
ಹುಬ್ಬಳ್ಳಿ: ನಗರದಲ್ಲಿ ಹೋಳಿ ಹಬ್ಬದ ಸಿದ್ಧತೆ ಜೋರಾಗಿದೆ. ಹಳೇ ಹುಬ್ಬಳ್ಳಿ ಹಾಗೂ ಹೊಸ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ನಡೆದಿವೆ.
ಬುಧವಾರ ಹುಣ್ಣಿಮೆ ದಿನದಂದು ಚಂದ್ರ ಗ್ರಹಣ ಇದ್ದು, ಬಹುತೇಕ ಕಡೆ ರಾತ್ರಿ 8ರ ನಂತರ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಕೆಲವು ಕಡೆ ಚಂದ್ರಗ್ರಹಣಕ್ಕೂ ಮುನ್ನ ಬೆಳಿಗ್ಗೆಯೇ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ವಿವಿಧ ಕಲಾವಿದರ ಬಳಿ ಮೂರ್ತಿಗಳನ್ನು ಕಾಯ್ದಿರಿಸಲಾಗಿದೆ.
ನಗರದಲ್ಲಿ 800ಕ್ಕೂ ಹೆಚ್ಚು ಕಡೆಗಳಲ್ಲಿ ಕಾಮಣ್ಣ–ರತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಕಮರಿಪೇಟೆ, ಚನ್ನಪೇಟೆ, ವೀರಾಪುರ ಓಣಿ, ದಾಜಿಬಾನಪೇಟೆ, ಪೆಂಡಾರಗಲ್ಲಿ, ಯಲ್ಲಾಪುರ ಓಣಿ, ಹಳೇ ಹುಬ್ಬಳ್ಳಿಯ ವಿವಿಧೆಡೆ ಪೆಂಡಾಲ್‌ಗಳನ್ನು ಹಾಕಿ, ತಳಿರು–ತೋರಣಗಳಿಂದ ಸಿಂಗರಿಸಲಾಗಿದೆ.
ಐದು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ ನಡೆಯಲಿವೆ. ಹುಬ್ಬಳ್ಳಿ, ಧಾರವಾಡ ಭಾಗದ ಜನರಷ್ಟೇ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳ ಹಾಗೂ ಬೆಂಗಳೂರು, ಮುಂಬೈ ಭಾಗದ ಜನರು ಸಹ ಬಂದು ಕಾಮಣ್ಣನ ದರ್ಶನ ಪಡೆದು ಪೂಜೆ ಹಾಗೂ ಹರಕೆ ಸಲ್ಲಿಸುತ್ತಾರೆ.
ಹಳೇ ಮತ್ತು ಹೊಸ ಮೇದಾರ ಓಣಿಯಲ್ಲಿ ಬೃಹತ್ ಪೆಂಡಾಲ್‌ನಲ್ಲಿ ಅಂದಾಜು ತಲಾ ₹1.50 ಲಕ್ಷ ವೆಚ್ಚದಲ್ಲಿ 21 ಅಡಿ ಎತ್ತರ, 16 ಅಡಿ ಅಗಲದ ಬಿದಿರಿನ ಕಾಮಣ್ಣ ಮೂರ್ತಿಗಳನ್ನು ತಯಾರಿಸಲಾಗಿದೆ. ರಂಗ ಪಂಚಮಿ ದಿನದಂದು ನಡೆಯಲಿರುವ ಈ ಎರಡೂ ಮೂರ್ತಿಗಳ ಮೆರವಣಿಗೆ ಹಾಗೂ ದುರ್ಗದಬೈಲ್‌ನಲ್ಲಿ ನಡೆಯಲಿರುವ ಮೂರ್ತಿಗಳ ‘ಸಮಾಗಮ’ಕ್ಕೆ, ಓಣಿಯ ಹಿರಿಯರು ಹಾಗೂ ಯುವಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
‘ಮೇದಾರ ಓಣಿಯ ಕಾಮಣ್ಣ ಮೂರ್ತಿಗೆ 200ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ರಾಜ್ಯದಲ್ಲೇ ಅತಿ ಎತ್ತರದ ನಿಂತಿರುವ ಬಿದಿರಿನ ಕಾಮಣ್ಣ ಮೂರ್ತಿ ಇದಾಗಿದೆ. ದೇಶದಲ್ಲೆಲ್ಲೂ ಬಿದಿರಿನ ಕಾಮಣ್ಣ ಮೂರ್ತಿ ತಯಾರಿಸುವುದಿಲ್ಲ’ ಎಂದು ಸ್ಥಳೀಯ ನಿವಾಸಿ ಭೀಮಣ್ಣ ಮೇದಾರ ಹೇಳುತ್ತಾರೆ.
‘44 ವರ್ಷಗಳಿಂದ ಸ್ಥಗಿತವಾಗಿದ್ದ ಹೊಸ ಮತ್ತು ಹಳೇ ಮೇದಾರ ಓಣಿಯ ಕಾಮಣ್ಣ ಮೂರ್ತಿಗಳ ಸಮಾಗಮ, ಕಳೆದ ಎರಡು ವರ್ಷಗಳಿಂದ ಪುನರಾರಂಭವಾಗಿದೆ. ಈ ವರ್ಷದ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಸಿದ್ಧತೆ ನಡೆಸಿದ್ದೇವೆ. ಎರಡೂ ಸಮಿತಿ ಸದಸ್ಯರು ಸಭೆ ನಡೆಸಿ, ದುರ್ಗದಬೈಲ್ ವೃತ್ತದಲ್ಲಿ ಮೂರ್ತಿ ಸಮಾಗಮದ ಕುರಿತು ಕಾರ್ಯಯೋಜನೆ ಸಿದ್ಧಪಡಿಸಿಕೊಂಡಿವೆ’ ಎಂದು ಮೇದಾರ ಓಣಿಯ ಸುಭಾಸ ಹೆಬ್ಬಳ್ಳಿ ತಿಳಿಸಿದರು.
ಖರೀದಿ ಜೋರು: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಹಳೇ ಕೋರ್ಟ್ ವೃತ್ತದ ಪಕ್ಕ, ಗೋಕುಲ ರಸ್ತೆ, ಕೇಶ್ವಾಪುರದ ಸುತ್ತಮುತ್ತ ಹಲಗೆಗಳ ಹಾಗೂ ಮಾರುಕಟ್ಟೆಗಳಲ್ಲಿ ವೈವಿಧ್ಯಮಯ ಪಿಚಕಾರಿಗಳ ಮಾರಾಟ ಜೋರಾಗಿದೆ.
ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಬುಧವಾರ ನಸುಕಿನಲ್ಲಿ ಮೇದಾರ ಓಣಿಯ ಕಾಮಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಸಂಜೆ ವೇಳೆ ಪೂಜಾ ಕಾರ್ಯ ನಡೆಯಲಿದೆಸುಭಾಸ ಹೆಬ್ಬಳ್ಳಿ ಮೇದಾರ ಓಣಿ
ಎರಡ್ಮೂರು ತಲೆಮಾರುಗಳಿಂದ ನಮ್ಮ ಕುಟುಂಬ ಕಾಮಣ್ಣ ಗಣಪತಿ ಮೂರ್ತಿಯನ್ನು ತಯಾರಿಸುತ್ತಾ ಬಂದಿದೆ. ಪ್ರಸ್ತುತ ವರ್ಷ ಕಾಮಣ್ಣ–ರತಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆಗೋಪಾಲ ಹೊಂಬಳ ಬಮ್ಮಾಪುರ ಓಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.