
ಹುಬ್ಬಳ್ಳಿ: ತಾಲ್ಲೂಕಿನ ಬಂಡಿವಾಡ ಗ್ರಾಮದ ಮಂಜುನಾಥ ಯಲ್ಲಪ್ಪ ಗಾಣಿಗೇರ (28) ಅವರನ್ನು ಕೊಲೆ ಮಾಡಿ, ಚೀಲದಲ್ಲಿ ತುಂಬಿ ಗದಗ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕ ಎಸೆಯಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಐಟಿಸಿ ಗೋದಾಮಿನ ಬಳಿ ಬುಧವಾರ ಬೆಳಿಗ್ಗೆ ರಕ್ತ ಒಸರುತ್ತಿದ್ದ ಚೀಲ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಶವವನ್ನು ಕೆಎಂಸಿ–ಆರ್‌ಐ ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಾಗಿದೆ.
‘ಮಂಜುನಾಥ ಅವರನ್ನು ಯಾರು, ಯಾಕೆ ಕೊಲೆ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಗ್ರಾಮದಲ್ಲಿ ಅಳವಡಿಸಿರುವ ಹಾಗೂ ಶವ ಎಸೆದು ಹೋಗಿರುವ ಸುತ್ತಲಿನ ಸ್ಥಳದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಗ್ರಾಮದ ಇಬ್ಬರು ವ್ಯಕ್ತಿಗಳ ಜೊತೆ ಮಂಜುನಾಥ ಅವರಿಗೆ ಜಗಳವಾಗಿತ್ತು ಎನ್ನುವ ಮಾಹಿತಿ ಆಧರಿಸಿ, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ನಗರದ ಅಶೋಕ ರಾಡಿಯಾ ಅವರನ್ನು ವಾಟ್ಸ್‌ಆ್ಯಪ್ ನಂಬರ್‌ನಲ್ಲಿ ಸಂಪರ್ಕಿಸಿದ ಇಬ್ಬರು ವ್ಯಕ್ತಿಗಳು, ₹20.65 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಅಶೋಕ ಅವರ ವಾಟ್ಸ್‌ಆ್ಯಪ್ ನಂಬರ್ ಅನ್ನು ಮುಖೇಶ ಹೆಸರಿನ ವ್ಯಕ್ತಿಯು ‘ವಿಐಪಿ 1 ಸರ್ವಿಸ್ ಟೀಮ್’ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರಿಸಿ, ರುಡ್‌ಪ್ರೊ ಅಪ್ಲಿಕೇಷನ್ ಅಳವಡಿಸಿಕೊಳ್ಳುವಂತೆ ಹೇಳಿ, ಹಣ ಹೂಡಿಕೆ ಬಗ್ಗೆ ತಿಳಿಸಿದ್ದ. ನಂತರ ಅವರಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಲ್ಲಿನ ಮಂಟೂರ ರಸ್ತೆಯ ಹಾನಗಲ್ಲ ಚಾಳದಲ್ಲಿ ನಡೆದಿದೆ. ಮೂಲತಃ ಗದಗ ಜಿಲ್ಲೆ ಮುಳಗುಂದ ಗ್ರಾಮದ ನಿವಾಸಿ ಹಸಿನಾಬೇಗಂ ರಾಮಗಿ (35) ಮೃತರು.
‘ಹುಬ್ಬಳ್ಳಿಯ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹಸಿನಾಬೇಗಂ, ವ್ಯವಸ್ಥಾಪಕರ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದು ಪತಿಗೆ ತಿಳಿದ ಬಳಿಕ ಜಗಳವಾಗಿದ್ದು, ನಂತರ ಅವರನ್ನು ಬಿಟ್ಟು ವ್ಯವಸ್ಥಾಪಕರೊಂದಿಗೆ ಎರಡು ವರ್ಷ ವಾಸವಾಗಿದ್ದರು. ಮದುವೆಯಾಗುವಂತೆ ಒತ್ತಾಯಿಸಿದಾಗ ವ್ಯವಸ್ಥಾಪಕ ನಿರಾಕರಿಸಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.