
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಅವರಿಗೆ ಸನ್ಮಾನಿಸಲಾಯಿತು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಗಣ್ಯರು ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ‘ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಕಂಪನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ, ಹುಬ್ಬಳ್ಳಿ–ಧಾರವಾಡ ಮಹಾನಗರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ಕುರಿತು ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಹುಬ್ಬಳ್ಳಿ ಧಾರವಾಡ ಕೈಗಾರಿಕೋದ್ಯಮಿಗಳ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಮುರಗೇಶ ಆರ್. ನಿರಾಣಿ ಷಷ್ಠಬ್ದಿಪೂರ್ಣ ಸಮಾರಂಭ’ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಪ್ರತಿ ವರ್ಷ ಎಂಜಿನಿಯರಿಂಗ್ ಪೂರ್ಣಗೊಳಿಸಿದ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹೊರಗೆ ಬರುತ್ತಾರೆ. ವೈವಿಧ್ಯಮಯ ಕ್ಷೇತ್ರದ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ನಾನಾ ಬಗೆಯ ವೃತ್ತಿಪರ ಶಿಕ್ಷಣಗಳು ದೊರೆಯುತ್ತಿವೆ. ಆದರೂ, ಹುಬ್ಬಳ್ಳಿ ನಗರ ನಿರೀಕ್ಷಿತ ವೇಗದಲ್ಲಿ ಅಭಿವೃದ್ಧಿ ಆಗುತ್ತಿಲ್ಲ’ ಎಂದರು.
‘ಉದ್ಯಮಿ, ರಾಜಕಾರಣಿ ಅಥವಾ ದೊಡ್ಡ ಸಾಧನೆ ಮಾಡಬೇಕೆಂದರೆ ಗಾಡ್ ಫಾದರ್ ಇರಬೇಕೆಂದಿಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಶ್ರಮದಿಂದ ಗುರಿಯೆಡೆಗೆ ಸಾಗಬೇಕು. ನಮ್ಮವರನ್ನೇ ಆದರ್ಶವನ್ನಾಗಿಟ್ಟುಕೊಂಡು ಜಗದೆತ್ತರಕ್ಕೆ ಬೆಳೆಯಬೇಕು. ಸೋಮಾರಿತನ ಬಿಟ್ಟು ಉದ್ಯಮಿಯಾಗಿ, ಉದ್ಯೋಗ ನೀಡುವ ಕನಸು ಕಾಣಬೇಕು’ ಎಂದು ಹೇಳಿದರು.
‘ನಿರಾಣಿ ಸಕ್ಕರೆ ಕಾರ್ಖಾನೆ ಪ್ರತಿದಿನ ಒಂದು ಲಕ್ಷ ಟನ್ ಸಕ್ಕರೆ ಉತ್ಪಾದಿಸುತ್ತದೆ. 2025/26ರ ಅವಧಿಯಲ್ಲಿ ಒಂದು ಕೋಟಿ ಟನ್ ಕಬ್ಬ ಅರಿಯುವ ಗುರಿ ಇಟ್ಟುಕೊಂಡಿದೆ. ಜಗತ್ತಿನಲ್ಲಿಯೇ ಅತಿಹೆಚ್ಚು ಎಥೆನಾಲ್ ಉತ್ಪಾದಿಸುವ ಕಾರ್ಖಾನೆಯ ಪಟ್ಟಿಲ್ಲಿ ನಾವು ಸ್ಥಾನ ಪಡೆದಿದ್ದು, ಮುಂದಿನ ಎರಡು ವರ್ಷದ ಅವಧಿಯಲ್ಲಿ ಹುಬ್ಬಳ್ಳಿ ಪಕ್ಕದಲ್ಲಿಯೂ ಒಂದು ಕಾರ್ಖಾನೆ ತೆರೆಯಲು ಯೋಜನೆ ರೂಪಿಸಿದ್ದೇವೆ’ ಎಂದರು.
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಅಶೋಕ ಶೆಟ್ಟರ್ ಮಾತನಾಡಿ, ‘ಜೀವನದಲ್ಲಿ ಯಶಸ್ವಿಯಾಗಲು ಅಂಕವೊಂದೇ ಮುಖ್ಯವಲ್ಲ, ಅದು ಒಂದು ಭಾಗವಷ್ಟೇ. ವ್ಯಕ್ತಿತ್ವ ರೂಪಗೊಳ್ಳುವುದು ಶಿಕ್ಷಣದಿಂದಲ್ಲ, ನಮ್ಮ ನಡವಳಿಕೆ ಹಾಗೂ ಮಾತಿನಿಂದ. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು, ಸ್ಥಳೀಯವಾಗಿ ಉದ್ಯಮ ಸ್ಥಾಪಿಸಬೇಕು’ ಎಂದು ಹೇಳಿದರು.
ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಉದ್ಯಮಿಗಳಾದ ನಿಂಗಣ್ಣ ಬಿರಾದಾರ, ಜೆ.ಕೆ. ಆದಪ್ಪಗೌಡರ, ರಮೇಶ ಪಾಟೀಲ, ಜಯಪ್ರಕಾಶ ಟೆಂಗಿನಕಾಯಿ ಪಾಲ್ಗೊಂಡಿದ್ದರು.
ಬೇರೆ ಭಾಗದಿಂದ ಬಂದವರು ಉದ್ಧಾರವಾಗುತ್ತಾರೆ ಎಂದು ಮೂಗು ಮುರಿಯುವುದಕ್ಕಿಂತ ಸ್ವಂತ ಪ್ರತಿಭೆ ಮತ್ತು ಆಸಕ್ತಿಯಿಂದ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಬೇಕು–ಪ್ರೊ. ಅಶೋಕ ಶೆಟ್ಟರ್ ಸಮ ಕುಲಸಚಿವ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ
‘ಸರ್ಕಾರ ಬದಲಾದರೂ ಕೈಗಾರಿಕೋದ್ಯಮದ ನೀತಿ–ನಿಯಮಗಳು ಬದಲಾಗಬಾರದು. ಅವು ಬದಲಾದರೆ ಕೈಗಾರಿಕೆ ಸ್ಥಾಪಿಸುವ ಉದ್ಯಮಿಗಳು ಹಿಂದೇಟು ಹಾಕುತ್ತಾರೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು. ‘ಸರ್ಕಾರ ಅದಲು ಬದಲಾದಂತೆ ನಿಯಮಾವಳಿಗಳು ಬದಲಾಗುತ್ತವೆ ಎನ್ನುವ ಭಾವನೆ ಇತ್ತೀಚಿಗೆ ಉದ್ಯಮಿಗಳಲ್ಲಿ ಬೇರೂರಿದೆ. ಅಭಿವೃದ್ಧಿ ವಿಷಯದಲ್ಲಿ ಎಲ್ಲ ಪಕ್ಷದವರೂ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದರು. ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ ‘ಜನಪ್ರತಿನಿಧಿಗಳು ಸಮಚಿತ್ತದಿಂದ ಒಂದಾಗಿ ಕೆಲಸ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯವಿರಲಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ತರಲು ಪಕ್ಷಭೇದ ಮರೆತು ಕೆಲಸ ಮಾಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.