ವಂಚನೆ–ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ವೈದ್ಯ ಕೃಷ್ಣ ಅವರಿಗೆ ವಾಟ್ಸ್‌ಆ್ಯಪ್ ಗ್ರೂಪ್ ಸೇರ್ಪಡೆಯಾಗಲು ಸಂದೇಶ ಕಳುಹಿಸಿದ ವ್ಯಕ್ತಿ, ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿ ₹53.45 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹77.70 ಲಕ್ಷ ವಂಚನೆ: ಇಲ್ಲಿಯ ಅಕ್ಷಯ ಕಾಲೊನಿಯ ಸುಧೀರ ರಾಯ್ಕರ್ ಅವರಿಗೆ ವಾಟ್ಸ್‌ಆ್ಯಪ್ ನಂಬರ್‌ನಿಂದ ಕರೆ ಮಾಡಿದ ಮಹಿಳೆ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ ₹77.70 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಕಿನ್ ಮಾರಾಟ, ಬಂಧನ: ಮಾದಕ ವಸ್ತು ಕೋಕಿನ್ ಮಾರಾಟಕ್ಕೆ ಯತ್ನಿಸಿದ ಇಲ್ಲಿಯ ವೀರಾಪುರ ಓಣಿಯ ಮೊಹ್ಮದಜುನೈದ್ ಎಂಬಾತನ್ನು ಬಂಧಿಸಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು, ₹37 ಸಾವಿರ ವೌಲ್ಯದ 2.51 ಗ್ರಾಂ ಕೋಕಿನ್ ಸೇರಿದಂತೆ ₹62 ಸಾವಿರ ವೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.
ಕಿರುಕುಳ, ಪ್ರಕರಣ ದಾಖಲು: ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಬೆಳಗಾವಿಯ ಜಮೀಲ್ ಕಂದಗಲ್ ಅವರನ್ನು ನಗರದ ಲಾಡ್ಜ್‌ನಲ್ಲಿ ಕೂಡಿಟ್ಟು ಕಿರುಕುಳ ನೀಡಿದ ಆರೋಪದ ಮೇಲೆ ಏಳು ಮಂದಿ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸೀಂ, ಮೋಯಿನ್, ಶಾನವಾಜ್ ಸೌದಾಗರ, ಮಲ್ಲಿಕ್, ಪ್ರಶಾಂತ ಸೇರಿ ಇತರರು ಜಮೀಲ್ ಅವರನ್ನು ಬೆಳಗಾವಿಯಿಂದ ಕರೆದುಕೊಂಡು ಬಂದು, ₹15 ಲಕ್ಷ ನೀಡುವಂತೆ ಲಾಡ್ಜ್‌ನ ರೂಮ್‌ನಲ್ಲಿ ಕೂಡಿಟ್ಟು ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.