಲ್ಲಿ ಅವೈಜ್ಞಾನಿಕ ಬಸ್ ತಂಗುದಾಣದ ನೋಟ
ಪ್ರಜಾವಾಣಿ ಚಿತ್ರ ಗೋವಿಂದರಾಜ ಜವಳಿ
ಹುಬ್ಬಳ್ಳಿ: ನಗರದ ಹತ್ತಾರು ಕಡೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಬಸ್ ನಿಲುಗಡೆ ತಾಣಗಳಿಂದಾಗಿ ವಾಹನ ಚಾಲಕರು ಮತ್ತು ಬೈಕ್ ಸವಾರರು ಗೊಂದಲಕ್ಕೀಡಾಗಿ ಅಪಘಾತಕ್ಕೀಡಾಗುವ ಪ್ರಸಂಗ ಎದುರಿಸುತ್ತಿದ್ದಾರೆ!
ನಾಲ್ಕು ಹಾಗೂ ಅದಕ್ಕಿಂತ ಹೆಚ್ಚು ಮಾರ್ಗಗಳು ಸಂಧಿಸುವ ಕಡೆಯಲ್ಲಿ ಸಂಚಾರ ಪೊಲೀಸರು ಇಲ್ಲದ ಸಂದರ್ಭದಲ್ಲಿ ವಾಹನ ಸವಾರರು ಪರಸ್ಪರ ವಾಗ್ವಾದ ಮಾಡಿಕೊಂಡು ನಿಲ್ಲುವ ನೋಟಗಳು ಪ್ರತಿ ದಿನ ಹುಬ್ಬಳ್ಳಿಯಲ್ಲಿ ಕಂಡು ಬರುತ್ತಿವೆ. ನಿಧಾನವಾಗಿ ಅಥವಾ ನಿಲುಗಡೆಯಾದ ದೊಡ್ಡ ವಾಹನವನ್ನು ಬೈಕ್, ಕಾರು ಹಾಗೂ ಇತರ ಸಣ್ಣ ವಾಹನ ಸವಾರರು ದಾಟಿಕೊಂಡು ಹೋಗುವಾಗ ದಿಢೀರ್ ಇನ್ನೊಂದು ವಾಹನ ಎದುರಾದಾಗ ಇಂತಹ ವಾಗ್ವಾದ ಶುರುವಾಗುತ್ತದೆ.
ಸ್ವಲ್ಪ ಡಿಕ್ಕಿಯಾದರೂ ಪರಿಸ್ಥಿತಿ ವಿಕೋಪಕ್ಕೆ ತಲುಪುವ ಪ್ರಸಂಗಗಳು ನಡೆಯುತ್ತಿವೆ. ಇಂತಹ ವಾಗ್ವಾದ ಪ‍್ರಸಂಗಗಳು ನಡೆಯುವುದಕ್ಕೆ ಮೂಲ ಕಾರಣ ಅವೈಜ್ಞಾನಿಕವಾಗಿ ನಿರ್ಮಿಸಿದ ಬಸ್ ನಿಲುಗಡೆ ತಾಣಗಳು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ರಸ್ತೆಗಳು ಸಂಧಿಸುವ ಕಡೆಯಲ್ಲಿ ಬಸ್ ನಿಲುಗಡೆಯಾದಾಗ ಅದರ ಹಿಂಬದಿ ವಾಹನಗಳಿಗೆ ಮುಂಭಾಗದ ಅಡ್ಡರಸ್ತೆ ಹಾಗೂ ವಾಹನಗಳು ಗೋಚರಿಸುವುದಿಲ್ಲ. ಹೀಗಾಗಿ ಬಸ್ ಮುಂಭಾಗದಲ್ಲಿ ವಾಹನಗಳು ಅಡ್ಡಾದಿಡ್ಡಿ ನುಗ್ಗುತ್ತವೆ. ಸ್ವಲ್ಪ ಯಾಮಾರಿದರೂ ಸಾಕು, ಒಂದಕ್ಕೊಂದು ವಾಹನ ಡಿಕ್ಕಿ ಹೊಡೆದುಕೊಳ್ಳುತ್ತಿವೆ.
ಈ ಸಮಸ್ಯೆಗೆ ಮೂಲ ಕಾರಣ ಬಸ್ ಅಡ್ಡಲಾಗಿ ನಿಲುಗಡೆ ಮಾಡುತ್ತಿರುವುದು. ಹುಬ್ಬಳ್ಳಿ ನಗರ ಸಂಚಾರದ ಬಸ್ ನಿಲ್ದಾಣಗಳನ್ನು ಒಂದೇ ನಿಯಮಾನುಸಾರ ನಿರ್ಮಿಸಿಲ್ಲ. ಮುಖ್ಯರಸ್ತೆ ಸಂಪರ್ಕಿಸುವ ಅಡ್ಡರಸ್ತೆ ದಾಟಿದ ಬಳಿಕ ಬಸ್ ತಂಗುದಾಣ ಇರುವ ಕಡೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಬಸ್ ನಿಲುಗಡೆಯಾದಾಗ ಅಡ್ಡರಸ್ತೆ ಮರೆ ಆಗುವಂತೆ ನಿರ್ಮಿಸಿದ ತಂಗುದಾಣಗಳು ಅವೈಜ್ಞಾನಿಕವಾಗಿವೆ. ಅಡ್ಡರಸ್ತೆಯಲ್ಲಿ ಬರುವ ವಾಹನ ಸವಾರರಿಗೆ ಮುಖ್ಯರಸ್ತೆಯ ವಾಹನಗಳು ಗೋಚರಿಸುವುದಿಲ್ಲ. ಇಂತಹ ಬಸ್ ತಂಗುದಾಣಗಳನ್ನು ಸ್ಥಳಾಂತರಿಸಿ ಸಮರ್ಪಕ ಜಾಗದಲ್ಲಿ ನಿರ್ಮಿಸಬೇಕು ಎನ್ನುವುದು ಜನರ ಒತ್ತಾಯ.
ಹುಬ್ಬಳ್ಳಿ-ಧಾರವಾಡ ಮಧ್ಯೆ, ಹುಬ್ಬಳ್ಳಿ ನಗರದಲ್ಲಿರುವ ಸಮಸ್ಯಾತ್ಮಕ ನಗರ ಬಸ್ ನಿಲ್ದಾಣಗಳನ್ನು ಗುರುತಿಸಿ, ಸಮಸ್ಯೆ ಪರಿಹರಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಸಂಭವನೀಯ ಅಪಘಾತ ತಪ್ಪಿಸಿದಂತಾಗುತ್ತದೆ. ಅನಗತ್ಯ ವಾಹನದಟ್ಟಣೆ ಸಮಸ್ಯೆಯೂ ಆಗುವುದಿಲ್ಲ.
ಎಲ್ಲೆಲ್ಲಿ ಸಮಸ್ಯೆ: ಕೇಶ್ವಾಪೂರ ಸರ್ಕಲ್, ಗೋಕುಲ ಮಾರ್ಗದ ಅರ್ಜುನ ವಿಹಾರ ವಾಟರ್ ಟ್ಯಾಂಕ್, ಮಹಾಲಕ್ಷ್ಮಿ ಲೇಔಟ್, ಬಸವೇಶ್ವರ ನಗರ ಕ್ರಾಸ್, ಅರ್ಬನ್ ಮಾಲ್, ಡಿಪೊ ಸರ್ಕಲ್, ಇಂಡಿ ಪಂಪ್, ಕಲಘಟಗಿ ನಾಕಾ ಹಾಗೂ ನಗರದೊಳಗಿನ ಹಲವು ಬಸ್ ನಿಲುಗಡೆಗಳನ್ನು ಅಡ್ಡರಸ್ತೆ ಮರೆಯಾಗುವಂತೆ ನಿರ್ಮಿಸಲಾಗಿದೆ.
ನಾಲ್ಕು ರಸ್ತೆಗಳು ಸಂಧಿಸುವ ವೃತ್ತಗಳು ಹುಬ್ಬಳ್ಳಿಯಲ್ಲಿ ಹೆಚ್ಚಿವೆ. ಇಂತಹ ಕಡೆಯಲ್ಲಿ ವಾಹನದಟ್ಟಣೆ ಸಮಸ್ಯೆ ಎಲ್ಲರಿಗೂ ವಿಪರೀತ ಕಿರಿಕಿರಿಯಾಗುತ್ತಿದೆ. ಮುಖ್ಯವಾಗಿ ಬೆಳಿಗ್ಗೆ 9ರಿಂದ 11 ಗಂಟೆವರೆಗೂ ಸಂಜೆ 5.30ರಿಂದ 7.00ರವರೆಗೂ ಪ್ರತಿ ತಿರುವುಗಳಲ್ಲಿ ವಾಹನದಟ್ಟಣೆ ಏರ್ಪಡುತ್ತದೆ. ಸಂಚಾರ ಪೊಲೀಸರು ಏಕಾಂಗಿಯಾಗಿ ವಾಹನದಟ್ಟಣೆ ನಿಯಂತ್ರಿಸುವುದು ಕಷ್ಟಸಾಧ್ಯ. ಎರಡಕ್ಕಿಂತ ಹೆಚ್ಚು ಪೊಲೀಸರು ಧಾವಿಸಿ ಸಂಚಾರದಟ್ಟಣೆ ಹತೋಟಿಗೆ ತರಲು ಹರಸಾಹಸ ಮಾಡುತ್ತಾರೆ.
ಹುಬ್ಬಳ್ಳಿ ನಗರದ ಹೊಸೂರ ಕ್ರಾಸ್, ಇಂಡಿಪಂಪ್, ಗಬ್ಬೂರ್ ಕ್ರಾಸ್, ಕೇಶ್ವಾಪುರ ಸರ್ಕಲ್, ಸಿಂಧೂರ ಲಕ್ಷ್ಮಣ ವೃತ್ತ, ಅಕ್ಷಯ ಪಾರ್ಕ್ ವೃತ್ತ, ಭಾರತ ಮಿಲ್, ಸಿದ್ದೇಶ್ವರ ಪಾರ್ಕ್, ಶಿರೂರ್ ಪಾರ್ಕ್, ಡಿಪೊ ಸರ್ಕಲ್, ದೇಶಪಾಂಡೆ ನಗರ ಸರ್ಕಲ್‌ನಲ್ಲಿ ಪ್ರತಿದಿನ ವಾಹನ ದಟ್ಟಣೆ ಏರ್ಪಡುತ್ತಿದೆ. ಈ ವೃತ್ತಗಳು ವೈಜ್ಞಾನಿಕ ರೀತಿ ಅಭಿವೃದ್ಧಿ ಆಗದಿರುವುದು ಸಮಸ್ಯೆಯ ಮೂಲ. ಕೆಲವು ವೃತ್ತಗಳು ಅಭಿವೃದ್ಧಿ ಮಾಡುವಷ್ಟು ವಿಶಾಲವಾಗಿಲ್ಲ. ಆದರೆ, ವಾಹನ ದಟ್ಟಣೆ ನಿರ್ವಹಣೆಗೆ ಪರ್ಯಾಯ ಮಾರ್ಗೋಪಾಯ ರೂಪಿಸಬೇಕಿದೆ.
ಪೊಲೀಸರು ವಾಹನದಟ್ಟಣೆ ನಿಯಂತ್ರಿಸಲು ಹರಸಾಹಸ ಪಡುವ ವೃತ್ತಗಳಲ್ಲಿ ಟೈಮರ್ ಸಂಚಾರ ದೀಪಗಳನ್ನು ಅಳವಡಿಸುವ ಅಗತ್ಯವಿದೆ. ದಟ್ಟಣೆ ಏರ್ಪಡುವ ಸಂದರ್ಭದಲ್ಲಾದರೂ ಸಂಚಾರ ದೀಪಗಳು ಕಾರ್ಯ ನಿರ್ವಹಿಸುವಂತಾಗಬೇಕು. ಪೊಲೀಸರು ಎಡಬಿಡದೆ ಕೈ ಎತ್ತಿ ವಾಹನಗಳಿಗೆ ದಾರಿ ತೋರುವ ಸಂಕಷ್ಟ ಕೊನೆಗಾಣಿಸಲು ಸಂಚಾರ ದೀಪಗಳು ಹೊಸೂರ ಕ್ರಾಸ್, ಇಂಡಿಪಂಪ್, ಸಿದ್ದೇಶ್ವರ ಪಾರ್ಕ್, ಶಿರೂರ್ ಪಾರ್ಕ್‌ನಲ್ಲಿ ತುರ್ತಾಗಿ ಅಳವಡಿಸಬೇಕಿದೆ. ದಟ್ಟಣೆ ಇಲ್ಲದಿದ್ದಾಗ ದೀಪಗಳನ್ನು ನ್ಯೂಟ್ರಲ್ ಮಾಡುವ ವ್ಯವಸ್ಥೆಯೂ ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.