
ಹುಬ್ಬಳ್ಳಿ: ‘ದಾಸ ಸಾಹಿತ್ಯವು ಇಡೀ ವಿಶ್ವಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಮಠ, ಪರಂಪರೆಗಿಂತ ಮಾನವ ಜನ್ಮ ದೊಡ್ಡದು ಎಂದು ದಾಸ ಸಾಹಿತ್ಯ ಹೇಳಿದೆ’ ಎಂದು ಹಿರಿಯ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.
ಇಲ್ಲಿನ ಭವಾನಿ ನಗರದ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಸಂಯುತಾ ಪ್ರತಿಷ್ಠಾನ, ಕ್ಷಮತಾ ಸೇವಾ ಸಂಸ್ಥೆ, ಭವಾನಿ ನಗರ ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಟಿಟಿಡಿ ಹಾಗೂ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನಕ– ಪುರಂದರೋತ್ಸವ ಕಾರ್ಯಕ್ರಮದಲ್ಲಿ ‘ಸಂಯುತಾ ಪುರಂದರ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ನಮ್ಮಲ್ಲಿ ಮತೀಯ ಸಾಹಿತ್ಯ ಇರುವಾಗಲೇ ಬ್ರಾಹ್ಮಣೇತರರಿಗೂ ಸಾಧನೆ ಮಾಡಲು ಕಲಿಸಿಕೊಟ್ಟವರು ಹರಿದಾಸರು. ಅಂತಹ ದಾಸ ಸಾಹಿತ್ಯ ಎಲ್ಲರ ಮನೆ, ಮನ ಮುಟ್ಟಿದೆ. ದಾಸ ಸಾಹಿತ್ಯದ ಆಶಯಗಳು ಆಚರಣೆಯಲ್ಲಿ ಬರಬೇಕು, ಇತರರಿಗೂ ತಿಳಿಸುವ ಕಾರ್ಯವಾಗಬೇಕು’ ಎಂದು ತಿಳಿಸಿದರು.
ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ‘ಜಾತಿ ಪದ್ಧತಿ, ಸಮಾಜದಲ್ಲಿನ ಓರೆ-ಕೋರೆಗಳನ್ನು ದಾಸರು ಸಾಹಿತ್ಯದ ಮೂಲಕ ಖಂಡಿಸಿ ಜಾಗೃತಿ ಮೂಡಿಸಿದವರು. ಆದರೆ, ಪ್ರಸ್ತುತ ಇವರನ್ನು ಜಾತಿಗೆ ಸೀಮಿತಗೊಳಿಸಿರುವುದು ದುರಂತ’ ಎಂದರು.
ಕೆಎಂಸಿ–ಆರ್‌ಐ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ‘ಸಮಾಜಕ್ಕೆ ದಾಸರು ನೀಡಿದ ಕೊಡುಗೆಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕು. ಹಲವು ವರ್ಷಗಳಿಂದ ಕನಕ-ಪುರಂದರೋತ್ಸವ ಕಾರ್ಯಕ್ರಮ ಆಯೋಜಿಸುತ್ತಿರುವ ಸಂಯುತಾ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ’ ಎಂದರು.
ಪಂ. ಪಾಂಡುರಂಗಾಚಾರ್ಯ ಹುನಗುಂದ, ಸಂಯುತಾ ಪ್ರತಿಷ್ಠಾನದ ಗೌರವಾಧ್ಯಕ್ಷ ಎ.ಸಿ. ಗೋಪಾಲ, ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ, ಕಾರ್ಯಾಧ್ಯಕ್ಷ ಪಿ.ಎಸ್. ಪರ್ವತಿ, ಭವಾನಿ ನಗರ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಜೆ. ವೇಣುಗೋಪಾಲಾಚಾರ್ಯ, ಮನೋಹರ ಪರ್ವತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.